ಸ್ಕಂದಗಿರಿ ಪಾರ್ವತಾಂಭ ರಥೋತ್ಸವದ ವೇಳೆ ಗಮನ ಸೆಳೆದ ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್
ಚಾಮರಾಜನಗರ, ಮೇ, 23: ಗುಂಡ್ಲುಪೇಟೆ ತಾಲೂಕಿನ ಕಂದೇಗಾಲದ ಸ್ಕಂದಗಿರಿ ಪಾರ್ವತಾಂಭ ರಥೋತ್ಸವವು ಗುರುವಾರ (ಮೇ 23) ವೈಭವದಿಂದ ನಡೆದಿದ್ದು, ಜಾತ್ರೆಗೆ ವಿಶೇಷ ಅತಿಥಿಯಾಗಿ ಬಿಗ್ ಬಾಸ್ ಸ್ಪರ್ಧಿ ಹಳ್ಳಿಕಾರ್ ಒಡೆಯ ವರ್ತೂರ್ ಸಂತೋಷ್ ಭಾಗಿಯಾಗಿ ಗಮನ ಸೆಳೆದರು.
ಪುರಾಣ ಪ್ರಸಿದ್ಧ ಕ್ಷೇತ್ರವಾಗಿರುವ ಪಾರ್ವತಿ ಬೆಟ್ಟದಲ್ಲಿ ವರ್ಷಕ್ಕೊಮ್ಕೆ ನಡೆಯುವ ರಥೋತ್ಸವಕ್ಕೆ
ಸಹಸ್ರಾರು ಮಂದಿ ಪಾಲ್ಗೊಂಡು ತೇರು ಎಳೆದು ಪುನೀತರಾದರು.

ದೇವಸ್ಥಾನ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ಹಿನ್ನೆಲೆ, ತಾಲೂಕು ಆಡಳಿತದಿಂದ ಸಕಲ ಸಿದ್ದತೆ ಕೈಗೊಳ್ಳಲಾಗಿತ್ತು. ಕಳೆದ ಎರಡು ವರ್ಷದ ಹಿಂದೆ ರಥೋತ್ಸವದ ಸಂದರ್ಭದಲ್ಲಿ ಚಕ್ರಕ್ಕೆ ಸಿಲುಕಿ ಕಂದೇಗಾಲ ಗ್ರಾಮದ ಸರ್ಪಭೂಷಣ್ ಹಾಗೂ ಕಬ್ಬಹಳ್ಳಿ ಗ್ರಾಮದ ಸ್ವಾಮಿ ಎಂಬ ಇಬ್ಬರು ಯುವಕರು ಮೃತ ಪಟ್ಟಿದ್ದರಿಂದ ಜಿಲ್ಲಾಡಳಿತವು ರಥೋತ್ಸವದ ವೇಳೆ ಯಾವುದೇ ಅಹಿತರಕರ ಘಟನೆ ಜರುಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಒಗದಿಸಿತ್ತು.
ರಥೋತ್ಸವಕ್ಕೆ ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ, ಶಿಂಡನಪುರ, ಕೊಡಸೋಗೆ, ಸೋಮನಪುರ, ಬೊಮ್ಮಲಾಪುರ, ತೆರಕಣಾಂಬಿ ಸೇರಿದಂತೆ ನೆರೆ ಜಿಲ್ಲೆಗಳಿಂದಲೂ ಸಾವಿರಾರು ಮಂದಿ ಭಕ್ತರು ಆಗಮಿಸಿದ್ದರು.
ರೊಟ್ಟಿ ಹಬ್ಬ ಆಚರಣೆ: ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದಲ್ಲಿ ಮುತ್ತುಗದಗದ್ದೆ ಪೋಡಿನ ಜನರು ಸಂಭ್ರಮದಿಂದ ರೊಟ್ಟಿ ಹಬ್ಬ ಆಚರಣೆ ಮಾಡಿ ಗಮನ ಸೆಳೆದರು.
ಬಿಳಿಗಿರಿರಂಗನ ಬೆಟ್ಟದ ಮುತ್ತುಗದಗದ್ದೆ ಪೋಡಿನ ಸೋಲಿಗ ಸಮುದಾಯವು ಕುಂಭೇಶ್ವರ ದೇವರಿಗೆ ರೊಟ್ಟಿ, ಹಲಸಿನಕಾಯಿ ಪಲ್ಯದ ನೈವೇದ್ಯವಿಟ್ಟು ದೇವರಿಗೆ ನಮಿಸಿದರು. ರೊಟ್ಟಿ ಹಬ್ಬ ಆಚರಣೆ ಸೋಲಿಗ ಜನಾಂಗದ ಪ್ರಮುಖ ಹಬ್ಬವಾಗಿದ್ದು, ಮೊದಲ ರಾಗಿ ಫಸಲಿನಿಂದ ರೊಟ್ಟಿ ತಯಾರಿಸಿ, ದೇವರಿಗೆ ನೈವೇದ್ಯ ಮಾಡಿ ಸಹಪಂಕ್ತಿ ಭೋಜನ ಮಾಡುವುದು ಈ ಆಚರಣೆಯ ವಿಶೇಷವಾಗಿದೆ.
ಮಾದಪ್ಪನಿಗೆ ದಾನಿಯೊಬ್ಬರಿಂದ ಬೆಳ್ಳಿ ಆರತಿ ತಟ್ಟೆ: ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನಲ್ಲಿರುವ ಪವಾಡ ಪುರುಷ ಶ್ರೀ ಮಲೆ ಮಹದೇಶ್ವರನಿಗೆ ಬೆಂಗಳೂರಿನ ದಾನಿಗಳಾದ ನಾಗಮಣಿ ಎಂ ಮತ್ತು ಕುಟುಂಬ 1 ಕೆ.ಜಿ. 600 ಗ್ರಾಂ ತೂಕದ ಬೆಳ್ಳಿಯ ಆರತಿ ತಟ್ಟೆಯನ್ನು ಕಾಣಿಕೆಯಾಗಿ ಸಲ್ಲಿಸಿದ್ದಾರೆ.
ಮಾದಪ್ಪನಿಗೆ ಕಾಣಿಕೆಯಾಗಿ ಬಂದ ಬೆಳ್ಳಿ ಆರತಿ ತಟ್ಟೆ ತುಂಬಾ ವಿಶೇಷತೆಯಿಂದ ಕೂಡಿದ್ದು, ಮಾದಪ್ಪನ ವಾಹನವಾದ ಹುಲಿ, ಢಮರುಗ ಸಮೇತ ತ್ರಿಶೂಲ, ನಂದಿ ಸೇರಿದಂತೆ ಎರಡೂ ಕೈತುಂಬಾ ಹಿಡಿದ ನಂದಾದೀಪವನ್ನು ಒಳಗೊಂಡಿದ್ದು, ತುಂಬಾ ಆಕರ್ಶಕವಾಗಿದೆ.












Click it and Unblock the Notifications