ದೊಡ್ಡಜಾತ್ರೆಗೆ ಸರ್ವಸಜ್ಜಾದ ಬಿಳಿಗಿರಿರಂಗನಬೆಟ್ಟ...ತೇರು ಎಳೆಯಲು ಭಕ್ತರ ಕಾತರ
ಚಾಮರಾಜನಗರ, ಏಪ್ರಿಲ್ 22: ಜಿಲ್ಲೆಯ ಪ್ರವಾಸಿ ತಾಣಗಳಲ್ಲೊಂದಾದ ಬಿಳಿಗಿರಿರಂಗನ ಬೆಟ್ಟದಲ್ಲಿ ಜಾತ್ರೆಯ ಸಂಭ್ರಮ ಆರಂಭವಾಗಿದ್ದು, ಏಪ್ರಿಲ್ 23ರಂದು ಶ್ರೀ ಬಿಳಿಗಿರಿರಂಗನಾಥ ಸ್ವಾಮಿಯ ಬ್ರಹ್ಮರಥೋತ್ಸವ (ದೊಡ್ಡಜಾತ್ರೆ) ನಡೆಯಲಿದ್ದು, ಈಗಾಗಲೇ ಭಕ್ತರು ಇಲ್ಲಿಗೆ ಆಗಮಿಸತೊಡಗಿದ್ದು, ಬ್ರಹ್ಮರಥೋತ್ಸವವನ್ನು ಕಣ್ತುಂಬಿಸಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ.
ಕೆಲವು ವರ್ಷಗಳ ಕಾಲ ಬಿಳಿಗಿರಿರಂಗನಾಥ ಸ್ವಾಮಿ ದೇಗುಲದ ಜೀರ್ಣೋದ್ದಾರ ಮತ್ತು ನೂತರ ರಥದ ನಿರ್ಮಾಣದ ಕಾರಣದಿಂದ ರಥೋತ್ಸವ ನಡೆದಿರಲಿಲ್ಲ ಆದರೆ ಆ ನಂತರ ರಥೋತ್ಸವ ನಡೆದರೂ ಭಕ್ತರೆಲ್ಲರಿಗೂ ಆಗಮಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆ ಹೆಚ್ಚಾಗಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಬ್ರಹ್ಮರಥೋತ್ಸವದ ಹಿನ್ನಲೆಯಲ್ಲಿ ದೇವಾಲಯದ ಆವರಣ, ರಥದ ಬೀದಿ, ಕಲ್ಯಾಣಿ ಕೊಳದ ಬಳಿ, ಕಮರಿ ಆವರಣ ಹಾಗೂ ದಾಸೋಹ ಆವರಣ ಹಾಗೂ ಪಾರ್ಕಿಂಗ್ ವ್ಯವಸ್ಥೆ ಮತ್ತಿತ್ತರ ಜನನಿಬಿಡ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ಕ್ರಮಗಳನ್ನು ಕೈಗೊಂಡಿದ್ದು, ರಥೋತ್ಸವ ಸಿದ್ದತೆಗಳ ವ್ಯವಸ್ಥೆಯಲ್ಲಿ ಯಾವುದೇ ಲೋಪಗಳಿಗೆ ಆಸ್ಪದವಾಗದಂತೆ ಎಚ್ಚರ ವಹಿಸಲಾಗಿದೆ. ರಥೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲವಾಗುವಂತೆ ಏಪ್ರಿಲ್ 25ರವರೆಗೂ ಕೆ.ಎಸ್.ಆರ್.ಟಿ.ಸಿ ಬಸ್ಸುಗಳ ವ್ಯವಸ್ಥೆಯನ್ನು ಮಾಡಲಾಗಿದೆ.
540 ಚದರ ಕಿ.ಮೀ. ವಿಸ್ತಾರದ ಬೆಟ್ಟ
ಇನ್ನು ಬಿಳಿಗಿರಿರಂಗನಬೆಟ್ಟದ ಬಗ್ಗೆ ಹೇಳಬೇಕೆಂದರೆ ಈ ಕ್ಷೇತ್ರವು ಪವಿತ್ರ ಮತ್ತು ಪ್ರವಾಸಿ ತಾಣವಾಗಿರುವುದರಿಂದ ಪ್ರತಿನಿತ್ಯವೂ ಪ್ರವಾಸಿಗರು ಮತ್ತು ಭಕ್ತರು ಆಗಮಿಸುತ್ತಾರೆ. ಅದರಲ್ಲೂ ಜಾತ್ರೋತ್ಸವದ ವೇಳೆ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಇತ್ತ ಆಗಮಿಸಿ ಬಿಳಿಗಿರಿರಂಗನಾಥಸ್ವಾಮಿಯ ದರ್ಶನ ಪಡೆದು ರಥಕ್ಕೆ ಹಣ್ಣುದವನ ಎಸೆದು ಪನೀತರಾಗುತ್ತಾರೆ. ಬಿಳಿಗಿರಿರಂಗನಬೆಟ್ಟವು ಮೈಸೂರಿನಿಂದ ಸುಮಾರು ತೊಂಬತ್ತು ಕಿ.ಮೀ. ದೂರದಲ್ಲಿದ್ದು, ಚಾಮರಾಜನಗರ ಹಾಗೂ ಯಳಂದೂರು ಮಾರ್ಗವಾಗಿ ತೆರಳಬಹುದಾಗಿದೆ. ಕೆಲವರು ಚಾರಣಿಗರಾಗಿ ಬಂದರೆ ಇನ್ನು ಕೆಲವರು ಭಕ್ತರಾಗಿ ಬಂದು ಸ್ವಾಮಿಯ ದರ್ಶನ ಪಡೆದು ಹಿಂತಿರುಗುತ್ತಾರೆ.
ಸುಮಾರು 540 ಚದರ ಕಿ.ಮೀ. ವಿಸ್ತಾರವನ್ನು ಹೊಂದಿರುವ ಬಿಳಿಗಿರಿರಂಗನಬೆಟ್ಟವು ಸದಾ ಹಸಿರು ಹಚ್ಚಡದಿಂದ ಕೂಡಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಬಿಳಿಗಿರಿರಂಗನಬೆಟ್ಟವನ್ನು ಪ್ರವೇಶಿಸುತ್ತಿದ್ದಂತೆಯೇ ಮೇಲಿಂದ ಮೇಲೆ ಬೀಸಿ ಬರುವ ತಂಗಾಳಿಯಿಂದಾಗಿ ನಡುಬೇಸಿಗೆಯೂ ಕೂಡ ಬೆಳದಿಂಗಳೆನೋ ಎಂಬಂತೆ ಭಾಸವಾಗುತ್ತದೆ.

ಪ್ರಕೃತಿಯ ವಿಹಂಗಮ ನೋಟ ಬಲು ಸುಂದರ
ಕಣ್ಣು ಹಾಯಿಸಿದುದ್ದಕ್ಕೂ ಕಾಣಸಿಗುವ ಪ್ರಕೃತಿಯ ವಿಹಂಗಮ ನೋಟ ನಮ್ಮೆಲ್ಲಾ ಜಂಜಾಟಗಳನ್ನು ಮರೆಸಿ ಉಲ್ಲಾಸ ತುಂಬುತ್ತದೆ. ಕಾಡಿನಂಚಿನ ಸೋಲಿಗರ ಜೋಪಡಿಗಳು... ಅದರಾಚೆಗಿನ ಕಾಡಿನ ನಡುವಿನ ಅಂಕುಡೊಂಕಿನ ರಸ್ತೆಗಳಲ್ಲಿ ತಲೆ ಮೇಲೆ ಅರಣ್ಯ ಉತ್ಪನ್ನಗಳನ್ನು ಹೊತ್ತು ಸಾಗುವ ಸೋಲಿಗರು... ಅರಣ್ಯದ ನಡುವಿನಿಂದ ಛಂಗನೆ ನೆಗೆದು ಓಡುವ ಜಿಂಕೆಗಳು... ಘೀಳಿಡುವ ಆನೆಗಳು... ಹೀಗೆ ಒಂದು, ಎರಡಲ್ಲ ಹತ್ತಾರು ವಿಸ್ಮಯ ನೋಟಗಳು ಕಣ್ಮುಂದೆ ಹಾದು ಹೋಗುತ್ತವೆ.
ಬಿಳಿಗಿರಿರಂಗನಬೆಟ್ಟವನ್ನು ಶ್ವೇತಾದ್ರಿ ಬಿಳಿಕಲ್ಲು ಬೆಟ್ಟ ಎಂಬ ಹೆಸರಿನಿಂದಲೂ ಕರೆಯಲಾಗುತ್ತಿದೆ. ಇದೊಂದು ಹುಲಿಸಂರಕ್ಷಿತ ವನ್ಯಧಾಮವಾಗಿದ್ದು, ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಕೊಂಡಿ ಎಂದರೆ ತಪ್ಪಾಗುವುದಿಲ್ಲ. ಏಷ್ಯಾದ ಆನೆಗಳು, ಬಿಳಿಪಟ್ಟೆಗಳ ಹುಲಿಗಳ ವಾಸಕ್ಕೆ ಯೋಗ್ಯವಾಗಿರುವ ಈ ತಾಣದಲ್ಲಿ ಸುಮಾರು 700ಕ್ಕೂ ಹೆಚ್ಚು ವೈವಿಧ್ಯಮಯ ಸಸ್ಯ ಪ್ರಭೇದಗಳಿವೆ. ಇಷ್ಟು ಮಾತ್ರವಲ್ಲದೆ ಚಿರತೆ, ಜಿಂಕೆ, ಸೀಳುನಾಯಿ ಮುಂತಾದ ಪ್ರಾಣಿಗಳು 200ಕ್ಕೂ ಅಧಿಕ ಪಕ್ಷಿ ಸಂಕುಲಗಳು ಇಲ್ಲಿವೆ. ಈ ಅರಣ್ಯದಲ್ಲಿ ಬಹಳ ಹಿಂದಿನಿಂದಲೂ ಸೋಲಿಗರು ವಾಸ ಮಾಡುತ್ತಾ ಬಂದಿದ್ದು, ಇಲ್ಲಿ ಸಿಗುವ ಅರಣ್ಯ ಉತ್ಪನ್ನವೇ ಅವರ ಬದುಕಿಗೆ ಆಸರೆಯಾಗಿದೆ.
ಯುಗಾದಿ ನಂತರ ನಡೆಯುವ ಜಾತ್ರೆ
ಬೆಟ್ಟದ ಮೇಲ್ಭಾಗದಲ್ಲಿ ಶ್ರೀ ಬಿಳಿಗಿರಿರಂಗನಾಥ ಸ್ವಾಮಿ ಹಾಗೂ ಶ್ರೀರಂಗಪಟ್ಟಣದ ರಂಗನಾಥ, ಶಿವನಸಮುದ್ರದ ಹಾಗೂ ತಿರುಚನಾಪಳ್ಳಿಯ ಶ್ರೀರಂಗ, ವೆಂಕಟೇಶ ಅಣ್ಣತಮ್ಮಂದಿರು ಎಂಬ ನಂಬಿಕೆ ಇಲ್ಲಿನವರದ್ದಾಗಿದೆ. ವರ್ಷಕ್ಕೆ ಎರಡು ಬಾರಿ ಇಲ್ಲಿ ಜಾತ್ರೆ ನಡೆಯುತ್ತದೆಯಾದರೂ ಯುಗಾದಿ ಕಳೆದ ನಂತರ ನಡೆಯುವ ಜಾತ್ರೆ ಪ್ರಸಿದ್ಧಿ ಪಡೆದಿದೆ. ಈ ಸಂದರ್ಭ ನಡೆಯುವ ಬ್ರಹ್ಮರಥೋತ್ಸವವನ್ನು ನೋಡಲು ಸಹಸ್ರಾರು ಮಂದಿ ನೆರೆಯುತ್ತಾರೆ. ಈ ಸಂದರ್ಭ ಸ್ವಾಮಿಗೆ ಪಾದುಕೆ ಅರ್ಪಿಸಲಾಗುತ್ತದೆಯಲ್ಲದೆ, ಈ ಪಾದುಕೆಯಿಂದ ಆಶೀರ್ವಾದ ಪಡೆದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬುವುದು ಪ್ರತೀತಿ.

ಬಿಳಿಗಿರಿರಂಗನ ಬೆಟ್ಟದ ಸುತ್ತಮುತ್ತ ಹಲವು ಪ್ರವಾಸಿ ತಾಣಗಳಿದ್ದು ಅಲ್ಲಿಗೂ ಹೋಗಬಹುದಾಗಿದೆ. ದೇವಾಲಯದಿಂದ ಸುಮಾರು ಹತ್ತು ಕಿ.ಮೀ. ದೂರದಲ್ಲಿ ಶತಮಾನಗಳನ್ನು ಸವೆಸಿದ ದೊಡ್ಡಸಂಪಿಗೆ ಮರ, ಹದಿನಾರು ಕಿ.ಮೀ.ದೂರದಲ್ಲಿ ಭಾರ್ಗವಿ ನದಿಯಿದೆ. ಅಲ್ಲದೆ ಕೆ.ಗುಡಿ ಎಂಬ ನಿಸರ್ಗ ತಾಣವಿದೆ. ಇಲ್ಲಿನ ಸುತ್ತಮುತ್ತಲ ಪರಿಸರ ಹಾಗೂ ಬಿಳಿಗಿರಿರಂಗನ ಬೆಟ್ಟ ವ್ಯಾಪ್ತಿಗೆ ಸೇರುವಂತಹ ಬೇಡಗುಳಿ, ಹೊನ್ನಮೇಟಿ, ಅತ್ತಿಖಾನಿ ಮೊದಲಾದ ಅರಣ್ಯ ಪ್ರದೇಶಗಳು ನಿಸರ್ಗ ಪ್ರೇಮಿಗಳಿಗೆ ಹೇಳಿ ಮಾಡಿಸಿದಂತಿದೆ.
ಅರಣ್ಯ ಇಲಾಖೆ ನಿಬಂಧನೆ ಪಾಲಿಸಿ
ಬಿಳಿಗಿರಿರಂಗನಬೆಟ್ಟವು ಹುಲಿಸಂರಕ್ಷಣಾ ವನ್ಯಧಾಮವಾಗಿರುವುದರಿಂದ ಇಲ್ಲಿತೆ ತೆರಳುವ ಪ್ರವಾಸಿಗರು ಅರಣ್ಯ ಇಲಾಖೆಯ ನಿಬಂಧನೆಗಳನ್ನು ಪಾಲಿಸುವುದು ಬಹುಮುಖ್ಯವಾಗಿದೆ. ಜಾತ್ರೆ ಹೊರತುಪಡಿಸಿ ಉಳಿದ ದಿನಗಳಲ್ಲಿ ರಾತ್ರಿವೇಳೆಯ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಹಗಲು ವೇಳೆಯಲ್ಲಿ ಭೇಟಿ ನೀಡಿ ಹಿಂತಿರುಗುವುದು ಒಳ್ಳೆಯದು.












Click it and Unblock the Notifications