ಅಯೋಧ್ಯೆ ರಾಮೋತ್ಸವದ ಶುಭ ಘಳಿಗೆಯಲ್ಲೇ ಕೊಳ್ಳೆಗಾಲ ರಾಮಮಂದಿರದ ಶ್ರೀರಾಮನ ಪ್ರತಿಷ್ಠಾಪನೆ
ಚಾಮರಾಜನಗರ, ಜನವರಿ 23: ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಭವ್ಯ ರಾಮಮಂದಿರದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆಯಾದ ಹೊತ್ತಿನಲ್ಲೇ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದ ಶ್ರೀರಾಮಂದಿರದಲ್ಲೂ ರಾಮದೇವರಿಗೆ ಪ್ರಾಣ ಪ್ರತಿಷ್ಠಾಪನೆ ನಡೆದಿದೆ.
ಕರ್ನಾಟಕದ ಜನಪ್ರಿಯ ಉದ್ಯಮಿ ಸುನಿತಾ ತಿಮ್ಮೇಗೌಡ ಅವರ ಸಾರಥ್ಯದಲ್ಲಿ ಕೊಳ್ಳೆಗಾಲದ ಶ್ರೀರಾಮಂದಿರ ದೇವಸ್ಥಾನ ನಿರ್ಮಾಣಗೊಂಡಿದ್ದು, ಅವರೇ ರಾಮನ ಪ್ರಾಣ ಪ್ರತಿಷ್ಠಾಪನೆಯ ನೇತೃತ್ವ ವಹಿಸಿದ್ದರು. ಸೋಮವಾರ ಧಾರ್ಮಿಕ ನಿಷ್ಠೆ ಹಾಗೂ ಹಲವು ವೈದಿಕ ಕಾರ್ಯಕ್ರಮಗಳ ಮೂಲಕ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಿತು.

ಶ್ರೀರಾಮ ದೇವರ ಉತ್ಸವ ಮೂರ್ತಿಯನ್ನು ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ದೇವಸ್ಥಾನದ ಜೀರ್ಣೋದ್ಧಾರ ನಡೆಯುತ್ತಿದ್ದ ಸಂದರ್ಭದಲ್ಲಿ ಮೂರ್ತಿಯನ್ನು ಕೊಳ್ಳೆಗಾಲದ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇಗುಲದಲ್ಲಿಟ್ಟು ಪೂಜೆ ಮಾಡಲಾಗುತ್ತಿತ್ತು.
ಶ್ರೀರಾಮ ಮಂದಿರ ಜೀರ್ಣೋದ್ಧಾರದ ಹಿನ್ನಲೆಯಲ್ಲಿ ದೇವಸ್ಥಾನಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಹೂವುಗಳ ಅಲಂಕಾರದ ಜೊತೆಗೆ ವಿದ್ಯುತ್ ದ್ದೀಪಗಳ ಅಲಂಕಾರವನ್ನು ಮಾಡಲಾಗಿತ್ತು. ಇದೇ ವೇಳೆ ರಾಮದೇವರ ಪೂಜೆಗಳು ಹಾಗೂ ಅನುಷ್ಠಾನಗಳು ನಡೆದವು. ಈ ವೇಳೆ ಸುತ್ತಲಿನ ಸಾವಿರಾರು ಭಕ್ತರು ಹಾಜರಿದ್ದರು.
ಕೊಳ್ಳೆಗಾಲದ ಶ್ರೀರಾಮದೇವರ ದೇಗುಲವನ್ನು ನಿರ್ಮಿಸಿದ್ದು ಸುನಿತಾ ಅವರ ಹಿರಿಕರಾದ ವೆಂಕಟಸ್ವಾಮಿ ಹಾಗೂ ಕೃಷ್ಣಪ್ಪ ಸಹೋದರರು. ಆದರೆ, ದೇವಸ್ಥಾನ ಇನ್ನಷ್ಟು ಅಭಿವೃದ್ಧಿಯಾಗಬೇಕು ಎಂಬುದು ಸುನಿತಾ ಅವರ ತಾಯಿ ಸಾವಿತ್ರಮ್ಮ ತಿಮ್ಮೇಗೌಡ ಅವರ ಕನಸಾಗಿತ್ತು. ಅಂತೆಯೇ ಅವರು ಸ್ಥಳ ಹಾಗೂ ಕೋಟ್ಯಂತರ ರೂಪಾಯಿ ದಾನ ನೀಡಿ ದೇಗುಲದ ಜೀರ್ಣೋದ್ಧಾರ ಕಾರ್ಯಕ್ಕೆ ಮುಂದಾಗಿದ್ದರು.

ಸ್ಥಳೀಯರೂ ಅದಕ್ಕೆ ತಮ್ಮದೇ ಆದ ರೀತಿಯಲ್ಲಿ ನೆರವು ನೀಡಿದ್ದರು. ಆದರೆ ಸಾವಿತ್ರಮ್ಮ ಅವರು ರಾಮನ ದೇಗುಲ ಜೀರ್ಣೋದ್ಧಾರವಾಗುವ ಮೊದಲು ನಿಧನ ಹೊಂದಿದ್ದರು. ಹೀಗಾಗಿ ಸುನಿತಾ ತಿಮ್ಮೇಗೌಡ ಅವರು ರಾಮ ದೇವರನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ತಾಯಿಯ ಆಸೆಯನ್ನು ನೆರವೇರಿಸಿದ್ದಾರೆ.
ಉದ್ಯಮಿ ಸುನಿತಾ ಅವರು ಆರ್ಯ ಈಡಿಗರ ಸಂಘದಲ್ಲೂ ದೊಡ್ಡ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅಂತೆಯೇ ಸ್ಥಳೀಯವಾಗಿ ಹೆಚ್ಚು ಪ್ರಖ್ಯಾತಿ ಪಡೆದಿರುವ ರಾಮದೇವರ ದೇಗುಲದ ಜೀರ್ಣೋದ್ದಾರ ಕಾರ್ಯದಲ್ಲೂ ನೇತೃತ್ವ ವಹಿಸಿದ್ದಾರೆ. ಮುಂದೆ ಇದೇ ಪ್ರದೇಶದಲ್ಲಿ ಚೌಡೇಶ್ವರಿ ದೇಗುಲವನ್ನು ನಿರ್ಮಾಣ ಮಾಡುವುದು ಸುನಿತಾ ಅವರ ಕನಸಾಗಿದೆ.
ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವುದು ನನ್ನ ತಾಯಿಯ ಕನಸು. ಅವರು ಈಗ ನಮ್ಮೊಂದಿಗೆ ಇಲ್ಲ. ಆದರೆ ಮಗಳಾಗಿ ಅವರ ಆಸೆಯನ್ನು ಈಡೇರಿಸುವುದು ನನ್ನ ಕರ್ತವ್ಯ. ದೈವ ನಿಷ್ಠೆ ಹಾಗೂ ತಾಯಿ ಮೇಲಿನ ಪ್ರೀತಿಯಿಂದ ಅದನ್ನು ಮಾಡಿದ್ದೇನೆ. ನನ್ನ ಹಿರಿಕರು ಕಟ್ಟಿದ ದೇಗುಲದಲ್ಲಿ ಶ್ರೀರಾಮ ಪ್ರತಿಷ್ಠಾಪನೆಗೊಳ್ಳುವುದು ನನ್ನ ಜೀವನದ ಸಾರ್ಥಕ ಸಂದರ್ಭ ಎಂದು ಉದ್ಯಮಿ ಸುನಿತಾ ತಿಮ್ಮೇಗೌಡ ಅವರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications