ಇದೇ ಮೊಟ್ಟ ಮೊದಲ ಬಾರಿಗೆ ಪುಂಡಾನೆ ದಂತಕ್ಕೆ ಕತ್ತರಿ ಪ್ರಯೋಗ: ಮತ್ತೊಂದು ಇತಿಹಾಸ ಸೃಷ್ಟಿಸಿದ ಬಂಡೀಪುರ
ಚಾಮರಾಜನಗರ, ಮೇ, 20: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದ ವಲಯದಂಚಿನ ರೈತರ ಜಮೀನಿಗೆ ನುಗ್ಗಿ ದಾಂಧಲೆ ಮಾಡುತ್ತಿದ್ದ ಕಾಡಾನೆಗೆ ಬಂಡೀಪುರ ಅರಣ್ಯ ಇಲಾಖೆಯು, ಕೂಡು ದಂತಕ್ಕೆ ಚಿಕಿತ್ಸೆ ಮಾಡುವ ಮೂಲಕ ಕಾಡಾನೆಗೆ ನೈಸರ್ಗಿಕವಾಗಿ ಆಹಾರ ಸೇವನೆಗೆ ಅನುವು ಮಾಡಿಕೊಟ್ಟಿದೆ.
ಗುಂಡ್ಲುಪೇಟೆ ತಾಲೂಕಿನ ಹಂಗಳ ಸುತ್ತ ಮುತ್ತಲಿನ ರೈತರ ಜಮೀನಿನ ಫಸಲು ತಿಂದು ಹಾಳು ಮಾಡುತ್ತಿದ್ದ ಕೂಡು ದಂತ ಕಾಡಾನೆಯ ಹಾವಳಿಗೆ ರೈತರು ಆಕ್ರೋಶಗೊಂಡ ಬಳಿಕ ಎಚ್ಚೆತ್ತ ಅರಣ್ಯ ಇಲಾಖೆ, ಕಾಡಾನೆ ಸೆರೆ ಹಿಡಿದಿತ್ತು. ಬಳಿಕ ಅದನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ರೆ ವಲಯಕ್ಕೆ ಬಿಟ್ಟಿದ್ದು, ಕಾಡಿಗೆ ಬಿಡುವ ಮುನ್ನ ಆನೆ ದಂತಕ್ಕೆ ಕತ್ತರಿ ಪ್ರಯೋಗ ಮಾಡಲಾಗಿದೆ.

ಬಂಡೀಪುರ ಸಿಎಫ್ಒ ಪ್ರಭಾಕರನ್ ಅವರು ಸೆರೆ ಹಿಡಿದ ಕಾಡಾನೆ ನಾಡಿಗೇಕೆ ಬಂದು ರೈತರ ಜಮೀನಿನ ಫಸಲು ತಿನ್ನುತ್ತಿತ್ತು ಎಂದು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿದ ಬಳಿಕ, ಹಂಗಳ ಸುತ್ತಮುತ್ತ ದಾಂಧಲೆ ಮಾಡುತ್ತಿದ್ದ ಕಾಡಾನೆಗೆ ಕೂಡು ದಂತ ಕಾರಣ ಎಂದು ಮೊದಲಿಗೆ ಖಚಿತ ಪಡಿಸಿಕೊಂಡಿದ್ದಾರೆ.
ಮೇಲಾಧಿಕಾರಿಗಳ ಅನುಮತಿ ಪಡೆದು ಆನೆಯನ್ನು ಸೆರೆ ಹಿಡಿದ ಕೋಡು ದಂತವನ್ನು ಸ್ವಲ್ಪ ತುಂಡು ಮಾಡಲಾಗಿದೆ. ಬಳಿಕ ಕೂಡು ದಂತ ಕಾಡಾನೆಗೆ ನೈಸರ್ಗಿಕಾಗಿ ಆಹಾರ ಸೇವನೆಗೆ ಹಾಗೂ ಕಾಡಿನಿಂದ ನಾಡಿಗೆ ಬಂದು ರೈತರ ಫಸಲು ನಾಶವಾಗದಂತೆ ಅರಣ್ಯ ಇಲಾಖೆ ಕಾಳಜಿ ವಹಿಸಿ, ಇದೇ ಮೊದಲ ಬಾರಿಗೆ ಈ ರೀತಿ ಪ್ರಯೋಗ ನಡೆಸುವ ಮೂಲಕ ಬಂಡೀಪುರ ಇತಿಹಾಸ ಬರೆದಿದೆ.
ಸೆರೆ ಹಿಡಿದಿದ್ದ ಕಾಡಾನೆಗೆ ಎರಡು ದಂತ ಅಡ್ಡಾದಿಡ್ಡಿಯಾಗಿ ಬೆಳೆದು ಒಂದಕ್ಕೊಂದು ಕೂಡಿಕೊಂಡಿದ್ದ ಕಾರಣ ಸೊಂಡಿಲ ಮೇಲೆತ್ತಲು ಆಗುತ್ತಿರಲಿಲ್ಲ. ಕಾಡಲ್ಲಿ ಮರದ ಸೊಪ್ಪು, ಹಣ್ಣು ತಿನ್ನಲು ಆಗುತ್ತಿಲ್ಲ. ದೇಹ ತಂಪು ಮಾಡಿಕೊಳ್ಳಲು ಕಾಡಾನೆ ಮಣ್ಣು, ಮರಳು, ನೀರು ತಂಪು ಮಾಡಿಕೊಳ್ಳಲು ಆಗುತ್ತಿರಲಿಲ್ಲ.
ಕೂಡು ದಂತಗಳ ಒಳಗಿಂದ ಆನೆ ಸೊಂಡಿಲು ಮೇಲತ್ತಲು ಆಗದೆ, ಕಾಡಿನ ಆಹಾರ ತಿನ್ನಲು ಆಗದ ಕಾರಣ ಕಾಡಾನೆ ಸುಲಭವಾಗಿ ಆಹಾರ ಸೇವನೆಗೆ ಕಾಡಾಂಚಿನ ಗ್ರಾಮದ ರೈತರ ಜಮೀನಿನಲ್ಲಿ ಬೆಳೆದ ಫಸಲು ತಿನ್ನಲು ಶುರು ಮಾಡಿದೆ.
ಜಮೀನುಗಳಿಗೆ ದಾಳಿ: ನೆಲ ಮಟ್ಟದಲ್ಲಿ ಬೆಳೆದ ಕಬ್ಬು , ಬಾಳೆ ಗಿಡ, ಟೊಮ್ಯಾಟೊ ಸೇರಿದಂತೆ ಮತ್ತಿತರ ತರಕಾರಿ ಸುಲಭವಾಗಿ ತಿಂದು ಹಸಿವು ನೀಗಿಸಿಕೊಳ್ಳುತ್ತಿದ್ದ ಕಾಡಾನೆಯು ಇದನ್ನೇ ನಿತ್ಯ ಅಭ್ಯಾಸ ಮಾಡಿಕೊಂಡಿತ್ತು. ಇದರಿಂದ ರೈತರು ಹಾಗೂ ಅರಣ್ಯ ಇಲಾಖೆಗೆ ತಲೆ ನೋವಾಗಿತ್ತು. ಈಗ ಸದ್ಯ, ಆನೆಗೆ ದಂತ ಕತ್ತರಿಸಿದ ಬಳಿಕ ಕಾಡಲ್ಲಿ ಆರೋಗ್ಯದಿಂದಿದ್ದು ನೈಸರ್ಗಿಕವಾಗಿ ಸಿಗುವ ಆಹಾರ ಸೇವಿಸುತ್ತಿದೆ ಎನ್ನಲಾಗಿದೆ.












Click it and Unblock the Notifications