ಬಂಡೀಪುರ: ಬಿಸಿಲ ಬೇಗೆಗೆ ಬೇಸತ್ತು ಕೆರೆಯಲ್ಲಿ ಈಜಾಡಿ ಕೂಲ್ ಆದ ವ್ಯಾಘ್ರ, ಭಾರೀ ವೈರಲ್
ಚಾಮರಾಜನಗರ, ಮಾರ್ಚ್, 13: ದಿನೇದಿನೆ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದ್ದು, ಇದರಿಂದ ಜನರು ಹೈರಾಣಾಗಿದ್ದಾರೆ. ಅಷ್ಟೆ ಅಲ್ಲದೇ ನಾಡಿನಂತೆ ಕಾಡಿನಲ್ಲೂ ಕೂಡ ಬಿಸಿಲ ಬೇಗೆಯಿಂದ ಬೇಸತ್ತ ಹುಲಿಯೊಂದು ಕಂಗಾಲಾಗಿ ಕೆರೆ ನೀರಿಗೆ ಇಳಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ನಡೆದಿದೆ.
ದೇಶದ ಜನಪ್ರಿಯ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾದ ಬಂಡೀಪುರದಲ್ಲಿ ಹುಲಿಯೊಂದು ಬಿಸಿಲ ಝಳ ತಾಳಲಾರದೇ ಕೆರೆಗೆ ಎಂಟ್ರಿ ಕೊಟ್ಟು ಈಜಾಡಿ ಮೈ ತಣಿಸಿಕೊಂಡಿದೆ. ಸದ್ಯ, ಕೆರೆಯಲ್ಲಿ ರಿಲ್ಯಾಕ್ಸ್‌ಗೆ ಜಾರಿದ ಹುಲಿಯನ್ನು ಕಂಡು ಸಫಾರಿಗೆ ತೆರಳಿದ್ದವರು ಖುಷ್ ಆಗಿದ್ದಾರೆ. ಅಲ್ಲದೆ ಈ ಹುಲಿಯ ಫೋಟೋವನ್ನು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ ಇದೀಗ ಎಲ್ಲಡೆ ಭಾರೀ ವೈರಲ್ ಆಗುತ್ತಿದೆ.

ಇನ್ನು, ಹುಲಿ ಚಿನ್ನಾಟ ಮಂಗಳವಾರ (ಮಾರ್ಚ್ 12) ನಡೆದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಅಮ್ಮನನ್ನು ಅರಸುತ್ತಾ ನಾಡಿಗೆ ಬಂದ ಮರಿಯಾನೆ: ಅಂದಾಜು 3-4 ತಿಂಗಳ ಆನೆ ಮರಿಯೊಂದು ಅಮ್ಮನನ್ನು ಅರಸುತ್ತಾ ನಾಡಿಗೆ ಬಂದ ಪ್ರಸಂಗ ಚಾಮರಾಜನಗರ ಗಡಿಭಾಗವಾದ ತಮಿಳುನಾಡಿನ ಆಸನೂರಿನ ಅರೆಪಾಳ್ಯದಲ್ಲಿ ನಡೆದಿದೆ.
ಕಳೆದ 5 ದಿನಗಳ ಹಿಂದೆ ತಮಿಳುನಾಡಿನ ಬಣ್ಣಾರಿ ಸಮೀಪ ಅನಾರೋಗ್ಯದಿಂದ ಹೆಣ್ಣಾನೆ ಅಸುನೀಗಿದ್ದು, ಆ ತಾಯಿ ಆನೆಯ ಮರಿ ಇದಾಗಿಬಹುದು ಎಂದು ಅರಣ್ಯ ಇಲಾಖೆ ಶಂಕಿಸಿದೆ. ತಾಯಿ ಅರಸುತ್ತಾ ಬಂದ ಆನೆಮರಿ ಅರೆಪಾಳ್ಯ ಗ್ರಾಮದಲ್ಲಿ ಅಡ್ಡಾಡಿದ್ದು, ಅಲ್ಲಿನ ಜನರು ಆನೆ ಕಂಡು ಚಿನ್ನಾಟ ಆಡಿದ್ದಾರೆ. ಬಳಿಕ ಮಾಹಿತಿ ಆಧರಿಸಿ ಆಸನೂರು ಅರಣ್ಯಾಧಿಕಾರಿಗಳು ಮರಿಯನ್ನು ರಕ್ಷಿಸಿ ತಮ್ಮ ಕಚೇರಿಗೆ ಕರೆತಂದು ವೈದ್ಯರಿಂದ ಆರೈಕೆ ಮಾಡಿಸಿದ್ದಾರೆ.
ಇನ್ನು, ಆನೆಮರಿಯನ್ನು ಬೇರೆ ಆನೆ ಗುಂಪಿಗೆ ಬಿಡುವುದೋ ಇಲ್ಲವೇ ಮೃಗಾಲಯಕ್ಕೆ ರವಾನೆ ಮಾಡುವ ಬಗ್ಗೆ ನಿರ್ಧರಿಸಿಲ್ಲ ಎಂದು ತಿಳಿದುಬಂದಿದೆ.
25,000 ರೂಪಾಯಿ ದಂಡ: ಇತ್ತೀಚೆಗಷ್ಟೇ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಮ ಮೀರಿ ಕಾರು ನಿಲ್ಲಿಸಿ ಕೆಳಗಿಳಿದು ಆನೆ ದಾಳಿಗೆ ಒಳಗಾಗಿದ್ದ ಪ್ರವಾಸಿಗರಿಗೆ ಅರಣ್ಯ ಇಲಾಖೆ ವಿಚಾರಣೆ ನಡೆಸಿ 25,000 ರೂಪಾಯಿ ದಂಡ ವಿದ್ಯಾರ್ಥಿಗಳು ವಿಧಿಸಿತ್ತು.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಮೂಲೆಹೊಳೆ ವಲಯದಲ್ಲಿ ಫೆಬ್ರವರಿ 1ರಂದು ಕಾರು ಬಿಟ್ಟು ಮೂತ್ರ ವಿಸರ್ಜನೆಗೆಂದು ಇಳಿದಿದ್ದ ಇಬ್ಬರ ಮೇಲೆ ಏಕಾಏಕಿ ಕಾಡಾನೆ ಅಟ್ಟಾಡಿಸಿದ ಘಟನೆ ನಡೆದಿತ್ತು.
ಕಾರೊಂದರಿಂದ ಇಳಿದ ಇಬ್ಬರನ್ನು ಹೆಣ್ಣಾನೆಯೊಂದು ಅಟ್ಟಿಸಿಕೊಂಡು ಬರುತ್ತದೆ. ಇಬ್ಬರ ಪೈಕಿ ಒಬ್ಬರು ಕೆಳಗೆ ಬೀಳುತ್ತಾರೆ. ಆನೆ, ಅವರನ್ನು ಕಾಲಿನಲ್ಲಿ ತುಳಿಯಲು ಯತ್ನಿಸುತ್ತದೆ. ಅದೃಷ್ಟವಶಾತ್ ಅದರ ಕಾಲು ಅವರ ದೇಹಕ್ಕೆ ತಾಗುವುದಿಲ್ಲ. ಹೆದ್ದಾರಿಯಲ್ಲಿ ಸಂಚರಿಸುವಾಗ ಆನೆ ಸೇರಿದಂತೆ ಇತರ ಪ್ರಾಣಿಗಳು ರಸ್ತೆ ಬದಿಯಲ್ಲಿ ಕಾಣಸಿಗುತ್ತವೆ. ಆಗ ವಾಹನಗಳನ್ನು ನಿಲ್ಲಿಸಬಾರದು ಎಂಬ ಸೂಚನೆ ಇದ್ದರೂ, ನಿಯಮ ಮೀರಿ ವಾಹನಗಳ ನಿಲ್ಲಿಸಿ ಪ್ರಾಣಿ ಪೋಟೋ ತೆಗೆಯಲು ಮುಂದಾಗುತ್ತಾರೆ. ಈ ಹಿಂದೆಯೂ ಈ ಹೆದ್ದಾರಿಯಲ್ಲಿ ಇಂತಹ ಪ್ರಕರಣಗಳು ನಡೆದಿವೆ.
ಮಾಧ್ಯಮದಲ್ಲಿ ವರದಿ ಆಧರಿಸಿ ಬಂಡೀಪುರ ಎ.ಸಿ.ಎಫ್ ಹಾಗೂ ಮೂಲೆಹೊಳೆ ಆರ್.ಎಫ್.ಓ ವಿಚಾರಣೆ ನಡೆಸಿ ಆಂದ್ರಪ್ರದೇಶದ ವಿಶಾಖಪಟ್ಟಣಂ ನಿವಾಸಿಗಳಿಗೆ 25 ಸಾವಿರ ರೂಪಾಯಿ ದಂಡ ಹಾಕಿದ್ದಾರೆ ಎಂದು ಸಿ.ಎಫ್ ರಮೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications