ನಕಲಿ ಅಂಕಪಟ್ಟಿ ಸಲ್ಲಿಸಿ ಗ್ರಾಮ ಲೆಕ್ಕಿಗ ಉದ್ಯೋಗ ಗಿಟ್ಟಿಸಿಕೊಂಡ 8 ಮಂದಿ ಪಾಡೇನಾಯ್ತು ಗೊತ್ತಾ?
ಚಾಮರಾಜನಗರ, ಜನವರಿ, 07: ನಕಲಿ ಅಂಕಪಟ್ಟಿಗಳನ್ನು ಸಲ್ಲಿಸಿ ಗ್ರಾಮ ಲೆಕ್ಕಿಗರ ಉದ್ಯೋಗ ಗಿಟ್ಟಿಸಿದ 8 ಮಂದಿ ಆರೋಪ ಸಾಬೀತಾಗಿದ್ದು, ಚಾಮರಾಜನಗರ ನ್ಯಾಯಾಲಯ 2 ವರ್ಷ ಶಿಕ್ಷೆ ವಿಧಿಸಿದೆ.
ಕೋಲಾರ ತಾಲೂಕಿನ ಸುನೀಲ್ ಕುಮಾರ್(25), ಅರಸಿಕೆರೆ ತಾಲೂಕಿನ ಸಂತೋಷ್ ಕುಮಾರ್(29, ಹಾಸನ ತಾಲೂಕಿನ ಎ.ಬಿ.ಶಂಕರ್ (39), ಮುಳಬಾಗಿಲು ತಾಲೂಕಿನ ಎಂ.ಷಣ್ಮುಗ (25), ನಾರಾಯಣಸ್ವಾಮಿ(25), ದೇವನಹಳ್ಳಿ ತಾಲೂಕಿನ ಶ್ರೀರಾಂ(27) ದೊಡ್ಡಬಳ್ಳಾಪುರ ತಾಲೂಕಿನ ಮುನಿರಾಜು(25), ಹೊಸಕೋಟೆ ತಾಲೂಕಿನ ಎಸ್.ಬಿ.ಸಿದ್ದಲಿಂಗಯ್ಯ(24) ಶಿಕ್ಷೆಗೊಳಗಾದ ಅಪರಾಧಿಗಳು.

ನಕಲಿ ಅಂಕಪಟ್ಟಿ ಮೂಲಕ ಗ್ರಾಮ ಲೆಕ್ಕಿಗ ಹುದ್ದೆ: 2012ರಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಖಾಲಿ ಇದ್ದ 46 ಗ್ರಾಮ ಲೆಕ್ಕಿಗ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿತ್ತು. ಆ ವೇಳೆ, 8 ಮಂದಿ ಅಪರಾಧಿಗಳು ನವದೆಹಲಿ ಪಿಯು ಬೋರ್ಡ್ ಹಾಗೂ ಕರ್ನಾಟಕ ಶಿಕ್ಷಣ ಇಲಾಖೆಯ ನಕಲಿ ಅಂಕಪಟ್ಟಿಗಳನ್ನು ಸಲ್ಲಿಸಿ ಉದ್ಯೋಗ ಪಡೆದಿದ್ದರು.
2013ರಲ್ಲಿ ಅಂಕಪಟ್ಟಿಗಳ ನೈಜತೆ ಪರಿಶೀಲಿಸಿದ ವೇಳೆ ನಕಲಿ ಎಂದು ತಿಳಿದುಬಂದು ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಚಾಮರಾಜನಗರ ಸಿಜೆಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಪ್ರಕರಣ ದಾಖಲಾದ ಹೊತ್ತಲ್ಲೇ 8 ಮಂದಿಯನ್ನು ಸೇವೆಯಿಂದ ತೆಗೆದು ಹಾಕಲಾಗಿತ್ತು.
ವಿಚಾರಣೆ ಪೂರ್ಣಗೊಂಡು ನಕಲಿ ಅಂಕಪಟ್ಟಿ ಕೊಟ್ಟು ವಂಚಿಸಿದ್ದು, ಸಾಬೀತಾದ ಹಿನ್ನೆಲೆ ಹಿರಿಯ ಸಿವಿಲ್ ನ್ಯಾ.ಹೊನ್ನುಸ್ವಾಮಿ 8 ಮಂದಿಗೆ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ. ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಎ.ಸಿ.ಮಹೇಶ್ ವಾದ ಮಂಡಿಸಿದ್ದರು.












Click it and Unblock the Notifications