ಕೊನೆಗೂ ಕೊಳ್ಳೇಗಾಲದಿಂದ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿದ ಎಆರ್ ಕೃಷ್ಣಮೂರ್ತಿ
ಕೊಳ್ಳೇಗಾಲ, ಏಪ್ರಿಲ್ 6: ಚಾಮರಾಜನಗರದ ಹೂವೋಲ್ಟೇಜ್ ವಿಧಾನಸಭಾ ಮೀಸಲು ಕ್ಷೇತ್ರವಾದ ಕೊಳ್ಳೇಗಾಲದಿಂದ ಕೊನೆಗೂ ಎಆರ್ ಕೃಷ್ಣಮೂರ್ತಿ ಅವರು ಕಾಂಗ್ರೆಸ್ ಬಿಡುಗಡೆ ಮಾಡಿದ ಎರಡನೇ ಅಭ್ಯರ್ಥಿಗಳ ಪಟ್ಟಿಯಲ್ಲಿ ಟಿಕೆಟ್ ಪಡೆದಿದ್ದಾರೆ.
ಕಾಂಗ್ರೆಸ್ ನಲ್ಲಿ ಘಟಾನುಘಟಿ ನಾಯಕರಾದ ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ, ಮಾಜಿ ಶಾಸಕ ಬಾಲರಾಜ್ ಹಾಗೂ ಎಸ್ ಜಯಣ್ಣ ಟಿಕೆಟ್ ಗಾಗಿ ತೀವ್ರ ಪೈಪೋಟಿ ನಡೆಸುತ್ತಿದ್ದರು. ಕೊನೆಗೆ ಎಆರ್ ಕೃಷ್ಣಮೂರ್ತಿ ಅವರು ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೆ ನೋಡುವುದಾರೆ ಎಆರ್ ಕೃಷ್ಣಮೂರ್ತಿ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿದ್ದಾರೆ.

ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ ಸಿದ್ದರಾಮಯ್ಯ ಬಣದ ಹಲವಾರು ಮಂದಿಗೆ ಟಿಕೆಟ್ ಸಿಕ್ಕಿದೆ. ಈ ಮೂಲಕ ಸಿದ್ದರಾಮಯ್ಯ ಪ್ರಾಬಲ್ಯ ಮತ್ತಷ್ಟು ಕಾಂಗ್ರೆಸ್ ಪಕ್ಷದೊಳಗೆ ಕೆಲಸ ಮಾಡಿದೆ. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಗಳ ಪೈಕಿ ಎ.ಆರ್.ಕೃಷ್ಣಮೂರ್ತಿ ಮತ್ತು ಎಸ್.ಜಯಣ್ಣ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿದ್ದರೆ, ಮಾಜಿ ಶಾಸಕ ಬಾಲರಾಜ್ ಡಿ.ಕೆ.ಶಿವಕುಮಾರ್ ಅವರಿಗೆ ಆಪ್ತರಾಗಿದ್ದಾರೆ. ಈ ಮೂರು ನಾಯಕರು ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಇವರ ನಡುವೆ ಯಾರಿಗೆ ಕಾಂಗ್ರೆಸ್ ಟಿಕೆಟ್ ಸಿಗುವುದೆಂಬ ಗೊಂದಲ ಇತ್ತು. ಕ್ಷೇತ್ರದಲ್ಲಿ ಟಿಕೆಟ್ ಯಾರಿಗೆ ಕೊಡಬೇಕು ಎಂಬ ಗೊಂದಲ ಏರ್ಪಟ್ಟಿರುವುದರಿಂದಲೇ ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿ ಹೆಸರು ಪ್ರಕಟವಾಗಿರಲಿಲ್ಲ.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಎಆರ್ ಕೃಷ್ಣಮೂರ್ತಿ ಬಿಎಸ್‌ಪಿ ಅಭ್ಯರ್ಥಿಯಾಗಿದ್ದ ಎನ್ ಮಹೇಶ್ ವಿರುದ್ಧ 52,338 ಮತಗಳನ್ನು ಪಡೆದು ಸೋತಿದ್ದರು. ಬಿಎಸ್‌ಪಿಯಿಂದ ಸ್ಪರ್ಧಿಸಿದ್ದ ಎನ್ ಮಹೇಶ್ ಅವರು ಶಿಕ್ಷಣ ಸಚಿವರೂ ಆಗಿದ್ದರು. ಬಿಎಸ್‌ಪಿ ಅವರನ್ನು ಉಚ್ಚಾಟನೆ ಮಾಡಿದ ಬಳಿಕ ಅವರು ಬಿಜೆಪಿ ಸೇರಿದ್ದರು.

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ದಲಿತ ಸಮುದಾಯದ ಮುಖಂಡರು ಈಗ ಕಾಂಗ್ರೆಸ್ ಕಡೆ ವಾಲಿದ್ದಾರೆ. ಹೀಗಾಗಿ ಎನ್ ಮಹೇಶ್ ಅವರಿಗೆ ಅಲ್ಲಿ ಗೆಲ್ಲುವ ಅವಕಾಶಗಳು ಕಡಿಮೆ ಇವೆ. ಸದ್ಯ ಚಾಮರಾಜನಗರದ 4 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಿಕೆಟ್ ಅಂತಿಮವಾಗಿದೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಚಾಮರಾಜನಗರ ಈಗ ಎರಡರಲ್ಲಿ ಕಾಂಗ್ರೆಸ್ ಇದ್ದರೆ ಎರಡಲ್ಲಿ ಬಿಜೆಪಿ ಇದೆ. ಹೀಗಾಗಿ ಕ್ಷೇತ್ರವನ್ನು ಉಳಿಸಿಕೊಳ್ಳುವ ಹಂಬಲದಲ್ಲಿ ಬಿಜೆಪಿ ಇದೆ. ಕೊಳ್ಳೇಗಾಲದಲ್ಲಿ ಎಆರ್ ಕೃಷ್ಣಮೂರ್ತಿ ಅವರು ನಿಂತರೂ ಗೆಲುವು ಬಾರಿ ಅಂತರದಲ್ಲೇನು ಇರುವುದಿಲ್ಲ. ಕಾರಣ ಇಲ್ಲಿ ನಿಲ್ಲುವ ಜೆಡಿಎಸ್ ಅಭ್ಯರ್ಥಿ ಇಲ್ಲಿ ಎಷ್ಟು ಮತಗಳನ್ನು ಪಡೆಯುತ್ತಾರೆ ಎಂಬುದರ ಮೇಲೆ ಅವರ ಗೆಲುವು ಇರುತ್ತದೆ.
ಜೆಡಿಎಸ್‌ನಿಂದ ಸ್ಪರ್ಧಿಸಲು ಪುಟ್ಟಸ್ವಾಮಿ ಮತ್ತು ವಾಲೆ ಮಹದೇವು ಅವರು ಟಿಕೆಟ್‌ಗೆ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿಯಾಗಿರುವ ಪುಟ್ಟಸ್ವಾಮಿ ಅವರು ಕ್ಷೇತ್ರದುದ್ದಕ್ಕೂ ಸಂಚಾರ ಮಾಡಿ ಮತದಾರರ ಸೆಳೆಯುವ ಪ್ರಯತ್ನ ಮಾಡುತ್ತಿದ್ದರೆ, ಇನ್ನೊಬ್ಬ ಆಕಾಂಕ್ಷಿ ವಾಲೆ ಮಹದೇವು ಕೂಡ ಕೈಕಟ್ಟಿ ಕೂರದೆ ತಮ್ಮದೇ ಕೆಲಸ ಕಾರ್ಯಗಳಿಂದ ರಾಜ್ಯ ನಾಯಕರ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಕೊಳ್ಳೇಗಾಲದಲ್ಲಿ 1,06,235 ಪುರುಷರು- 1,08,909 ಮಹಿಳಾ ಮತದಾರು ಇದ್ದಾರೆ.
ಇನ್ನೂ ಕೊಳ್ಳೇಗಾಲದ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ, ಪ್ರಭಾವಿ ರಾಜಕಾರಣಿಯಾದ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದೇನೆಂದು ಬಹಿರಂಗವಾಗಿ ಘೋಷಿಸಿದ್ದರು. ಪಕ್ಷ ಕಷ್ಟ ಕಾಲದಲ್ಲಿದ್ದಾಗ ಪಕ್ಷ ಸಂಘಟಿಸಿ, ಸೋಲುತ್ತೇವೆ ಎಂದು ಗೊತ್ತಿದ್ದರೂ, ಶಕ್ತಿ ಮೀರಿ ಹೋರಾಡಿ ಚುನಾವಣೆಯಲ್ಲಿ ನಿಂತಿದ್ದೇನೆ. ಆದರೆ ಇತ್ತೀಚೆಗೆ ಬಿಜೆಪಿ ನಡೆದುಕೊಳ್ಳುವ ರೀತಿಯಿಂದ ಬೇಸತ್ತು ಪಕ್ಷಕ್ಕೆ ಭಾನುವಾರ ರಾಜೀನಾಮೆ ಸಲ್ಲಿಸಿದ್ದು ಮಂಗಳವಾರ ಕಾಂಗ್ರೆಸ್‌ಗೆ ಸೇರುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದರು.
ಕಾಂಗ್ರೆಸ್‌ನಲ್ಲಿ ಮೂವರು ಟಿಕೆಟ್ ಆಕಾಂಕ್ಷಿಗಳ ಜೊತೆ ನಂಜುಂಡಸ್ವಾಮಿ ಕೂಡ ಮಾಜಿ ಶಾಸಕರಾಗಿದ್ದಾರೆ. ಇವರ ಸಾಲಿಗೆ ಜಿಎನ್ ಕೂಡ ಸೇರಿಕೊಂಡರೆ ಶಾಸಕ ಮಹೇಶ್ ಮಣಿಸಲು ನಾಲ್ವರು ಮಾಜಿ ಶಾಕಸರು ಸೇರಿಕೊಂಡಂತಾಗಲಿದ್ದು, ಚುನಾವಣಾ ಕಣ ರಣರಂಗವಾಗಲಿದೆ. ಮಾಜಿ ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಜಯಣ್ಣ, ಬಾಲರಾಜು ಕ್ಷೇತ್ರದಲ್ಲಿ ಸುತ್ತಾಡಿ ಪಕ್ಷ ಸಂಘಟಿಸುವ ಜೊತೆಗೆ ತಮ್ಮ ಮತ ಬ್ಯಾಂಕ್‌ನ್ನು ಹೆಚ್ಚಿಸಿಕೊಂಡಿದ್ದಾರೆ. ಶಾಸಕ ಮಹೇಶ್ ಬಿಜೆಪಿಗೆ ಸೇರ್ಪಡೆಯಾಗುವ ಮುನ್ನ ಜಿಎನ್ ಕೂಡ ಪಕ್ಷ ಸಂಘಟಿಸಿ ತಮ್ಮ ಮತ ಬ್ಯಾಂಕ್‌ನ್ನು ಭದ್ರಪಡಿಸಿಕೊಂಡಿದ್ದರು. ಈಗ ನಾಲ್ವರು ಮಾಜಿ ಶಾಸಕರು ಒಂದಾಗಿ ಮತ ಭದ್ರವಾದರೆ ಕಾಂಗ್ರೆಸ್‌ಗೆ ಉತ್ತಮ ಬೆಂಬಲ ಎನ್ನುವ ಲೆಕ್ಕಾಚಾರ ಆರಂಭವಾಗಿದೆ.












Click it and Unblock the Notifications