Karthik Mahesh: ಇದು ನನ್ನ ಹುಟ್ಟೂರು, ಚಾಮರಾಜನಗರದಲ್ಲಿ ಬಿಗ್‌ಬಾಸ್ ವಿನ್ನರ್ ಕಾರ್ತಿಕ್
ಚಾಮರಾಜನಗರ, ಫೆಬ್ರವರಿ 03: ತಾಯಿ ತವರಾದ, ತಮ್ಮ ಹುಟ್ಟೂರಾದ ಚಾಮರಾಜನಗರ ಜಿಲ್ಲೆಗೆ ಇಂದು(ಫೆಬ್ರವರಿ 03) ಬಿಗ್ ಬಾಸ್ ಕನ್ನಡ ಸೀಜನ್ 10 ಸ್ಪರ್ಧೆಯ ವಿಜೇತ ನಟ ಕಾರ್ತಿಕ್ ಮಹೇಶ್ ಭೇಟಿ ನೀಡಿದ್ದಾರೆ. ಜಿಲ್ಲೆಯ ಮರಿಯಾಲ ಮಠ, ಚಾಮರಾಜನಗರದ ವಿರಕ್ತ ಮಠಕ್ಕೆ ಭೇಟಿ ಕೊಟ್ಟ ಕಾರ್ತಿಕ್ ಮಹೇಶ್ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಮಠಗಳ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾರ್ತಿಕ್ ಮಹೇಶ್, ಚಾಮರಾಜನಗರ ಜಿಲ್ಲೆ ನನ್ನ ಹುಟ್ಟೂರು, ತಾಯಿಯ ಊರು ಹೆಗ್ಗೋಠಾರ, ನಾನು ಹುಟ್ಟಿದ್ದು ಹಾಗೂ ಒಂಬತ್ತು ತಿಂಗಳು ಬೆಳೆದದ್ದು ಇದೇ ಜಿಲ್ಲೆಯಲ್ಲಿ, ಬಾಲ್ಯದ ನೆನಪು ಈಗಲೂ ಹಾಗೇ ಇದೆ ಎಂದು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು.

ಅಣ್ಣಾವ್ರು ಹುಟ್ಟಿದ್ದು ಇದೇ ಚಾಮರಾಜನಗರ ಜಿಲ್ಲೆ, ಅದೇ ನನಗೆ ಹೆಮ್ಮೆ, ಒಂದು ಕೊರತೆ ಇದೆ, ಗೆದ್ದ ತಕ್ಷಣ ಅಪ್ಪು ಸರ್ ಅವರ ಆಶೀರ್ವಾದ ಪಡೆಯಬೇಕಿತ್ತು. ಅದು ನನಗೆ ಈಗ ಸಾಧ್ಯವಾಗಲ್ಲಿಲ್ಲ, ಈ ವಿಚಾರ ಬೇಸರ ತಂದಿದೆ ಎಂದು ನಟ ಪುನೀತ್ ರಾಜ್ ಕುಮಾರ್ ಅವರನ್ನು ಕಾರ್ತಿಕ್ ನೆನಪಿಸಿಕೊಂಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಜನ್ 10 ಸ್ಪರ್ಧೆಯ ಗೆಲುವಿನ ಬಗ್ಗೆ ಮಾತನಾಡಿದ ಅವರು, ನನ್ನ ಗೆಲುವಿಗೆ ಚಾಮರಾಜನಗರ ಜಿಲ್ಲೆ ಸೇರಿದಂತೆ ಇಡೀ ಕರ್ನಾಟಕದ ಜನತೆ ನನಗೆ ಆಶೀರ್ವಾದ ಮಾಡಿದ್ದಾರೆ. ಈ ಬಾರಿ ಬಿಗ್ ಬಾಸ್‌ನಲ್ಲಿ ಭಾಗವಹಿಸಿದ್ದ ಎಲ್ಲರೂ ಗೆದ್ದಿದ್ದೇವೆ. ನಮ್ಮ ವ್ಯಕ್ತಿತ್ವವನ್ನು ಬಿಗ್ ಬಾಸ್ ವೇದಿಕೆ ಹಾಗೂ ಸುದೀಪ್ ಹೊರ ತಂದಿದ್ದಾರೆ ಎಂದು ಹೇಳಿದರು.

ನನಗೆ ಯಾವುದೇ ನೆಗಿಟಿವ್ ಟ್ರೋಲ್ ಆಗಿಲ್ಲ
ಬಿಗ್ ಬಾಸ್ ನಲ್ಲಿ ಏನೇ ನಡೆದಿದ್ದರೂ ಎಲ್ಲರ ಜೊತೆ ಫ್ರೆಂಡ್‌ಶಿಪ್ ಬೆಳೆಸಿಕೊಳ್ಳುತ್ತೇನೆ. ನನಗೆ ಸಾಕಷ್ಟು ಆಫರ್‌ಗಳು ಬಂದಿದೆ. ಕಥೆ ನೋಡಿ ಆಯ್ಕೆ ಮಾಡಬೇಕಾಗಿದೆ. ಜನರು ನನಗೆ ಹೆಚ್ಚು ಮತ ನೀಡಿ ಹೆಚ್ಚಿನ ಜವಾಬ್ದಾರಿ ನನ್ನ ಮೇಲೆ ಹಾಕಿದ್ದಾರೆ. ನನಗೆ ಯಾವುದೇ ನೆಗಿಟಿವ್ ಟ್ರೋಲ್ ಆಗಿಲ್ಲ, ಮಾಡಿದವರು ಮಾಡಲಿ ನನ್ನ ಕೆಲಸ ಮಾಡುತ್ತೇನೆ. ಬಿಗ್ ಬಾಸ್ ಒಂದು ದೊಡ್ಡ ವೇದಿಕೆ. ಎಲ್ಲರ ವ್ಯಕ್ತಿತ್ವವನ್ನು ಹೊರತರುವ ರಿಯಾಲಿಟಿ ಶೋ ಅದಾಗಿದೆ. ನಾವು ಯಾರೂ ಪಾತ್ರ ಮಾಡಲಿಲ್ಲ, ನಮ್ಮ ವ್ಯಕ್ತಿತ್ವ ಹೊರ ಹಾಕಿದೆವು ಎಂದು ತಿಳಿಸಿದರು.












Click it and Unblock the Notifications