ಚಾಮರಾಜನಗರ: 71 ಚಿನ್ನದ ಪದಕಕ್ಕೆ ಕಾರಣವಾಯ್ತು ಚಿಕ್ಕಂದಿನಲ್ಲಿ ಗನ್ ಇಟ್ಟುಕೊಳ್ಳಬೇಕೆಂಬ ಈತನ ಆಸೆ
ಚಾಮರಾಜನಗರ, ನವೆಂಬರ್, 27: ಚಿಕ್ಕಂದಿನಲ್ಲಿ ತಾನು ಗನ್ ಇಟ್ಟುಕೊಳ್ಳಬೇಕೆಂಬ ಆಸೆ ಕೊನೆಗೇ 71 ಚಿನ್ನದ ಪದಕ, 20 ರಜತ ಪದಕ ಸೇರಿದಂತೆ 106 ಪದಕ, ಪ್ರಶಸ್ತಿಗೆ ಕಾರಣವಾಗಿದೆ ಎಂದರೆ ನೀವು ನಂಬಲೇಬೇಕು. ಇಲ್ಲಿದೆ ನೋಡಿ ಸಂಪೂರ್ಣ ವಿವರ.
ಹೌದು, ಕಳೆದ ಭಾನುವಾರ ಕೊಡಗಿನಲ್ಲಿ ನಡೆದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ಏರ್ ಗನ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ ಚಾಮರಾಜನಗರದ ರಮೇಶ್ ಬಾಬು ಅವರ ಶೂಟಿಂಗ್ ಕಹಾನಿ ಎಲ್ಲರಿಗೂ ಪ್ರೇರಣೆಯಾಗಿದೆ. ಚಿಕ್ಕಂದಿನಲ್ಲಿ ಒಲಂಪಿಕ್ ಸೇರಿದಂತೆ ವಿವಿಧೆಡೆ ರೈಫಲ್ ಶೂಟಿಂಗ್‌ಗಳನ್ನು ನೋಡಿ ಆಕರ್ಷಿತರಾದ ಚಾಮರಾಜನಗರದ ಉದ್ಯಮಿ ರಮೇಶ್ ಬಾಬು ಎಂಬುವವರು ತಮ್ಮ ಆಸೆಗೆ 2014ರಿಂದ ನೀರೆರೆದು ಕಲಿತು ಈಗ 106 ಪದಕಗಳನ್ನು ಜಯಿಸುವ ಮೂಲಕ ಗಮನ ಸೆಳೆದಿದ್ದಾರೆ.

ಕಳೆದ ಭಾನುವಾರ ಕೊಡಗು ಜಿಲ್ಲೆಯ ಗೋಣಿಕೊಪ್ಪದಲ್ಲಿ ಬೊಡಿನಮ್ಮೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ರಮೇಶ್ ಬಾಬು ಭಾಗವಹಿಸಿ 12ನೇ ಬೋರ್ ವಿಭಾಗದಲ್ಲಿ ಪ್ರಥಮ ಸ್ಥಾನ, ಏರ್ ಗನ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರು ಎಲೆಕ್ಟ್ರಾನಿಕ್ ಉದ್ಯಮ ನಡೆಸುತ್ತಿದ್ದರೂ, ಚಿಕ್ಕಂದಿನ ಆಸೆಗೆ ನೀರೆರೆದು ಹವ್ಯಾಸಿ ರೈಫಲ್ ಶೂಟರ್ ಆಗಿದ್ದಾರೆ.
ಈ ಹಿಂದೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಏರ್‌ರೈಫಲ್ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ, ಬೆಳ್ಳಿಪದಕ, ಕಂಚಿನ ಪದಕಗಳನ್ನು ಪಡೆದಿಕೊಂಡಿದ್ದಾರೆ. ಅಂದಹಾಹೆ ಕಳೆದ 10 ವರ್ಷಗಳಲ್ಲಿ ಇವರು 71 ಚಿನ್ನದ ಪದಕ, 20 ರಜತ ಪದಕ ಪಡೆದಿರವುದು ಇವರ ಕಠಿಣ ಪರಿಶ್ರಮಕ್ಕೆ ಸಾಕ್ಷಿಯಾಗಿದೆ.
ಚಾಮರಾಜನಗರ ಮಹಿಳೆಯನ್ನು ಹಾಡಿ ಹೊಗಳಿದ ಪ್ರಧಾನಿ
ಇನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿಕೊಡುವ ಮನ್ ಕಿ ಬಾತ್‌ನಲ್ಲಿ ತ್ಯಾಜ್ಯದಿಂದ ಕರಕುಶಲ ವಸ್ತುಗಳನ್ನು ತಯಾರಿಸುವ ಚಾಮರಾಜನಗರ ಮಹಿಳೆ ಕಾರ್ಯವನ್ನು ಹಾಡಿ ಹೊಗಳಿದ್ದಾರೆ.
ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದ ವರ್ಷಾ ಎಂಬುವವರ ಕರಕುಶಲ ಕಲೆಯ ಬಗ್ಗೆ ಪ್ರಧಾನಿ ಮೋದಿ ಇಂದು ಪ್ರಸ್ತಾಪಿಸಿ ವೋಕಲ್ ಫಾರ್ ಲೋಕಲ್ ಮಹತ್ವವನ್ನು ಸಾರಿದ್ದಾರೆ. ಮನ್ ಕಿ ಬಾತ್‌ನಿಂದ ಪ್ರೇರೇಪಣೆಗೊಂಡಿರುವ ವರ್ಷಾ ಅವರು, ಕರಕುಶಲ ಉದ್ಯಮ ಆರಂಭಿಸಿ, ಬಾಳೆಗಿಡದ ನಾರಿನಿಂದ ಕರಕುಶಲ ವಸ್ತುಗಳ ತಯಾರಿಸುತ್ತಿದ್ದಾರೆ. ಬಾಳೆ ದಿಂಡಿನಿಂದ ಉಪ್ಪಿನಕಾಯಿ, ಚಟ್ನಿಪುಡಿ ಸೇರಿದಂತೆ ವಿವಿಧ ತಿನಿಸು ತಯಾರಿಸುವ ಜೊತೆಗೆ ಐವರು ಮಹಿಳೆಯರು, ಇಬ್ಬರು ಪುರುಷರಿಗೆ ನೌಕರಿ ಕೊಟ್ಟಿದ್ದಾರೆ.
ವೋಕಲ್ ಫಾರ್ ಲೋಕಲ್‌ನಿಂದ ಇದೆಲ್ಲವೂ ಸಾಧ್ಯವಾಗಿದೆ ಎಂದು ಪ್ರಧಾನಿ ತಮ್ಮ ರೇಡಿಯೋ ಭಾಷಣದಲ್ಲಿ ಹೇಳಿದ್ದಾರೆ. ಈ ಸಂಬಂಧ ವರ್ಷಾ ಪ್ರತಿಕ್ರಿಯೆ ನೀಡಿದ್ದು, ಚಾಮರಾಜನಗರದ ಉಮ್ಮತ್ತೂರಿನಲ್ಲಿ ನಾನು ಮಾಡುವ ಕೆಲಸವನ್ನು ಮೋದಿ ಅವರು ಗುರುತಿಸಿ ಪ್ರಸ್ತಾಪಿಸಿದ್ದು ಹೆಮ್ಮೆ ಎನಿಸುತ್ತದೆ ಎಂದರು.
ನಾನು ಎಂಟೆಕ್ ಪದವೀಧರಳಾಗಿದ್ದು ಮನ್ ಕಿ ಬಾತ್‌ನಿಂದ ಪ್ರೇರಣೆ ಪಡೆದು ಬಾಳೆ ನಾರು ಹಾಗೂ ದಿಂಡಿನಿಂದ ವಿವಿಧ ವಸ್ತುಗಳನ್ನು ತಯಾರಿಸಲು ಆರಂಭಿಸಿದೆ. ಮೇಳಗಳು, ಆನ್‌ಲೈನ್ ಮಳಿಗೆ, ಸಾವಯವ ಮಳಿಗೆಗಳಲ್ಲಿ ನಮ್ಕ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.












Click it and Unblock the Notifications