ಅತ್ಯಧಿಕ ಬಿಯರ್ ಮಾರಾಟದಲ್ಲಿ ರಾಜ್ಯಕ್ಕೆ ಚಾಮರಾಜನಗರ ಜಿಲ್ಲೆ 2ನೇ ಸ್ಥಾನ, ನಂಬರ್ 1 ಯಾವ್ದು ಹಾಗೂ ಸೂಕ್ತ ಕಾರಣ ಏನು?
ಚಾಮರಾಜನಗರ, ಫೆಬ್ರವರಿ, 05: ನಗರ ಪ್ರದೇಶಗಳಲ್ಲಿ ಮಾತ್ರ ಬಿಯರ್ ಸೇವನೆ ಹೆಚ್ಚು ಎನ್ನುವುದು ಈಗ ಬದಲಾಗಿದ್ದು, ಚಾಮರಾಜನಗರದ ಗುಂಡುಪ್ರಿಯರು ಈಗ ಬಿಯರ್‌ನತ್ತ ಹೊರಳಿದ್ದಾರೆ. ಹಾಗೆಯೇ ರಾಜ್ಯದಲ್ಲಿ ಅತ್ಯಧಿಕ ಬಿಯರ್ ಮಾರಾಟದಲ್ಲಿ ಚಾಮರಾಜನಗರ 2ನೇ ಸ್ಥಾನದಲ್ಲಿದೆ. ಹಾಗಾದರೆ 1ನೇ ಸ್ಥಾನ ಯಾವುದಕ್ಕೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಅಬಕಾರಿ ಇಲಾಖೆ ಕೊಟ್ಟಿರುವ ಅಂಕಿಅಂಶಗಳ ಪ್ರಕಾರ 2023 ಡಿಸೆಂಬರ್ ಹಾಗೂ ಕಳೆದ ಜನವರಿಯಲ್ಲಿ ರಾಜ್ಯದಲ್ಲೇ ಅತ್ಯಧಿಕ ಬಿಯರ್ ಮಾರಾಟಗೊಂಡ ಜಿಲ್ಲೆಗಳಲ್ಲಿ ಚಾಮರಾಜನಗರ ಎರಡನೇ ಸ್ಥಾನದಲ್ಲಿದ್ದು, ಮೊದಲ ಸ್ಥಾನದಲ್ಲು ತುಮಕೂರಿದೆ. ಬೇಸಿಗೆ ಸಂದರ್ಭದಲ್ಲಿ ಮಾತ್ರ ಬಿಯರ್ ಮಾರಾಟ ಚೇತರಿಕೆ ಕಾಣುತ್ತಿದ್ದ ಚಾಮರಾಜನಗರದಲ್ಲಿ ಇದೀಗ ಬಿಯರ್ ಮಾರಾಟವೇ ಅಧಿಕವಾಗಿದ್ದು, ಭಾರತೀಯ ಮದ್ಯಕ್ಕೆ ಹೋಲಿಸಿದರೇ ಬಿಯರ್ ಮಾರಾಟ ವೇಗ ಪಡೆದುಕೊಂಡಿದೆ.

ಎಷ್ಟು ಮಾರಾಟ? ಹಾಗೂ ನಿರೀಕ್ಷಿತ ಆದಾಯ ಎಷ್ಟು?
ಚಾಮರಾಜನಗರ ಜಿಲ್ಲೆಯಲ್ಲಿ ಚಾಮರಾಜನಗರ, ಯಳಂದೂರು, ಗುಂಡ್ಲುಪೇಟೆ, ಕೊಳ್ಳೇಗಾಲ ಎಂಬ ಒಟ್ಟು 4 ವಲಯಗಳಿದ್ದು, 2022-23ರಲ್ಲಿ 2,63,756 ಲಕ್ಷ ಕೇಸ್ ಬಿಯರ್ ಮಾರಾಟ ಆಗಿತ್ತು. 2023-24ರಲ್ಲಿ ಇದು 3,42,414 ಕೇಸ್ ಮಾರಾಟ ಆಗಿದ್ದು ಶೇಕಡಾ 30ರಷ್ಟು ಬಿಯರ್ ಮಾರಾಟ ಅಧಿಕವಾಗಿದೆ. ಅಂದರೆ, 78,658 ಲಕ್ಷ ಕೇಸ್ ಹೆಚ್ಚು ಮಾರಾಟ ಆಗಿದೆ ಎಂದು ತಿಳಿದುಬಂದಿದೆ.
ಐಎಂಎಲ್ (ಭಾರತೀಯ ಮದ್ಯ) ಮಾರಾಟವು ಅಧಿಕವಾಗಿದ್ದು, 2022-23ರಲ್ಲಿ 8,46,255 ಕೇಸ್ ಮಾರಾಟವಾಗಿದ್ದರೆ, 8,73,669 ಕೇಸ್ ಮಾರಾಟವಾಗಿದ್ದು ಶೇಕಡಾ 3.24ರಷ್ಟು ಮದ್ಯ ಮಾರಾಟ ಅಧಿಕವಾಗಿದೆ.
ಅತ್ಯಧಿಕ ಬಿಯರ್ ಮಾರಾಟಕ್ಕೆ ಕಾರಣ ಏನು?: ಚಾಮರಾಜನಗರದಲ್ಲಿ ಕೂಲಿ ಹಾಗೂ ಕೆಳ ಮಧ್ಯಮ ವರ್ಗದ ಜನರೇ ಹೆಚ್ಚು ಮದ್ಯ ಸೇವನೆ ಮಾಡಲಿದ್ದು ಕೊಳ್ಳುವ ಶಕ್ತಿ ಕಡಿಮೆ. ಈ ಹಿನ್ನೆಲೆಯಲ್ಲಿ, ಮದ್ಯಕ್ಕೆ ಹೋಲಿಸಿದರೇ ಬಿಯರ್ ಬೆಲೆ ಕಡಿಮೆ ಇದ್ದು, ಬಿಯರ್ ಮತ್ತು ಸ್ವಲ್ಪ ಅಗ್ಗದ ಮದ್ಯ ಎರಡನ್ನೂ ಸೇವಿಸುವ ಪ್ರವೃತ್ತಿ ಹೆಚ್ಚಾಗಿದೆ. ಆದ್ದರಿಂದ ಬಿಯರ್ ಮಾರಾಟ ಹೆಚ್ಚಾಗಿರಬಹುದು ಎಂದು ಚಾಮರಾಜನಗರ ಅಬಕಾರಿ ಆಯುಕ್ತ ನಾಗಶಯನ ತಿಳಿಸಿದ್ದಾರೆ. ಇನ್ನು, ನಿರೀಕ್ಷಿತ ಆದಾಯವು ಏರಿಕೆ ಕಂಡಿರುವುದಾಗಿ ಆಯುಕ್ತರು ಮಾಹಿತಿ ಕೊಟ್ಟಿದ್ದಾರೆ.












Click it and Unblock the Notifications