ಸರ್ಕಾರಿ ಶಾಲೆಯ ಬಿಸಿಯೂಟದಲ್ಲಿ ಭರ್ಜರಿ ಭೋಜನ: ವಿದ್ಯಾರ್ಥಿಗಳಿಗಾಗಿ ಮುದ್ದೆ, ಜಾಮೂನ್, ಹಣ್ಣು
ಚಾಮರಾಜನಗರ, ಡಿಸೆಂಬರ್ 1: ವಿದ್ಯಾರ್ಥಿಗಳಿಗೆ ಕೊಡುವ ಸರ್ಕಾರದ ಮಹತ್ವಾಕಾಂಕ್ಷೆಯ ಮಧ್ಯಾಹ್ನದ ಬಿಸಿಯೂಟ ಯೋಜನೆ ಬಗ್ಗೆ ಟೀಕಿಸುವವರೇ ಹೆಚ್ಚು. ಆದರೆ, ಚಾಮರಾಜನಗರದ ಈ ಶಾಲೆ ಹಾಗಲ್ಲ. ಇಲ್ಲಿ ವಿದ್ಯಾರ್ಥಿಗಳು ನಿತ್ಯವೂ ಬಗೆ ಬಗೆಯ ಆಹಾರ ಸೇವಿಸುತ್ತಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹೊಂಗಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 'ಅಕ್ಷರ ದಾಸೋಹ ಜೋಳಿಗೆ' ಎಂಬ ವಿಭಿನ್ನ ಪರಿಕಲ್ಪನೆ ಜಾರಿಯಲ್ಲಿದೆ. ಗ್ರಾಮಸ್ಥರು ತಾವು ಬೆಳೆದ ತರಕಾರಿಗಳು, ಹಣ್ಣುಗಳನ್ನು ಶಾಲೆಗೆ ತಂದುಕೊಡುತ್ತಾರೆ. ಹಾಗಾಗಿ ನಿತ್ಯವೂ ವಿಶೇಷ ಆಹಾರ ಈ ಮಕ್ಕಳಿಗೆ ಲಭ್ಯವಾಗುತ್ತಿದೆ.
ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪ ಮಾಡಿದ ಬಿಜೆಪಿ ಮುಖಂಡ
ಅಲ್ಲದೇ ಶಾಲೆಯಲ್ಲಿ ಕೈತೋಟ ಮಾಡಿಕೊಂಡಿದ್ದು ,ಸೊಪ್ಪು, ತರಕಾರಿಗಳನ್ನು ಬೆಳೆಯಲಾಗುತ್ತದೆ. ಇದರೊಂದಿಗೆ ಗ್ರಾಮಸ್ಥರು ತಾವು ಬೆಳೆದ ಹಣ್ಣು ಹಾಗೂ ತರಕಾರಿಗಳನ್ನು ತಂದು ಕೊಡುತ್ತಾರೆ. ಸ್ಥಳೀಯರು ಹಲಸು, ಮಾವು, ನೇರಳೆ, ಬಾಳೆ ಸೇರಿದಂತೆ ವಿವಿಧ ಬಗೆಯ ಹಣ್ಣುಗಳನ್ನು ಹಾಗೂ ಅಲಸಂದೆ, ಹೆಸರು, ಅವರೆ ಸೇರಿದಂತೆ ವಿವಿಧ ಕಾಳುಗಳನ್ನು ಮತ್ತು ತರಕಾರಿಗಳನ್ನು ಈ ಅಕ್ಷರ ದಾಸೋಹ ಜೋಳಿಗೆಗೆ ತಂದುಕೊಡುತ್ತಿದ್ದಾರೆ.
ಇಲ್ಲಿನ ಮಕ್ಕಳಿಗೆ ಮನೆ ಊಟದ ರೀತಿಯೇ ಭರ್ಜರಿ ಬಿಸಿಯೂಟ ಉಣ ಬಡಿಸಲಾಗುತ್ತದೆ. ಈ ಶಾಲೆಯ ಮೆನುವಿನಲ್ಲಿ ಪೌಷ್ಟಿಕ ಆಹಾರದ ಸರತಿ ಸಾಲೇ ಇದೆ. ಈ ಶಾಲೆಯಲ್ಲಿ ಮಕ್ಕಳಿಗೆ ಮುದ್ದೆ, ನುಗ್ಗೆಸೊಪ್ಪಿನ ಸಾರು, ಪಲ್ಯ, ಅನ್ನ, ಮಜ್ಜಿಗೆ, ಹೋಳಿಗೆ ಊಟ ಹೀಗೆ ದಿನವೂ ವಿಶೇಷ ಭೋಜನ ಇರಲಿದೆ.

ಸರ್ಕಾರಿ ಶಾಲೆ ಮಕ್ಕಳಿಗೆ ವಿವಿಧ ಬಗೆಯ ಸಿಹಿಯೂಟ
ಹೊಂಗಹಳ್ಳಿ ಗ್ರಾಮದಲ್ಲಿ ಏನೇ ಸಮಾರಂಭಗಳು ನಡೆದರೂ ಶಾಲಾ ಮಕ್ಕಳು ಮೊದಲ ಪಂಕ್ತಿಯ ಭೋಜನ ಸವಿಯಲಿದ್ದಾರೆ. ಇನ್ನು ಶಾಲೆಯಲ್ಲಿ ತಿಂಗಳಿಗೆ ಕನಿಷ್ಠವೆಂದರೂ ದಿನ ಬಿಟ್ಟು ದಿನ ಎಂಬಂತೆ ಒಂದೊಂದು ಸಿಹಿತಿಂಡಿ ಮಾಡಲಿದ್ದಾರೆ. ಇವರ ಬಿಸಿಯೂಟದ ಮೆನುವಿನಲ್ಲಿ ಪಾಯಸ, ರವೆ ಉಂಡೆ, ಗುಲಾಬ್ ಜಾಮುನ್, ಕೊಬ್ಬರಿ ಮಿಠಾಯಿ, ಹೋಳಿಗೆ ಕೂಡ ಸೇರಿದ್ದು ವಿದ್ಯಾರ್ಥಿಗಳ ಪಾಲಕರಗಳು ಒಂದೊಂದು ದಿನದ ಸಿಹಿ ತಿಂಡಿಯ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಇಲ್ಲಿನ ಎಲ್ಲ ವಿದ್ಯಾರ್ಥಿಗಳ ಹುಟ್ಟುಹಬ್ಬವೂ ಶಾಲೆಯಲ್ಲೇ ಆಚರಿಸಲಿದ್ದು, ಆ ದಿನವೂ ಮಕ್ಕಳಿಗೆ ಸಿಹಿ ಊಟ ಹಾಕಲಾಗುತ್ತದೆ. ಹೀಗೆ ಶಾಲೆಯ ಊಟ ಬಹು ರುಚಿಕರವಾಗಿದ್ದು, ವಿದ್ಯಾರ್ಥಿಗಳಲ್ಲಿ ಸಂತಸ ಮೂಡಿದೆ.

ನಿತ್ಯ 40 ಕಿ.ಮೀ ಸಂಚರಿಸಿ ಶಾಲೆಗಾಗಿ ಮುಖ್ಯೋಪಾಧ್ಯರ ಸೇವೆ
ಲಾಕ್ಡೌನ್ ಅವಧಿಯಲ್ಲಿಯೂ ಶಾಲೆಯ ನಂಟು ಬಿಡದೆ ನಿತ್ಯ 40 ಕಿ.ಮೀ. ಸಂಚರಿಸಿ ಪರಿಸರ ಪ್ರೀತಿ, ನೈರ್ಮಲ್ಯದೊಟ್ಟಿಗೆ ಸರ್ಕಾರದ ಆಸ್ತಿ ಕಾಪಾಡುವ ಕರ್ತವ್ಯ ನಿಷ್ಠೆಯನ್ನು ಇಲ್ಲಿನ ಮುಖ್ಯ ಶಿಕ್ಷಕ ಮಹಾದೇವಸ್ವಾಮಿ ತೋರಿದ್ದರು. ಗುಂಡ್ಲುಪೇಟೆ ತಾಲೂಕಿನ ಹೊಂಗಳ್ಳಿ ಶಾಲೆಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಬಿ.ಮಹಾದೇಶ್ವರಸ್ವಾಮಿ ಶನಿವಾರ, ಭಾನುವಾರ ಹೊರತುಪಡಿಸಿ ಲಾಕ್ಡೌನ್ ಅವಧಿಯಲ್ಲಿ ನಿತ್ಯ ಶಾಲೆಗೆ ತೆರಳಿ ಶಾಲೆಯ ಆವರಣದಲ್ಲಿ ನೈರ್ಮಲ್ಯ ಕಾಪಾಡುವ ಜತೆಗೆ ಕೊಠಡಿ, ಶೌಚಾಲಯವನ್ನು ಸ್ವಚ್ಛಗೊಳಿಸಿ ಗಿಡಗಳಿಗೆ ನೀರು, ಪಕ್ಷಿಗಳಿಗೆ ಆಹಾರ ನೀಡುವ ಕೆಲಸ ಮಾಡಿದ್ದರು.

ಸರ್ಕಾರಿ ಶಾಲೆಯ ಸುತ್ತಲೂ ಹಚ್ಚಹಸಿರು
ಸಾಮಾನ್ಯ ದಿನಗಳಲ್ಲಿ ಶಾಲೆಗೆ 8 ಗಂಟೆಗೆ ತೆರಳುತ್ತಿದ್ದಂತೆ ಲಾಕ್ಡೌನ್ ಅವಧಿಯಲ್ಲಿಯೂ ಕೂಡ ನಿತ್ಯ 8 ಗಂಟೆಗೆ ತೆರಳಿ ಒಂದಿಲ್ಲೊಂದು ಕಾರ್ಯದಲ್ಲಿ ತೊಡಗಿಕೊಂಡು ಶಾಲೆಯನ್ನು ಹಚ್ಚ ಹಸಿರಿನ ಕಾನನದಂತೆ ಕಾಪಾಡಿಕೊಂಡು ಬಂದಿದ್ದು, ಈಗಲೂ ಶಾಲೆ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಪಕ್ಷಿಗಳಿಗೆ ನೀರು, ಕಾಳು ನೀಡುವುದರ ಜೊತೆಗೆ ಶಾಲಾ ಆವರಣದಲ್ಲಿ ಕಳೆ ಕೀಳುವುದು, ಶಾಲಾ ಕೊಠಡಿಗಳನ್ನು ಸುಸ್ಥಿತಿಯಲ್ಲಿ ಇಟ್ಟಿದ್ದಾರೆ.

ವಿದ್ಯಾರ್ಥಿಗಳಿಗಾಗಿ ಅಕ್ಷರ ದಾಸೋಹ ಜೋಳಿಗೆ ಯೋಜನೆ
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹೊಂಗಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ 'ಅಕ್ಷರ ದಾಸೋಹ ಜೋಳಿಗೆ' ಎಂಬ ವಿಭಿನ್ನ ಪರಿಕಲ್ಪನೆಯಾಗಿದ್ದು, ಇದರಿಂದ ಗ್ರಾಮಸ್ಥರ ಸಹಾಯದೊಂದಿಗೆ ಪ್ರತಿನಿತ್ಯ ಶಾಲೆಯ ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ಉಣಬಡಿಸಲಾಗುತ್ತಿದೆ. ಈ ಶಾಲೆಯಲ್ಲಿ ಶಿಕ್ಷಣದ ವ್ಯವಸ್ಥೆಯೂ ಉತ್ತಮವಾಗಿದ್ದು, ಸುತ್ತಮುತ್ತಲಿನ ಗ್ರಾಮದ ಬಹುತೇಕ ವಿದ್ಯಾರ್ಥಿಗಳು ಹೊಂಗಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉತ್ತಮ ಶಿಕ್ಷಣದ ಜೊತೆಗೆ ಜೀವನ ಮೌಲ್ಯವನ್ನು ಕಲಿಯುತ್ತಿದ್ದಾರೆ.