ಸಿ.ಪುಟ್ಟರಂಗಶೆಟ್ಟಿ ಉಪಸಭಾಪತಿ ಹುದ್ದೆ ತಿರಸ್ಕರಿಸಿದ್ದು ಏಕೆ? ಅಸಲಿ ಕಾರಣ ಇಲ್ಲಿದೆ
ಚಾಮರಾಜನಗರ, ಮೇ, 28: ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯ ಸಂಪುದಲ್ಲಿ ಸಚಿವರಾಗಿ 24 ಜನ ಪ್ರಮಾಣ ವಚನ ಸ್ವೀಕರಿಸಿದ್ದು, ಮತ್ತೊಂದೆ ಸಚಿವ ಸ್ಥಾನ ಸಿಗದಿದ್ದಕ್ಕೆ ಈಗಾಗಲೇ ಕಾಂಗ್ರೆಸ್‌ನಲ್ಲಿ ಹಲವರು ಮುನಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಅದರ ಬೆನ್ನಲ್ಲೇ ಅಸಮಾಧಾನಗೊಂಡಿದ್ದ ಸಿ.ಪುಟ್ಟರಂಗಶೆಟ್ಟಿಗೆ ಉಪಸಭಾಧ್ಯಕ್ಷ ಹುದ್ದೆಯನ್ನು ನೀಡಲಾಗಿತ್ತು. ಆದರೆ ಇದೀಗ ಅವರು ನನಗೆ ಈ ಹುದ್ದೆ ಬೇಡ ಎಂದು ತಿಸ್ಕರಿಸಿದ್ದಾರೆ.
ಡೆಪ್ಯುಟಿ ಸ್ಪೀಕರ್ ಸ್ಥಾನ ನನಗೆ ಬೇಡ, ಶಾಸಕನಾಗಿಯೇ ಮುಂದುವರಿಯುತ್ತೇನೆ ಎನ್ನುವ ಮೂಲಕ ಶಾಸಕ ಸಿ.ಪುಟ್ಟರಂಗಶೆಟ್ಟಿ ಡೆಪ್ಯುಟಿ ಸ್ಪೀಕರ್ ಹುದ್ದೆಯನ್ನು ತಿರಸ್ಕರಿಸಿದ್ದಾರೆ.

ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಪುಟ್ಟರಂಗಶೆಟ್ಟಿ, ಈ ಮೊದಲು ನನಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಕೈ ತಪ್ಪಿದೆ. ಇದಕ್ಕೆ ಕಾರಣ ಏನೆಂದು ಗೊತ್ತಿಲ್ಲ. ಸಚಿವ ಸ್ಥಾನ ನೀಡದ ಹಿನ್ನೆಲೆ ಕಾಂಗ್ರೆಸ್ ಹೈಕಮಾಂಡ್ ಡೆಪ್ಯುಟಿ ಸ್ಪೀಕರ್ ಸ್ಥಾನ ನೀಡಿದೆ. ಆ ಹುದ್ದೆ ನನಗೆ ಬೇಡ. ಡೆಪ್ಯುಟಿ ಸ್ಪೀಕರ್ ಸ್ಥಾನ ಕಾರ್ಯಭಾರದ ಒತ್ತಡದಿಂದ ಕ್ಷೇತ್ರದ ಕೆಲಸ ಮಾಡಲು ಕಷ್ಟವಾಗುತ್ತದೆ ಎಂದರು.
ಡೆಪ್ಯುಟಿ ಸ್ಪೀಕರ್ ಆದರೆ ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಲು ಆಗುವುದಿಲ್ಲ. ಆದ್ದರಿಂದ ಡೆಪ್ಯುಟಿ ಸ್ಪೀಕರ್ ಸ್ಥಾನ ಬೇಡ ಎಂಬುದು ಕ್ಷೇತ್ರದ ಮತದಾರರು ಹಾಗೂ ಬೆಂಬಲಿಗರ ಒತ್ತಾಯ ಆಗಿದೆ. ನಾನು ಉಪ್ಪಾರ ಸಮಾಜದ ಏಕೈಕ ಶಾಸಕ. ಯಾವಾಗಲೂ ಜನರ ಜೊತೆ ಬೆರೆತು ಕೆಲಸ ಮಾಡುವವನು ಆಗಿದ್ದೇನೆ. ಡೆಪ್ಯುಟಿ ಸ್ಪೀಕರ್ ಸ್ಥಾನ ಒಪ್ಪಿಕೊಳ್ಳುವಂತೆ ಸಿದ್ದರಾಮಯ್ಯ ಹಾಗೂ ಜಮೀರ್ ಅಹಮ್ಮದ್ ನನಗೆ ಒತ್ತಾಯಿಸಿದ್ದರು. ಆದರೆ ನಾನು ನಯವಾಗಿಯೇ ಆ ಹುದ್ದೆಯನ್ನು ತಿರಸ್ಕರಿಸಿದೆ ಎಂದರು.
ಯಾವ ಸಮುದಾಯದವರಿಗೆ ಹೆಚ್ಚಿನ ಆದ್ಯತೆ?
ಹೀಗೆ ಮುಸ್ಲಿಂ ಸಮುದಾಯದಿಂದ ಇಬ್ಬರು ಸಚಿವ ಸ್ಥಾನ ಮುಸ್ಲಿಂ ಸಮುದಾಯದಿಂದ ಜಮೀರ್ ಅಹಮದ್ ಖಾನ್, ರಹೀಂ ಖಾನ್ ಇಬ್ಬರು ಸಚಿವರಾಗಿದ್ದರೆ, ಮತ್ತೊಂದೆಡೆ ಯು.ಟಿ.ಖಾದರ್ ಸ್ಪೀಕರ್ ಆಗಿದ್ದಾರೆ. ಕ್ರೈಸ್ತ ಸಮುದಾಯದಿಂದ ಕೆ.ಜೆ.ಜಾರ್ಜ್ ಅವರಿಗೆ ಸಚಿವ ಸ್ಥಾನ ಒಲಿದಿದೆ. ಜೈನ ಸಮುದಾಯದಿಂದ ಡಿ.ಸುಧಾಕರ್ ಹಾಗೂ ಬ್ರಾಹ್ಮಣ ಸಮುದಾಯದ ಪ್ರತಿನಿಧಿಯಾಗಿ ದಿನೇಶ್ ಗುಂಡೂರಾವ್ ಅವರಿಗೆ ಸಚಿವ ಸ್ಥಾನ ದೊರಕಿದೆ.
ಇನ್ನು ಒಕ್ಕಲಿಗರಲ್ಲಿ ಐದು ಜನರಿಗೆ ಸಚಿವ ಸ್ಥಾನ ಒಕ್ಕಲಿಗರಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಚೆಲುವರಾಯಸ್ವಾಮಿ, ಪಿರಿಯಾಪಟ್ಟಣ ವೆಂಕಟೇಶ್, ಎಂ.ಸಿ.ಸುಧಾಕರ್, ಕೃಷ್ಣಬೈರೇಗೌಡ ಸೇರಿ ಐದು ಮಂದಿಗೆ ಪ್ರಾತಿನಿಧ್ಯ ದೊರೆತಿದೆ.
ದಲಿತ ಸಮುದಾಯಕ್ಕೆ 9 ಸಚಿವ ಸ್ಥಾನ ಲಭಿಸಿದ್ದು, ಮುನಿಯಪ್ಪ, ಜಿ.ಪರಮೇಶ್ವರ್, ಎಚ್.ಸಿ.ಮಹದೇವಪ್ಪ, ಆರ್.ಬಿ. ತಿಮ್ಮಾಪುರ ಮತ್ತು ಪ್ರಿಯಾಂಕ್ ಖರ್ಗೆ ಅವರುಗಳು ಪರಿಶಿಷ್ಟ ಜಾತಿ ಖೋಟಾದಲ್ಲಿ ಸಚಿವರಾಗಿದ್ದಾರೆ. ಈ ಮೂಲಕ ಎಡಗೈ ಮತ್ತು ಬಲಗೈ ಸಮುದಾಯಗಳನ್ನು ಸರಿದೂಗಿಸಲಾಗಿದೆ. ಪರಿಶಿಷ್ಟ ಪಂಗಡದ ಪ್ರತಿನಿಧಿಗಳಾಗಿ ನಾಗೇಂದ್ರ, ಮಧುಗಿರಿ ರಾಜಣ್ಣ, ಸತೀಶ್ ಜಾರಕಿಹೊಳಿ ಅವರಿಗೆ ಅವಕಾಶ ದೊರೆತಿದೆ.
ಹಿಂದುಳಿದ ಜಾತಿಗಳಲ್ಲಿ ಅತ್ಯಂತ ಸಣ್ಣ ಸಮುದಾಯ ರಾಜು ಕ್ಷತ್ರಿಯ ಸಮುದಾಯದ ಬೋಸರಾಜು, ಅತ್ಯಂತ ಸಣ್ಣ ಹಿಂದುಳಿದ ಸಮುದಾಯಗಳಲ್ಲಿ ಒಂದಾದ ಬೆಸ್ತ ಸಮುದಾಯದ ಮಾಂಕಾಳ ವೈದ್ಯ, ಮರಾಠ ಸಮಾಜದಿಂದ ಸಂತೋಷ್ ಲಾಡ್ ಇದ್ದಾರೆ. ಕುರುಬ ಸಮುದಾಯದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಟ್ಟರೆ ಬೈರತಿ ಸುರೇಶ್ ಅವರಿಗೆ ಮಾತ್ರ ಸಂಪುಟದೊಳಗೆ ಪ್ರವೇಶ ದೊರೆತಿದೆ.
ಬಿಲ್ಲವ (ಈಡಿಗ) ಸಮುದಾಯದಿಂದ ಮಧು ಬಂಗಾರಪ್ಪ ಇದ್ದಾರೆ. ರಜಪೂತ ಸಮುದಾಯದ ಅಜಯ್ ಸಿಂಗ್ ಅವರು ಮುಖ್ಯ ಸಚೇತಕರಾಗಿರುವುದರಿಂದ ಕಡೆ ಗಳಿಗೆಯ ಒತ್ತಡದಲ್ಲಿ ಸಚಿವ ಸ್ಥಾನ ಕೈ ತಪ್ಪಿದೆ. ವಿಧಾನ ಪರಿಷತ್ ಮುಖ್ಯ ಸಚೇತಕರಾಗಿರುವ ಬಂಜಾರ ಸಮುದಾಯದ ಪ್ರಕಾಶ್ ರಾಥೋಡ್ ಅವರಿಗೂ ಈಗಾಗಲೇ ಒಂದು ಜವಾಬ್ದಾರಿ ಇರುವ ಕಾರಣಕ್ಕೆ ಸಚಿವ ಸ್ಥಾನ ದೊರಕಿಲ್ಲ.
ಲಿಂಗಾಯತ ಸಮುದಾಯದ 8 ಜನರಿಗೆ ಸಚಿವ ಸ್ಥಾನ ಸಿದ್ದರಾಮಯ್ಯ ಸಂಪುಟದಲ್ಲಿ ಲಿಂಗಾಯತ ಸಮುದಾಯಕ್ಕೆ ಒಟ್ಟು ಎಂಟು ಸಚಿವ ಸ್ಥಾನ ನೀಡಲಾಗಿದ್ದು, ಈ ಸಮುದಾಯದ ಬಹುತೇಕ ಎಲ್ಲಾ ಪ್ರಮುಖ ಒಳಪಂಗಡಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಈಶ್ವರ್ ಖಂಡ್ರೆ, ಲಕ್ಷ್ಮೀ ಹೆಬ್ಬಾಳ್‌ಕರ್ ಮತ್ತು ಶಿವಾನಂದ ಪಾಟೀಲ್, ಎಂ.ಬಿ.ಪಾಟೀಲ್, ಎಸ್.ಎಸ್.ಮಲ್ಲಿಕಾರ್ಜುನ್, ಶರಣ ಪ್ರಕಾಶ ಪಾಟೀಲ್, ದರ್ಶನಾಪುರ, ಹೆಚ್.ಕೆ.ಪಾಟೀಲ್ ಅವರು ನಾಮಧಾರಿ ರೆಡ್ಡಿ ಖೋಟಾದಲ್ಲಿ ಸಚಿವರಾಗಿದ್ದಾರೆ.












Click it and Unblock the Notifications