ಚಾಮರಾಜನಗರದ ಈ ಸ್ಥಳದಲ್ಲಿ ಇಂದಿಗೂ ಅಂತ್ಯಕ್ರಿಯೆಯೇ ದೊಡ್ಡ ಸವಾಲ್: ಯಾಕೆ?
ಚಾಮರಾಜನಗರ, ಜನವರಿ 16: ಇವತ್ತಿಗೂ ಕೆಲವು ಸಮುದಾಯದವರಿಗೆ ಸತ್ತಾಗಲೂ ನೆಮ್ಮದಿ ಇಲ್ಲದಂತಾಗಿದೆ. ಏಕೆಂದರೆ ಸತ್ತ ಮೇಲೆ ವ್ಯಕ್ತಿಯನ್ನು ದೇವರೆಂದು ನಮಸ್ಕರಿಸುವ ನಮ್ಮ ಸಮಾಜದಲ್ಲಿ ಅವರ ಅಂತ್ಯಕ್ರಿಯೆಯನ್ನು ನೆಮ್ಮದಿಯಾಗಿ ಮಾಡಲು ಸಾಧ್ಯವಾಗದ ಪರಿಸ್ಥಿತಿ ಬಹಳಷ್ಟು ಕಡೆಯಲ್ಲಿದೆ. ಏಕೆಂದರೆ ಅಂತ್ಯಸಂಸ್ಕಾರ ಮಾಡಲು ಕೆಲವು ಸಮುದಾಯದವರಿಗೆ ಸ್ಮಶಾನವೇ ಇಲ್ಲದಂತಾಗಿದೆ. ಇದಕ್ಕೆ ಕರಿನಂಜನಪುರ ಬಡಾವಣೆಯ ಪರಿಶಿಷ್ಟ ಜಾತಿ ಸಮುದಾಯ ಸಾಕ್ಷಿಯಾಗಿದೆ.
ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡಂತಿರುವ ನಗರಸಭಾ ವ್ಯಾಪ್ತಿಯ ಕರಿನಂಜನಪುರ ಬಡಾವಣೆಯ ಪರಿಶಿಷ್ಟ ಜಾತಿಯ ಸಮುದಾಯಕ್ಕೆ ಶವ ಸಂಸ್ಕಾರ ಮಾಡಲು ಸ್ಥಳವಿಲ್ಲದೇ ಬಡಾವಣೆಯಿಂದ 2 ಕಿ.ಮೀ ದೂರದ ತನಕ ಶವ ಹೊತ್ತು ಸಾಗುವ ಪರಿಸ್ಥಿತಿ ಇಂದಿಗೂ ಇದೆ. ಹೀಗಾಗಿಯೇ ಈ ಸಮುದಾಯಕ್ಕೆ ಕುಟುಂಬ ವರ್ಗದಲ್ಲಿ ಯಾರಾದರೂ ಮೃತಪಟ್ಟರೆ ಅಂತ್ಯ ಸಂಸ್ಕಾರ ನಡೆಸುವುದು ಹೇಗೆ ಎಂಬ ಚಿಂತೆ ಶುರುವಾಗುತ್ತದೆ. ಅಷ್ಟೇ ಅಲ್ಲದೇ, ಶವದ ಸಂಸ್ಕಾರ ನಡೆಸುವುದು ಅವರಿಗೆ ಸವಾಲ್ ಆಗಿ ಪರಿಣಮಿಸುತ್ತದೆ.

ಇವತ್ತು ಜೀವಂತ ಇರುವವರಿಗೆ ಮೂಲ ಸೌಕರ್ಯ ಹೇಗೆ ನೀಡುತ್ತೇವೆಯೋ ಹಾಗೆಯೇ ಆತ ಸತ್ತ ಬಳಿಕ ಅಂತ್ಯಸಂಸ್ಕಾರ ನೆರವೇರಿಸಲು ಸ್ಮಶಾನದ ಅಗತ್ಯವಿದೆ. ಹೀಗಾಗಿ ಸರ್ಕಾರ ಅವರ ಅನುಕೂಲಕ್ಕೆ ತಕ್ಕಂತೆ ಸ್ಮಶಾನದ ವ್ಯವಸ್ಥೆ ಮಾಡುವುದು ಕೂಡ ಬಹುಮುಖ್ಯವಾಗಿದೆ. ಆದರೆ ಕರಿನಂಜನಪುರ ಬಡಾವಣೆಯ ಪರಿಶಿಷ್ಟ ಜಾತಿಯ ಸಮುದಾಯವರಿಗೆ ನಿರ್ದಿಷ್ಟ ಸ್ಮಶಾನವಿಲ್ಲದ ಕಾರಣ ಕರಿನಂಜನಪುರದ ಹೊರ ಭಾಗದಲ್ಲಿರುವ ಸುಮಾರು ಎರಡು ಕಿ.ಮೀ. ದೂರದಲ್ಲಿರುವ ಚಿಕ್ಕಕೆರೆ ಬಳಿಯ ನೀರು ಹರಿಯುವ ಜಾಗದಲ್ಲಿ ಅಂತ್ಯಕ್ರಿಯೆ ಮಾಡಿ ಬರಬೇಕಾಗಿದೆ.
ಬೇಸಿಗೆಯಲ್ಲಿ ತೊಂದರೆಯಾಗದಿದ್ದರೂ ಮಳೆಗಾಲದಲ್ಲಿ ಅಂತ್ಯಕ್ರಿಯೆ ನಡೆಸುವುದು ಸುಲಭದ ಮಾತಲ್ಲ. ಇದೊಂದು ಸವಾಲ್ ಆಗುತ್ತದೆ. ಈ ಸಂಕಷ್ಟ ಇವತ್ತಿನದಲ್ಲ. ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು ಮುಂದುವರೆಯುತ್ತಿದೆ. ಇವತ್ತು ಆಗುತ್ತದೆ ನಾಳೆ ಆಗುತ್ತದೆ ಆಗ ನಮ್ಮ ಸಂಕಷ್ಟ ದೂರ ಸರಿಯಬಹುದು ಎಂದು ಈ ಬಡಾವಣೆಯ ಪ.ಜಾ. ಸಮುದಾಯದವರು ಕಾಯುತ್ತಾ ಬಂದಿದ್ದಾರೆ. ಆದರೆ ಯಾವ ಸರ್ಕಾರಗಳು, ಯಾವ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸದ ಕಾರಣದಿಂದಾಗಿ ಸಮಸ್ಯೆ ಮುಂದುವರೆದುಕೊಂಡೇ ಹೋಗುತ್ತಿದೆ.

ಚಾಮರಾಜನಗರ ನಗರ ಸಭೆಯ ವಾರ್ಡ್ 10ರ ಕರಿನಂಜನಪುರದಲ್ಲಿ 500ಕ್ಕೂ ಹೆಚ್ಚು ಜನ ವಾಸವಿದ್ದು, ಸದರಿ ಸಮುದಾಯವು ಹಲವು ವರ್ಷಗಳಿಂದ ಸ್ಮಶಾನವಿಲ್ಲದೇ ಕರಿನಂಜನಪುರದ ಹೊರ ಭಾಗದಲ್ಲಿರುವ ಚಿಕ್ಕಕೆರೆ ಬಳಿ ನೀರು ಹರಿಯುವ ಜಾಗದ್ದಲ್ಲಿ ಅಂತ್ಯ ಸಂಸ್ಕಾರ ಮಾಡುತ್ತಿರುವ ಶೋಚನೀಯ ಸಂಗತಿಯಾಗಿದೆ ಎಂದು ಇಲ್ಲಿನವರು ಬೇಸರ ವ್ಯಕ್ತಪಡಿಸುತ್ತಾರೆ.
ಹಾಗೆಯೇ ಸಮುದಾಯದ ಜನತೆ ಕರಿನಂಜನಪುರದ ಬಡಾವಣೆಯಿಂದ ಸುಮಾರು ಎರಡು ಕಿಲೋಮೀಟರ್ ವರೆಗೆ ಶವವನ್ನು ಹೊತ್ತು ಚಿಕ್ಕ ಕೆರೆಯ ಬಳಿ ಹರಿಯುವ ನೀರಿನ ಬಳಿ ಅಂತ್ಯಸಂಸ್ಕಾರ ಮಾಡುವ ಸಂಕಷ್ಟದಿಂದ ಪಾರು ಮಾಡುವಂತೆ ಬಡಾವಣೆಯ ನಿವಾಸಿಗಳು ಒತ್ತಾಯಿಸುತ್ತಲೇ ಬರುತ್ತಿದ್ದಾರೆ.
ಪರಿಶಿಷ್ಟರ ಏಳಿಗೆಗಾಗಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಸಹ ಸಂವಿಧಾನಾತ್ಮಕವಾಗಿ ಪರಿಶಿಷ್ಟರ ಸಮುದಾಯಕ್ಕೆ ಜಿಲ್ಲಾ ಕೇಂದ್ರದಲ್ಲಿ ಸ್ಮಶಾನ ಇಲ್ಲದಿರುವುದು ವಿಪರ್ಯಾಸದ ಸಂಗತಿ. ಇನ್ನಾದರೂ ಇಲ್ಲಿನ ಜನಪ್ರತಿನಿಧಿಗಳು ಈ ಬಗ್ಗೆ ಸರ್ಕಾರದ ಗಮನ ಸೆಳೆದು ಈ ಸಮುದಾಯಕ್ಕೆ ಅನುಕೂಲವಾಗುವಂತೆ ಸ್ಮಶಾನವನ್ನು ನಿರ್ಮಿಸಿಕೊಡುತ್ತಾರಾ? ಎನ್ನುವುದನ್ನು ಕಾದು ನೋಡಬೇಕಿದೆ. ಒಂದು ವೇಳೆ ಸ್ಮಶಾನ ನಿರ್ಮಿಸಿಕೊಟ್ಟರೆ ಅದಕ್ಕಿಂತ ದೊಡ್ಡ ಉಪಕಾರ ಬೇರೊಂದಿಲ್ಲ. ಅದು ಯಾವಾಗ ಸಾಧ್ಯವಾಗಬಹುದೋ? ಎಂಬುದೇ ಪ್ರಶ್ನೆಯಾಗಿ ಉಳಿದಿದೆ.












Click it and Unblock the Notifications