ಕೆಲಸ ಮಾಡುವ ತಾಕತ್ ಇರುವುದು ಬಿಜೆಪಿಗೆ ಮಾತ್ರ: ಅಣ್ಣಾಮಲೈ
ಚಾಮರಾಜನಗರ , ಮಾರ್ಚ್ 31: ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ, ರಾಜ್ಯದ ಮೂಲೆ ಮೂಲೆಯಲ್ಲಿ ಬಿಜೆಪಿ ಭರ್ಜರಿ ಪ್ರಚಾರ ನಡೆಸಿದೆ. ಈ ಬಾರಿಯ ಚುನಾವಣೆಯಲ್ಲಿ ಬಹುಮತದೊಂದಿಗೆ ಗೆಲುವು ಸಾಧಿಸುವ ಗುರಿ ಹೊಂದಿರುವ ಬಿಜೆಪಿ ಎಲ್ಲೆಡೆ ಪಕ್ಷ ಸಂಘಟನೆ ಮೂಲಕ ಮತದಾರರನ್ನು ಸೆಳೆಯುತ್ತಿದೆ.
ಈ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಒಬಿಸಿ ಸಮಾವೇಶ ಶುಕ್ರವಾರ ನಡೆದಿದೆ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಜೆಪಿ ರಾಜ್ಯ ಚುನಾವಣಾ ಸಹ ಉಸ್ತುವಾರಿ ಕೆ.ಅಣ್ಣಾಮಲೈ, ದೇಶದಲ್ಲಿ ಕೆಲಸ ಮಾಡುವ ತಾಕತ್ ಇರುವುದು ಬಿಜೆಪಿ ಪಕ್ಷಕಷ್ಟೇ, ಅದು ಕಾಂಗ್ರೆಸ್‌ಗಿಲ್ಲ. ಬಿಜೆಪಿಗಷ್ಟೇ ಜನರ ಕೆಲಸ ಮಾಡುವ ತಾಕತ್ ಇದೆ ಎಂದು ಹೇಳಿದರು.

ಕಾಂಗ್ರೆಸ್ ಒಂದು ಪರಿವಾರದ ಪಕ್ಷ. ನಮ್ಮದು ಜನರ ಪಕ್ಷ. ಇದು ನಮಗೂ ಅವರಿಗೂ ಇರುವ ವ್ಯತ್ಯಾಸ. ಕರ್ನಾಟಕ ಕಾಂಗ್ರೆಸ್ ಇರುವುದು ಗಾಂಧಿ ಕುಟುಂಬದ ಸೇವೆ ಮಾಡಲು, ಗಾಂಧಿ ಪರಿವಾರದ ಕೆಲಸ ಮಾಡಲಷ್ಟೇ ಇಲ್ಲಿನ ನಾಯಕರಿದ್ದಾರೆ. ಅವರು ಒಂದೊಂದು ಸಾರಿ ಅಧಿಕಾರಕ್ಕೆ ಬಂದಾಗಲೂ ಗಾಂಧಿ ಕುಟುಂಬವನ್ನು ಹೇಗೆ ಖುಷಿಪಡಿಸಬೇಕೆಂದು ಯೋಚನೆ ಮಾಡುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಮಾತು ಮುಂದುವರಿಸಿದ ಅಣ್ಣಾಮಲೈ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆ ಕೆಲಸ ಮಾಡುತ್ತೇವೆ, ಈ ಕೆಲಸ ಮಾಡುತ್ತೇವೆ ಎನ್ನುತ್ತಾರೆ, 70 ವರ್ಷದಲ್ಲಿ 60 ವರ್ಷ ಆಡಲು ಆಡಳಿತ ನಡೆಸಿದ್ದಾರೆ, ಸಿದ್ದರಾಮಯ್ಯ- ಡಿ.ಕೆ ಶಿವಕುಮಾರ್ ನಿನ್ನೆ ಮೊನ್ನೆ ರಾಜ್ಯಕ್ಕೆ ಬಂದವರಲ್ಲ, ಅಧಿಕಾರ ಅನುಭವಿಸಿದ್ದಾರೆ..? ಏನು ಮಾಡಿದ್ದಾರೆ ಎಂದು ಹೇಳಲಿ. ಅವರು ಮೈಕ್ ಬಳಸುವುದು ಕೇವಲ ಬಿಜೆಪಿ ವಿರುದ್ಧ ಟೀಕೆ ಮಾಡಲೇ ಹೊರತು ಅಭಿವೃದ್ಧಿ ಬಗ್ಗೆ ಮಾತನಾಡಲು ಅಲ್ಲ ಎಂದು ಕಿಡಿಕಾರಿದರು.
ಮೀಸಲಾತಿ ವಿಚಾರವನ್ನು ಯಾರು ಮುಟ್ಟುತ್ತಿರಲಿಲ್ಲ, ಆದರೆ ಬಿಜೆಪಿ ಸರ್ಕಾರ ಬಂದ ಬಳಿಕ ಮೀಸಲಾತಿಯನ್ನು ಬದಲಿಸಿದ್ದೇವೆ. ಒಳ ಮೀಸಲಾತಿ ಕೊಟ್ಟಿದ್ದೇವೆ. ಜನರ ಮತ ಬೇಕಿತ್ತು. ಆದರೆ ಅವರ ಅಭಿವೃದ್ಧಿ ಬೇಕಿರಲಿಲ್ಲ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನಪರವಾಗಿ ಮೀಸಲಾತಿ ತಂದಿದ್ದಾರೆ, ಇದು ಕೇವಲ ಟ್ರೈಲರ್ ಅಷ್ಟೇ ಬದಲಾಯಿಸಬೇಕಾಗಿರುವುದು ಬಹಳಷ್ಟಿದೆ ಎಂದರು.

ನಾವು ಎಲ್ಲಾ ಕೆಲಸ ಮಾಡಿದ್ದೇವೆ ಎಂದು ಹೇಳುತ್ತಿಲ್ಲ, ಮಾಡಬೇಕಾದ ಕೆಲಸ ಬಹಳಷ್ಟಿದೆ, ಡಬಲ್ ಎಂಜಿನ್ ಸರ್ಕಾರದ ವೇಗ ನೋಡಿದ್ದೀರಿ, 100, 120, 107 ಹೀಗೆ ಈ ಸಂಖ್ಯೆ ಬೇಡ, 150 ಸ್ಥಾನ ಕೊಡಿ ಬಳಿಕ ನಿಮ್ಮ ಮನೆ ಬಾಗಿಲಿಗೆ ಅಭಿವೃದ್ಧಿ ಪರ್ವ ನೋಡಿ, ಈ ಬಾರಿ ಚಾಮರಾಜನಗರದಲ್ಲಿ ನಾಲ್ಕಕ್ಕೇ ನಾಲ್ಕು ಸ್ಥಾನದಲ್ಲೂ ಬಿಜೆಪಿ ಪತಾಕೆ ಹಾರಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಹನೂರು ಕ್ಷೇತ್ರದಲ್ಲಿ ತಮಿಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದಿದ್ದರಿಂದ ತಮಿಳುನಲ್ಲೂ ಭಾಷಣ ಮಾಡಿದ , ಕೆ.ಅಣ್ಣಾಮಲೈ ಅಭಿವೃದ್ಧಿ ಕೇವಲ ಬೆಂಗಳೂರಿನಲ್ಲಷ್ಟೇ ಇರಬಾರದು ಅದು ಚಾಮರಾಜನಗರದಲ್ಲೂ ಆಗಬೇಕು. ಬೀದರ್‌ನಲ್ಲೂ ಆಗಬೇಕು ಅದಕ್ಕಾಗಿ ರಾಜ್ಯದಲ್ಲಿ ಈ ಬಾರಿ ಬಿಜೆಪಿ ಬರಬೇಕು ಎಂದರು.
ಚಾಮರಾಜನಗರ ಜಿಲ್ಲಾ ಮಟ್ಟದ ಒಬಿಸಿ ಸಮಾವೇಶ ಕಾರ್ಯಕ್ರಮದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ ಜನಾಶ್ರಯ ವೆಂಕಟೇಶ್, ನಿಶಾಂತ್, ದತ್ತೇಶ್ ಹಾಗೂ ಡಾ.ಪ್ರೀತಂ ನಾಗಪ್ಪ ಒಗ್ಗಟ್ಟು ಪ್ರದರ್ಶಿಸಿ ಬಿಜೆಪಿಯನ್ನು ಈ ಬಾರಿ ಗೆಲ್ಲಿಸುವಂತೆ ಮನವಿ ಮಾಡಿದರು.












Click it and Unblock the Notifications