ಕೊಳ್ಳೇಗಾಲ: ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ 4 ಹೆಕ್ಟೇರ್ ಕಬ್ಬು ಬೆಳೆ ಸುಟ್ಟು ಭಸ್ಮ
ಚಾಮರಾಜನಗರ, ಜುಲೈ, 14: ಜೋತುಬಿದ್ದ ವಿದ್ಯುತ್ ತಂತಿ ತಗುಲಿ ನಾಲ್ಕು ಹೆಕ್ಟೇರ್ ಕಬ್ಬು ಭಸ್ಮವಾದ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಗುಂಡೇಗಾಲ ಗ್ರಾಮದಲ್ಲಿ ಘಟನೆ.
ಗುಂಡೇಗಾಲ ಗ್ರಾಮದ ಮಹದೇವಪ್ರಭು ಎಂಬವರಿಗೆ ಸೇರಿದ ಜಮೀನಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ರೈತ ಬೆಳೆದಿದ್ದ ಕಬ್ಬು ಬೆಳೆ ನಾಶವಾದ ದುರ್ಘಟನೆ ನಡೆದಿದೆ. ಕಳೆದ ವರ್ಷವೂ ಒಂದೂವರೆ ಹೆಕ್ಟೇರ್ ಕಬ್ಬು ಕಳೆದುಕೊಂಡಿದ್ದ ಈ ಕುಟುಂಬ ಇದೀಗ ಮತ್ತೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ನಾಲ್ಕು ಹೆಕ್ಟೇರ್ ಕಬ್ಬು ಹಾಗೂ ಪೈಪ್ ಲೈನ್ ಸೇರಿದಂತೆ ಅಪಾರ ಪ್ರಮಾಣ ನಷ್ಟವಾಗಿದೆ. ಇದರಿಂದ ರೈತರ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನು ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿ ಬೆಂಕಿ ನಂದಿಸುವ ಕೆಲಸವನ್ನು ಮಾಡಿದ್ದಾರೆ. ಈ ಮೂಲಕ ಹೆಚ್ಚಿನ ಅನಾಹುತ ಆಗದಂತೆ ತಡೆಯುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದೆ. ಇನ್ನು ಪದೇ ಪದೇ ಆಗುತ್ತಿರುವ ದುರ್ಘಟನೆಯಿಂದ ಜಮೀನನ್ನೇ ಮಾರಾಟ ಮಾಡಲು ರೈತನ ಕುಟುಂಬ ನಿರ್ಧಾರ ಮಾಡಿದೆ ಎಂದು ತಿಳಿದುಬಂದಿದೆ. ಇನ್ನು ಚೆಸ್ಕಾಂ ಅಧಿಕಾರಿಗಳಿಗೆ ಈ ಬಗ್ಗೆ ಎಷ್ಟು ಬಾರಿ ಹೇಳಿದರೂ ಕ್ರಮ ಕೈಗೊಳ್ಳುತ್ತಿಲ್ಲವೆಂಬ ಆರೋಪವನ್ನು ಕುಟುಂಬಸ್ಥರು ಮಾಡಿದ್ದಾರೆ.
ಕನ್ನಡಪರ ಹೋರಾಟಗಾರರ ದಿಢೀರ್ ಪ್ರತಿಭಟನೆ: ಹೋರಾಟದ ವಿರುದ್ಧ ಹೋರಾಟ ಎಂಬಂತೆ ರೈತ ಸಂಘಟನೆ(ಡಾ.ಗುರುಪ್ರಸಾದ್ ಬಣ)ದ ವಿರುದ್ಧ ಕನ್ನಡಪರ ಹೋರಾಟಗಾರರು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಚಾಮರಾಜನಗರದ ಜಿಲ್ಲಾಡಳಿತ ಭವನ ಮುಂಭಾಗ ನಡೆಯಿತು.
ಶನಿವಾರ ಸಂಜೆ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಕೆಂಪೇಗೌಡರ ಜಯಂತಿ ನಡೆಯಲಿದ್ದು, ಇದಕ್ಕೆ ಮುಖ್ಯ ಅತಿಥಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಬರುತ್ತಿದ್ದಾರೆ.
ವಿಚಾರ ತಿಳಿದ ರೈತರು, ಸಿಎಂ ಕಾರ್ಯಕ್ರಮದಲ್ಲಿ ಕೊಟ್ಟ ಮನವಿ ಪತ್ರಗಳನ್ನು ಬಿಸಾಡಿ ಹೋಗಿದ್ದರ ಸಂಬಂಧ ಸ್ಪಷ್ಟನೆ ಕೇಳಲು ಜಿಲ್ಲಾಡಳಿತ ಭವನ ಮುಂಭಾಗ ಕುಳಿತಾಗ ಕನ್ನಡಪರ ಹೋರಾಟಗಾರರು ರೈತ ಸಂಘಟನೆ ವರ್ತನೆ ವಿರುದ್ಧ ಪ್ರತಿಭಟನೆ ನಡೆಸಿದರು.
ಕೆಂಪೇಗೌಡರ ಜಯಂತಿ ಸುಸೂತ್ರವಾಗಿ ನಡೆಯಲು ಬಿಡದೇ ಘೆರಾವ್ ಹಾಕಲು ಬಂದಿದ್ದಾರೆ ಎಂದು ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಬಳಿಕ, ಪೊಲೀಸರು ಎರಡು ಗುಂಪುಗಳನ್ನು ಸಮಾಧಾನ ಪಡಿಸಿದರು.
ಸಚಿವ ವೆಂಕಟೇಶ್ ಸ್ಪಷ್ಣನೆ: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕೊಟ್ಟ ಮನವಿ ಪತ್ರಗಳು ಕಸದರಾಶಿಯಲ್ಲಿ ಪತ್ತೆ ಆದ ಬಗ್ಗೆ ರೈತ ಮುಖಂಡ ಡಾ.ಗುರುಪ್ರಸಾದ್ ಸಚಿವ ಕೆ.ವೆಂಕಟೇಶ್ ಬಳಿ ಸ್ಪಷ್ಟನೆ ಕೇಳಿದರು. ಸಿಎಂ ಮರೆತು ಹೋಗಿರಬಹುದು, ಆದರೆ ಕಸದ ಬುಟ್ಟಿಗೆ ಎಸೆದಿರುವುದಿಲ್ಲ ಎಂದು ರೈತರಿಗೆ ಸಚಿವ ಕೆ.ವೆಂಕಟೇಶ್ ಸಮಾಜಾಯಿಷಿ ನೀಡಲು ಹೆಣಗಾಡಿದರು.
ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲಿ ಎಂಬ ಉದ್ದೇಶದಿಂದ ಮನವಿ ಪತ್ರ ಕೊಡುತ್ತಾರೆ. ಅಂತಹದರಲ್ಲಿ ಬಿಸಾಡಿ ಹೋದರೇ ಪ್ರಜಾಪ್ರಭುತ್ವಕ್ಕೆ ಬೆಲೆ ಇಲ್ಲಾವಾ? ಎಂದು ಸಚಿವರನ್ನು ಪ್ರಶ್ನಿಸುವ ಮೂಲಕ ರೈತರು ತರಾಟೆಗೆ ತೆಗೆದುಕೊಂಡರು. ಸಿದ್ದರಾಮಯ್ಯ ರೈತರ ಕ್ಷಮೆ ಕೇಳಬೇಕು. ಸಂಬಂಧಪಟ್ಟ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿ ಮನವಿ ಕಸದರಾಶಿಯಲ್ಲಿ ಸಿಕ್ಕಿದ್ದ ಮನವಿ ಪತ್ರದ ಜೆರಾಕ್ಸ್ ಪ್ರತಿಯನ್ನು ಸಚಿವರಿಗೆ ನೀಡಿದರು.












Click it and Unblock the Notifications