ಸುಖಾಂತ್ಯಗೊಂಡ ಬೊಮ್ಮಲಾಪುರ ಬಹಿಷ್ಕಾರ ಪ್ರಕರಣ

By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಗುಂಡ್ಲುಪೇಟೆ, ಜೂನ್ 17: ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ಬಿಜೆಪಿಗೆ ಮತ ಹಾಕಿದರು ಎಂಬ ಕಾರಣದಿಂದ 25 ಕುಟುಂಬಕ್ಕೆ ಹಾಕಿದ್ದ ಸಾಮಾಜಿಕ ಬಹಿಷ್ಕಾರ ಪ್ರಕರಣ ಸಂಬಂಧ ಜಿಲ್ಲಾಡಳಿತ ಹಾಗೂ ಮುಖಂಡರು ಸೇರಿ ಶಾಂತಿ ಸಭೆ ನಡೆಸಿದ ಪರಿಣಾಮವಾಗಿ ಸುಖಾಂತ್ಯ ಕಂಡಿದೆ.

ಗ್ರಾಮದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಜಿ.ಪಂ ಅಧ್ಯಕ್ಷ ಎಂ.ರಾಮಚಂದ್ರ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಸಲಾಯಿತು. ಎಎಸ್ ಪಿ ಗೀತಾ ಪ್ರಸನ್ನ, ಡಿವೈಎಸ್ ಪಿ ಎಸ್.ಇ.ಗಂಗಾಧರಸ್ವಾಮಿ, ಎರಡೂ ಗುಂಪುಗಳ ಮುಖಂಡರು ಹಾಗೂ ಪ್ರಮುಖ ನಾಯಕರು ಸಭೆ ಸೇರಿ, ಮಾತುಕತೆ ನಡೆಸಿದರು.

ಮಹಿಳಾ ಆಯೋಗದ ಅಧ್ಯಕ್ಷೆ ಎದುರೇ ಗಲಾಟೆ, ಬೊಮ್ಮಲಾಪುರ ಉದ್ವಿಗ್ನ

ಸುಮಾರು ಎರಡು ಗಂಟೆ ಕಾಲ ನಡೆದ ಸಭೆಯಲ್ಲಿ ಎಲ್ಲರೂ ಒಟ್ಟಾಗಿ ಶಾಂತಿಯಿಂದ ಸಹಬಾಳ್ವೆ ನಡೆಸುವ ತೀರ್ಮಾನಕ್ಕೆ ಬರಲಾಯಿತು. ನಂತರ ಎರಡೂ ಗುಂಪುಗಳ ಸದಸ್ಯರನ್ನು ಹಸ್ತಲಾಘವ ಮಾಡಿಸುವ ಮೂಲಕ ರಾಜೀ ಮಾಡಿಸಲಾಯಿತು.

Bommalapura

ಈ ಸಂದರ್ಭದಲ್ಲಿ ಜಿ.ಪಂ. ಅಧ್ಯಕ್ಷ ಎಂ.ರಾಮಚಂದ್ರು ಹಾಗೂ ಎಎಸ್ ಪಿ ಗೀತಾ ಪ್ರಸನ್ನ ಮಾತನಾಡಿ, ಎರಡೂ ಗುಂಪುಗಳ ಸದಸ್ಯರಿಗೆ ಸಾಮಾಜಿಕ ಬಹಿಷ್ಕಾರದ ಹಾಗೂ ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುತ್ತಿರುವ ಬಗ್ಗೆ ತಿಳಿವಳಿಕೆ ಮೂಡಿಸಲಾಯಿತು.

ಪರಸ್ಪರರ ಭಿನ್ನಾಭಿಪ್ರಾಯಗಳನ್ನು ನಿವಾರಿಸಿದ ನಂತರ ಮುಕ್ತ ಮನಸ್ಸಿನಿಂದ ತಮ್ಮ ಭಾವನೆಗಳನ್ನು ಹೊರಹಾಕಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸುವ ಹಾಗೂ ಬಹಿಷ್ಕಾರಕ್ಕೊಳಗಾಗಿದ್ದವರನ್ನು ದೂರವಿಡದೆ ಹಿಂದಿನಂತೆಯೇ ಎಲ್ಲ ಕಾರ್ಯಕ್ರಮಗಳಿಗೂ ಆಹ್ವಾನಿಸುವುದಾಗಿ ಜನಾಂಗದ ಮುಖಂಡರು ಭರವಸೆ ನೀಡಿದ್ದಾರೆ. ಇದರಿಂದ ಗ್ರಾಮದಲ್ಲಿ ಉಂಟಾಗಿದ್ದ ಪ್ರಕ್ಷುಬ್ದ ಪರಿಸ್ಥಿತಿ ನಿವಾರಣೆಯಾಗಿದೆ ಎಂದರು.

ಗುಂಡ್ಲುಪೇಟೆಯಲ್ಲಿ ಬಿಜೆಪಿಗೆ ಮತ ಹಾಕಿದ್ದಕ್ಕೆ 25 ಕುಟುಂಬಗಳಿಗೆ ಬಹಿಷ್ಕಾರ

ಬಹಿಷ್ಕಾರ ಪ್ರಕರಣವನ್ನು ಬಹಿರಂಗಪಡಿಸಿದ್ದ ಗ್ರಾ.ಪಂ ಮಾಜಿ ಸದಸ್ಯ ರಾಜೇಶ್ ಮಾತನಾಡಿ, ಜನಾಂಗದ ಮುಖಂಡರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ನಮಗೆ ಸಮಾಧಾನಕರ ತೀರ್ಮಾನ ದೊರಕಿದ್ದು, ಹಿಂದಿನಂತೆಯೇ ಗ್ರಾಮದಲ್ಲಿ ಎಲ್ಲರಿಗೂ ಒಗ್ಗಟ್ಟಾಗಿ ಸಾಗುವ ಭರವಸೆ ದೊರಕಿದೆ. ಇಂಥ ಸಮಸ್ಯೆಗಳು ಎದುರಾದಾಗ ಮುಖಂಡರ ಗಮನಕ್ಕೆ ತಂದು, ಮಾತುಕತೆ ನಡೆಸುವ ಮೂಲಕ ಬಗೆಹರಿಸಿಕೊಳ್ಳುತ್ತೇವೆ ಎಂದರು.

ಈ ಸಂದರ್ಭದಲ್ಲಿ ಸರ್ಕಲ್ ಇನ್ ಸ್ಪೆಕ್ಟರ್ ಕೆ.ವಿ.ಕೃಷ್ಣಪ್ಪ, ತಹಸೀಲ್ದಾರ್ ಕೆ.ಸಿದ್ದು, ತಾಪಂ ಇಒ ಪುಷ್ಪಾ ಎಂ.ಕಮ್ಮಾರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಎಚ್.ಎಸ್.ಬಿಂದ್ಯಾ, ಪುರಸಭೆ ಸದಸ್ಯರಾದ ಸುರೇಶ್, ಪಿ.ಗಿರೀಶ್, ಗ್ರಾಪಂ ಮಾಜಿ ಅಧ್ಯಕ್ಷ ವಿಶ್ವನಾಥ್, ಗ್ರಾಮದ ಮುಖಂಡರು ಹಾಗೂ ಸಾರ್ವಜನಿಕರು ಹಾಜರಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bommalapura issue in Chamarajanagar district solved amicably on Saturday.
Please Wait while comments are loading...