ಚಾಮರಾಜನಗರದಲ್ಲಿ 17 ತಾಸು ವಿಜೃಂಭಣೆಯಿಂದ ನಡೆದ ಅಯೋಧ್ಯೆ ರಾಮ ಗಣಪತಿ ವಿಸರ್ಜನಾ ಮೆರವಣಿಗೆ
ಚಾಮರಾಜನಗರ, ಅಕ್ಟೋಬರ್, 05: ಈಗಾಗಲೇ ದೇಶದ ಬಹುತೇಕ ಕಡೆಗಳಲ್ಲಿ ಗಣಪತಿ ವಿಸರ್ಜಾನಾ ಮೆರವಣಿಗೆ ಮುಗಿದಿದೆ. ಮತ್ತೊಂದೆಡೆ ಇನ್ನೂ ಕೆಲವು ಕಡೆ ಮಾತ್ರ ಇನ್ನೂ ಗಣಪತಿ ವಿಸರ್ಜನಾ ಕಾರ್ಯಕ್ರಮಗಳು ನಡೆಯುತ್ತಿವೆ. ಹಾಗೆಯೇ ಶುಕ್ರವಾರ (ಅಕ್ಟೋಬರ್ 4) ಚಾಮರಾಜನಗರದ ರಥ ಬೀದಿಯಲ್ಲಿ ಶ್ರೀ ವಿದ್ಯಾ ಗಣಪತಿ ಮಂಡಳಿ ವತಿಯಿಂದ ಪ್ರತಿಷ್ಠಾಪನೆ ಮಾಡಿದ್ದ ಅಯೋಧ್ಯಾ ರಾಮ ಗಣಪತಿ ನಿಮಜ್ಜನ ಶೋಭಾಯಾತ್ರೆ ವಿಜೃಂಭಣೆಯಿಂದ ನಡೆಯಿತು.
ಶುಕ್ರವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಆರಂಭಗೊಂಡಿದ್ದ ಗಣಪತಿ ಮೆರವಣಿಗೆ ಜಾನಪದ ಕಲಾತಂಡಗಳೊಂದಿಗೆ ನಗರದಾದ್ಯಂತ ನಡೆಯಿತು. ಬರೋಬ್ಬರಿ 17 ತಾಸು ನಡೆದ ಉತ್ಸವದ ಬಳಿಕ ಶನಿವಾರ ಬೆಳಗಿನ ಜಾವ 4 ಗಂಟೆ ವೇಳೆಗೆ ದೊಡ್ಡರಸನ ಕೊಳದಲ್ಲಿ ಕ್ರೇನ್ ಸಹಾಯದಿಂದ ಮೂರ್ತಿಯನ್ನು ನಿಮಜ್ಜನಗೊಳಿಸಲಾಯಿತು.

ಗಣಪತಿ ಮೆರವಣಿಗೆಯಲ್ಲಿ ಪೊಲೀಸರೇ ಹೆಚ್ಚಾಗಿ ಕಂಡುಬರುವುದರಿಂದ ಈ ವಿದ್ಯಾ ಗಣಪತಿಯನ್ನು ಪೊಲೀಸ್ ಗಣಪತಿ, ಹಿಂದೂ ಪರ ಸಂಘಟನೆಗಳು ಪ್ರತಿಷ್ಠಾಪಿಸುವುದರಿಂದ ಆರ್‌ಎಸ್‌ಎಸ್ ಗಣಪತಿ ಎಂದು ಕರೆಯಲಾಗುತ್ತದೆ. ಇನ್ನು ಈ ಗಣಪತಿ ಮೆರವಣಿಗೆಗೆ ವಿವಿಧ ಜಾನಪದ ಕಲಾತಂಡಗಳು ಮೆರುಗು ಕೊಟ್ಟಿದ್ದು, ಗಾರುಡಿಗೊಂಬೆ, ಕಂಸಾಳೆ, ಗೊರವರ ಕುಣಿತ, ಚಂಡೆ, ವಿವಿಧ ವೇಷದಾರಿಗಳು ಗಮನ ಸೆಳೆದವು.
ಬಿಗಿ ಪೊಲೀಸ್ ಬಂದೋಬಸ್ತ್: ಮುನ್ನೆಚ್ಚರಿಕೆ ಕ್ರಮವಾಗಿ ಕಟ್ಟಡದ ಮೇಲೆ ಕೂರುವುದು, ಪಟಾಕಿ ಸಿಡಿಸುವುದಕ್ಕೆ ನಿರ್ಬಂಧ ಹೇರಲಾಗಿದ್ದು, ಮದ್ಯ ಮಾರಾಟವನ್ನು ಜಿಲ್ಲಾಕೇಂದ್ರದಲ್ಲಿ ಬಂದ್ ಮಾಡಲಾಗಿತ್ತು. ಇನ್ನು ಈ ಬಾರಿ 6 ಡಿವೈಎಸ್‌ಪಿ, 28 ಪಿಐ, 48 ಮಂದಿ ಪಿಎಸ್ಐ ಸೇರಿ 750 ಮಂದಿ ಪೊಲೀಸರು, 100 ಮಂದಿ ಹೋಂ ಗಾರ್ಡ್‌ಗಳು, 5 ಕೆಎಸ್ಆರ್‌ಪಿ, 6 ಡಿಆರ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು.
1.23 ಕೋಟಿ ಆದಾಯ: ಹಾನೂರು ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮೂರು ದಿನಗಳ ಕಾಲ ಮಹಾಲಯ ಅಮವಾಸ್ಯೆ ಜಾತ್ರಾ ಮಹೋತ್ಸವ ಆಚರಣೆ ಮಾಡಿದ್ದರು. ಈ ಸಮಯದಲ್ಲಿ ಆಗಮಿಸಿದ್ದ ಲಕ್ಷಾಂತರ ಭಕ್ತಾದಿಗಳಿಂದ ಕೇವಲ ಮೂರು ದಿನಗಳ ಅವಧಿಯಲ್ಲಿ 1.23 ಕೋಟಿ ಆದಾಯ ಹರಿದುಬಂದಿದೆ.
ಸೆಪ್ಟೆಂಬರ್ 30, ಅಕ್ಟೋಬರ್ 1 ಹಾಗೂ 2ರ ಅವಧಿಯಲ್ಲಿ ನಡೆದ ಮಹಾಲಯ ಅಮಾವಾಸ್ಯೆ ಜಾತ್ರಾ ಮಹೋತ್ಸವ ದಿನಗಳಲ್ಲಿ ಹೆಚ್ಚಿನ ಭಕ್ತಾದಿಗಳು ಆಗಮಿಸಿ ಚಿನ್ನದ ರಥೋತ್ಸವ, ಬೆಳ್ಳಿ ರಥೋತ್ಸವ ಹುಲಿ ವಾಹನ, ರುದ್ರಾಕ್ಷಿ ವಾಹನ ಬಸವ ಮಂಟಪ, ಲಾಡು ಮಾರಾಟ, ವಿವಿಧ ಸೇವೆಗಳು ಅಕ್ಕಿ ಸೇವೆ, ಮಿಶ್ರ ಪ್ರಸಾದ, ಪುದುವಟ್ಟು, ಮಾಹಿತಿ ಕೇಂದ್ರ ಹಾಗೂ ತಾಳಬೆಟ್ಟ ಭವನಗಳಿಂದ, ಪಾರ್ಕಿಂಗ್, ಕಲ್ಲುಸಕ್ಕರೆ, ತೀರ್ಥ, ಬ್ಯಾಗ್ ಮಾರಾಟದಿಂದ 1,23,91,458 ರೂಪಾಯಿ ಆದಾಯ ಬಂದಿದೆ.
ಮೂರು ದಿನಗಳ ಅವಧಿಯಲ್ಲಿ ವಿವಿಧ ಉತ್ಸವಗಳಾದ 468 ಚಿನ್ನದ ರಥೋತ್ಸವ, 34 ಬೆಳ್ಳಿ ರಥೋತ್ಸವ, 574 ಬಸವ ವಾಹನ, 7,112 ಹುಲಿ ವಾಹನ, 288 ರುದ್ರಾಕ್ಷಿ ವಾಹನದ ಹರಕೆ ಸಲ್ಲಿಕೆ ಮೂಲಕ 38,48,251 ರೂಪಾಯಿ ಆದಾಯ ಬಂದಿದೆ. ಅಕ್ಟೋಬರ್ 3ರಿಂದ ನವರಾತ್ರಿ ಪ್ರಾರಂಭವಾಗಿದ್ದು, ದೀಪಾವಳಿ ಕಾರ್ತಿಕ ಮಾಸ ಪ್ರಯುಕ್ತ ಶ್ರೀ ಕ್ಷೇತ್ರಕ್ಕೆ ಹೆಚ್ಚಿನ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇರುವುದರಿಂದ ಇನ್ನು ಹೆಚ್ಚಿನ ಆದಾಯ ನಿರೀಕ್ಷಿಸಲಾಗಿದೆ.
ಅಕ್ಟೋಬರ್ 3ರಿಂದ ನವರಾತ್ರಿ ಪೂಜೆ ಮಹೋತ್ಸವ ಪ್ರಾರಂಭವಾಗಿದ್ದು, ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಮಹಾನವಮಿ ಆಯುಧ ಪೂಜೆ, ವಿಜಯದಶಮಿ, ದೀಪಾವಳಿ ಜಾತ್ರಾ ಮಹೋತ್ಸವ ಕಾರ್ತಿಕ ಮಾಸ ಪ್ರಾರಂಭವಾಗುವುದರಿಂದ ಲಕ್ಷಾಂತರ ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಪ್ರಾಧಿಕಾರದ ಅಧ್ಯಕ್ಷರಾದ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಜಿಲ್ಲಾಡಳಿತದ ಸಹಕಾರದ ವತಿಯಿಂದ ಮಹಾಲಯ ಜಾತ್ರಾ ಅಮಾವಾಸ್ಯೆ ಯಶಸ್ವಿಯಾಗಿ ನೆರವೇರಿದೆ. ಮುಂದಿನ ದಿನಗಳಲ್ಲಿ ವಿಜಯದಶಮಿ ಹಾಗೂ ದೀಪಾವಳಿ ಜಾತ್ರಾ ಮಹೋತ್ಸವ ಇರುವ ಹಿನ್ನೆಲೆ ಭಕ್ತರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಈಗಿನಿಂದಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಎ.ಈ.ರಘು ತಿಳಿಸಿದ್ದಾರೆ.












Click it and Unblock the Notifications