ಭಾರತ್ ಜೋಡೋ ಯಾತ್ರೆ: ಬದಲಾಗಿದೆ ವಾಹನ ಸಂಚಾರ ಮಾರ್ಗ, ಮದ್ಯವೂ ನಿಷೇಧ
ಚಾಮರಾಜನಗರ, ಸೆಪ್ಟೆಂಬರ್ 29: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆ ಗುರುವಾರ ಗುಂಡ್ಲುಪೇಟೆ ಮೂಲಕ ರಾಜ್ಯಕ್ಕೆ ಪ್ರವೇಶಿಸುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ಉಂಟಾಗುವುದನ್ನು ತಪ್ಪಿಸಲು ವಾಹನ ಸಂಚಾರಕ್ಕೆ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.
ಕೇರಳ, ತಮಿಳುನಾಡುವಿನಿಂದ ರಾಜ್ಯಕ್ಕೆ ಬರುವ ಹಾಗೂ ಹೋಗುವ ವಾಹನಗಳು ಸೆಪ್ಟೆಂಬರ್ 30 ಹಾಗೂ ಅಕ್ಟೋಬರ್ 1 ರಂದು ಬದಲಿ ಮಾರ್ಗದಲ್ಲಿ ಸಂಚರಿಸಲು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶ ಹೊರಡಿಸಿದ್ದಾರೆ.
Fact check: ಆರತಿ ಮಾಡಲು ನಿರಾಕರಿಸಿದ ರಾಹುಲ್ ಗಾಂಧಿ? ವೈರಲ್ ವಿಡಿಯೋ ಹಿಂದಿರುವ ಸತ್ಯವೇನು?
ಮಾರ್ಗ-1: ಕೇರಳದ ಸುಲ್ತಾನ್ ಬತ್ತೇರಿಯಿಂದ ಮೂಲೆಹೊಳೆ ಮಾರ್ಗವಾಗಿ ಮೈಸೂರಿಗೆ ಹೋಗಲಿರುವ ವಾಹನಗಳನ್ನು ಕಗ್ಗಳದ ಹುಂಡಿ ಗ್ರಾಮದ ಕ್ರಾಸ್ ಬಳಿಯಿಂದ ಚೆನ್ನಮಲ್ಲಿಪುರ-ಹೊಂಗಹಳ್ಳಿ-ಮೂಕಹಳ್ಳಿ-ಮುಂಟಿಪುರ-ಬರಗಿ ಮಾರ್ಗವಾಗಿ ಚಲಿಸಿ, ದೇಶಿಪುರ ಕಾಲೋನಿ ಕ್ರಾಸ್-ದೇಶಿಪುರ-ಆಲತ್ತೂರು-ಹಸಗೂಲಿ ಮಾರ್ಗವಾಗಿ ಗರಗನಹಳ್ಳಿ ಗೇಟ್‌ಗೆ ಬಂದು ಮೈಸೂರಿಗೆ ತೆರಳಬೇಕು.
ಮಾರ್ಗ-2: ಕೇರಳದ ಸುಲ್ತಾನ್ ಬತ್ತೇರಿಯಿಂದ ಮೂಲೆಹೊಳೆ ಮಾರ್ಗವಾಗಿ ಊಟಿ ಕಡೆಗೆ ಹೋಗಲಿರುವ ಮತ್ತು ಊಟಿಯಿಂದ ಸುಲ್ತಾನ್ ಬತ್ತೇರಿಗೆ ಹೋಗಲಿರುವ ವಾಹನಗಳು ಕಗ್ಗಳದಹುಂಡಿ ಗ್ರಾಮದ ಕ್ರಾಸ್ ಬಳಿಯಿಂದ ಬೇರಂಬಾಡಿ-ಬೀಚನಹಳ್ಳಿ- ಲಕ್ಕಿಪುರ- ಗೋಪಲಾಪುರ -ಕಳ್ಳಿಪುರ- ದೇವರಹಳ್ಳಿ- ಹಂಗಳ ಮಾರ್ಗವಾಗಿ ಊಟಿಗೆ ಮತ್ತು ಕೇರಳದ ಕಡೆಗೆ ತೆರಳಬೇಕು.
ಮಾರ್ಗ-3: ಊಟಿ ಕಡೆಯಿಂದ ಮೈಸೂರಿಗೆ ಸಂಚರಿಸಲಿರುವ ವಾಹನಗಳು ಹಂಗಳ- ಹಂಗಳಪುರ- ಶಿವಪುರ- ಕೋಡಹಳ್ಳಿ- ಅಣ್ಣೂರು ಕೇರಿ ಮಾರ್ಗದಿಂದ ಗುಂಡ್ಲುಪೇಟೆ ಪಟ್ಟಣದ ಕೋಡಹಳ್ಳಿ ಸರ್ಕಲ್‌ಗೆ ಬಂದು ಚಾಮರಾಜನಗರ ರಸ್ತೆಯ ಮಾರ್ಗವಾಗಿ ಮೈಸೂರಿಗೆ ತೆರಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮದ್ಯ ಮಾರಾಟ ಬಂದ್
ಭಾರತ್ ಜೋಡೋ ಯಾತ್ರೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸೆ. 29 ರ ಮಧ್ಯರಾತ್ರಿಯಿಂದ ಅಕ್ಟೋಬರ್ 1 ರ ಮಧ್ಯರಾತ್ರಿಯವರೆಗೆ ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧಿಸಿ ಡಿಸಿ ಆದೇಶಿಸಿದ್ದಾರೆ. ಸೂಚಿತ ಅವಧಿಯಲ್ಲಿ ಮದ್ಯ ಮಾರಾಟ, ಶೇಖರಣೆ, ಸಾಗಾಣಿಕೆ ಅಕ್ಷಮ್ಯ ಅಪರಾಧವಾಗಲಿದೆ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.