ಶಿವರಾತ್ರಿಗೂ ಮುನ್ನ ಮಲೆಮಹದೇಶ್ವರ ಬೆಟ್ಟದಲ್ಲಿ ಸಂಗ್ರಹವಾದ ಕಾಣಿಕೆ ಎಷ್ಟು?
ಚಾಮರಾಜನಗರ, ಫೆಬ್ರವರಿ 21: ಮಹಾ ಶಿವರಾತ್ರಿ ಮುನ್ನವೇ ಹನೂರು ತಾಲೂಕಿನಲ್ಲಿರುವ ಮಲೆಮಹದೇಶ್ವರ ಬೆಟ್ಟದಲ್ಲಿರುವ ಮಲೆಮಹದೇಶ್ವರ ದೇಗುಲದ ಹುಂಡಿ ಹಣವನ್ನು ಎಣಿಕೆ ಮಾಡಲಾಗಿದ್ದು, 28 ದಿನಗಳ ಅವಧಿಯಲ್ಲಿ ಒಂದು ಕೋಟಿ ತೊಂಭತ್ತು ನಾಲ್ಕು ಲಕ್ಷದ ನವತ್ತೊಂಭತ್ತು ಸಾವಿರದ ಇನ್ನೂರು ತೊಂಭತ್ತ ಮೂರು(1,94,49,296) ರೂಪಾಯಿ ಕಾಣಿಕೆ ಸಂಗ್ರಹವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹುಂಡಿ ಎಣಿಕೆನ್ನು ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಸಾಲೂರು ಮಠಾಧಿಪತಿ ಶ್ರೀ ಶಾಂತ ಮಲ್ಲಿಕಾರ್ಜುನಸ್ವಾಮಿ ಸಮ್ಮುಖದಲ್ಲಿ, ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ರಘು ನೇತೃತ್ವದಲ್ಲಿ ನಡೆಸಲಾಗಿದೆ. ಈ ವೇಳೆ ಕಾಣಿಕೆ ಹಣದೊಂದಿಗೆ ಕಾಣಿಕೆಯೊಂದಿಗೆ 63 ಗ್ರಾಂ 6 ಮಿಲಿ ಚಿನ್ನ , ಒಂದು ಕೆ.ಜಿ 510 ಗ್ರಾಂ ಬೆಳ್ಳಿ ಆಭರಣಗಳು ಹುಂಡಿಗೆ ಕಾಣಿಕೆಯಾಗಿ ಭಕ್ತರು ಹಾಕಿರುವುದು ಕಂಡು ಬಂದಿದೆ. ಇಷ್ಟೇ ಅಲ್ಲದೆ 11 ವಿದೇಶಿ ನೋಟುಗಳು ದೊರೆತಿದೆ. ಇದರ ಜತೆಗೆ ಪ್ರತಿ ಬಾರಿಯೂ ಚಲಾವಣೆಯಿಲ್ಲದ 2 ಸಾವಿರ ರೂ ಮುಖ ಬೆಲೆಯ ನೋಟುಗಳು ಸಿಗುತ್ತಿದ್ದು, ಈ ಬಾರಿಯೂ 6 ನೋಟುಗಳು ದೊರೆತಿವೆ.

ಇದೆಲ್ಲದರ ನಡುವೆ ಶಿವರಾತ್ರಿಯ ಮಹಾಜಾತ್ರೆಗೆ ಮಲೆಮಹದೇಶ್ವರ ಬೆಟ್ಟ ಸರ್ವ ರೀತಿಯಲ್ಲಿಯೂ ಸಜ್ಜಾಗುತ್ತಿದ್ದು, ಭಕ್ತರು ಈಗಾಗಲೇ ಮಲೆಮಹದೇಶ್ವರ ಬೆಟ್ಟದತ್ತ ಪಾದಯಾತ್ರೆ ಕೈಗೊಳ್ಳುತ್ತಿರುವುದು ಕಂಡು ಬರುತ್ತಿದೆ. ದೂರದಿಂದ ಬರುವ ಯಾತ್ರಿಗಳು ಈಗಾಗಲೇ ಮಲೆಮಹದೇಶ್ವರ ಬೆಟ್ಟದತ್ತ ಹೆಜ್ಜೆಯಿಟ್ಟಿದ್ದಾರೆ. ಮಾದಪ್ಪನಿಗೆ ಹರಕೆ ಹೊತ್ತ ಭಕ್ತರು ಕಾಲ್ನಡಿಗೆ ಮೂಲಕ ತೆರಳಿ ಹರಕೆ ತೀರಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ.
ಮಹಾಶಿವರಾತ್ರಿ ಜಾತ್ರೆ ಈ ಬಾರಿ ಫೆ.26ರಂದು ನಡೆಯುತ್ತಿದ್ದು, ಈಗಾಗಲೇ ಭಕ್ತರು ಸಾಗರೋಪಾದಿಯಲ್ಲಿ ಪಾದಯಾತ್ರೆ ಮೂಲಕ ಬರುತ್ತಿದ್ದಾರೆ. ಈ ಪೈಕಿ ತಮಿಳುನಾಡಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದು, ಇವರೊಂದಿಗೆ ಬೆಂಗಳೂರು, ಕೋಲಾರ, ರಾಮನಗರ, ಕನಕಪುರ, ಮಂಡ್ಯ ಜಿಲ್ಲೆಯಿಂದಲೂ ಭಕ್ತರು ಬರುತ್ತಿದ್ದು, ಇವರೆಲ್ಲರೂ ಕಾವೇರಿ ವನ್ಯಧಾಮದ ಸಂಗಮ ವಲಯದ ಕಾವೇರಿ ನದಿ ದಾಟಿ ಹನೂರು ವನ್ಯಜೀವಿ ವಲಯದ ಬಸವನಕಡಕ್ಕೆ ಬರಬೇಕಾಗಿದೆ.
ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ವರ್ಷದ ಇತರೆ ದಿನಗಳಲ್ಲಿಯೂ ಭಕ್ತರು ಸಾಗುತ್ತಾರೆ. ಆದರೆ ಶಿವರಾತ್ರಿ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾದಯಾತ್ರೆ ನಡೆಸುತ್ತಾರೆ. ಸಂಕಲ್ಪ ಮಾಡಿಕೊಂಡವರು ಅದು ಈಡೇರಿದ ಹಿನ್ನಲೆಯಲ್ಲಿ ಹರಕೆ ತೀರಿಸುತ್ತಾರೆ. ಇನ್ನು ಕೆಲವು ಯುವಕರು ವಿವಾಹಯೋಗ ಕರುಣಿಸುವಂತೆ ಬೇಡಿಕೊಂಡು ಪಾದಯಾತ್ರೆ ನಡೆಸುವುದು ಇತ್ತೀಚೆಗೆ ಹೆಚ್ಚಾಗಿ ಕಂಡು ಬರುತ್ತಿದೆ.

ಅರಣ್ಯದಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ
ದೂರದಿಂದ ಬರುವ ಪಾದಯಾತ್ರಿಗಳಿಗೆ ಅಲ್ಲಲ್ಲಿ ಊಟದ ವ್ಯವಸ್ಥೆಯಲ್ಲಿ ಊರಿನ ದಾನಿಗಳು ಮಾಡುವುದು ಮಾಮೂಲಿಯಾಗಿದೆ. ಇನ್ನು ಭಕ್ತರ ಸಂಖ್ಯೆ ಹೆಚ್ಚುತ್ತಿದ್ದಂತೆಯೇ ಸಮಸ್ಯೆಗಳು ಎದುರಾಗುತ್ತಿದ್ದು ಕಳೆದ ವರ್ಷ ಭಕ್ತರು ಪ್ಲಾಸಿಕ್ ಬಾಟಲಿ ಹಾಗೂ ಊಟದ ತಟ್ಟೆಗಳನ್ನು ನದಿ ತೀರ ಹಾಗೂ ಅರಣ್ಯದೊಳಗೆ ಎಲ್ಲೆಂದರಲ್ಲಿ ಬಿಸಾಡುವುದು ಕಂಡು ಬರುತ್ತದೆ ಇದರ ತಡೆಗೆ ಅರಣ್ಯ ಇಲಾಖೆ ನದಿ ತೀರ ಹಾಗೂ ದಾರಿಯುದ್ದಕ್ಕೂ ಅಲ್ಲಲ್ಲಿ ಕಸ ಹಾಕಲು ಜಾಗವನ್ನು ಗುರುತಿಸಿ ತಾತ್ಕಾಲಿಕ ಕಸದ ಬುಟ್ಟಿಗಳ ವ್ಯವಸ್ಥೆ ಮಾಡುತ್ತಿದೆ. ನದಿ ದಾಟಿ ಬರುವ ಭಕ್ತರು ಅರಣ್ಯ ಪ್ರದೇಶದಲ್ಲಿ ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಅಷ್ಟೇ ಅಲ್ಲದೆ ಅರಣ್ಯದಲ್ಲಿ ಸಂಜೆ 6ಗಂಟೆಯ ನಂತರ ಪಾದಯಾತ್ರೆ ಮಾಡದಿರುವುದು ಒಳ್ಳೆಯದು ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.












Click it and Unblock the Notifications