ಟಿಸಿಎಸ್ ಸಂಸ್ಥೆಯಿಂದ ಈ ವರ್ಷವೇ 40, 000 ಹೊಸ ನೇಮಕಾತಿ
ಚೆನ್ನೈ, ಏಪ್ರಿಲ್ 17: ಟಿಸಿಎಸ್, ಇನ್ಫೋಸಿಸ್, ವಿಪ್ರೋ, ಎಚ್‌ಸಿಎಲ್, ಕಾಂಗ್ನಿಝೆಂಟ್ ಹಾಗೂ ಕ್ಯಾಪ್‌ಜೆಮಿನಿ ಸೇರಿದಂತೆ ಪ್ರಮುಖ ಐಟಿ ಕಂಪನಿಗಳು ತಮ್ಮ ನೇಮಕಾತಿ ಗುರಿಗಳನ್ನು ಹೊಂದಿದ್ದು, ಈ ಹಣಕಾಸು ವರ್ಷದಲ್ಲಿ ಸುಮಾರು 3 ಲಕ್ಷ ನೇಮಕಾತಿ ಘೋಷಿಸಿದ ಸುದ್ದಿ ಓದಿರುತ್ತೀರಿ. ಈ ಪೈಕಿ ದೇಶದ ಅತಿದೊಡ್ಡ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) ಹೊಸ ನೇಮಕಾತಿ ಬಗ್ಗೆ ವಿವರ ಇಲ್ಲಿದೆ...
ಮಾರ್ಚ್ 31,2022ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯು ನಿವ್ವಳ ಆಧಾರದ ಮೇಲೆ 35,209 ಜನರನ್ನು ನೇಮಿಸಿಕೊಂಡಿದೆ ಎಂದು ಟಿಸಿಎಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಇದರ ಬೆನ್ನಲ್ಲೇ ಪ್ರಸಕ್ತ ವರ್ಷದಲ್ಲಿ 40, 000 ಹೊಸ ನೇಮಕಾತಿ ಘೋಷಿಸಿದೆ.
ಕೊರೊನಾವೈರಸ್ ಸಾಂಕ್ರಾಮಿಕ ಹರಡುವಿಕೆಯಿಂದ ಕಳೆದ ಎರಡ್ಯ್ ವರ್ಷಗಳಲ್ಲಿ ಐಟಿ ಉದ್ಯಮದ ಆರ್ಥಿಕ ಹಿನ್ನಡೆ ಅನುಭವಿಸಿದರೂ ನೇಮಕಾತಿ ಜಾರಿಯಲ್ಲಿತ್ತು. ಸದ್ಯ ಆರ್ಥಿಕ ಕುಸಿತದಿಂದ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಅತಿದೊಡ್ಡ ಐಟಿ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ 2022-23ರ ಆರ್ಥಿಕ ವರ್ಷದಲ್ಲಿ 40,000 ವ್ಯಕ್ತಿಗಳನ್ನು ನೇಮಿಸಿಕೊಳ್ಳಲು ಯೋಜಿಸಿದೆ ಎಂದು ಪ್ರಕಟಿಸಿದೆ. ಜಾಗತಿಕ ಸಾಂಕ್ರಾಮಿಕ ರೋಗದಿಂದ ಉಂಟಾದ ಆರ್ಥಿಕ ಹಿಂಜರಿತದ ಹೊರತಾಗಿಯೂ, ಐಟಿ ಕಂಪನಿಯು 2021ರಲ್ಲಿ 40,165 ಐಟಿ ಉದ್ಯೋಗಿಗಳನ್ನು ನೇಮಿಸಿಕೊಂಡಿತ್ತು.

ಪ್ರಸ್ತುತ 5,92,125 ಉದ್ಯೋಗಿಗಳಿದ್ದಾರೆ
2022-23 ಕ್ಕೆ 40,000 ಉದ್ಯೋಗಿಗಳನ್ನು ನೇಮಿಸಿಕೊಳ್ಳಲಾಗುತ್ತಿದ್ದು, ಫ್ರೆಶರ್ಸ್ ಅಲ್ಲದೆ, ಬೇಡಿಕೆಗೆ ಅನುಗುಣವಾಗಿ ಪದವೀಧರ ಹಾಗೂ ಸ್ನಾತಕೋತ್ತರ ಪದವೀಧರರನ್ನು ನೇಮಿಸಿಕೊಳ್ಳಲಾಗುತ್ತದೆ" ಎಂದು ಟಿಸಿಎಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಗೋಪಿನಾಥನ್ ಹೇಳಿದ್ದಾರೆ. ಟಿಸಿಎಸ್ ಸಂಸ್ಥೆಯಲ್ಲಿ ಪ್ರಸ್ತುತ 5,92,125 ಉದ್ಯೋಗಿಗಳಿದ್ದಾರೆ.

MA ಪಡೆದಿರುವರಿಗೂ ಅವಕಾಶ
ಪ್ರಸಕ್ತ ವರ್ಷ ನೇಮಕಾತಿಯಲ್ಲಿ MSc ಮತ್ತು MA ಪಡೆದಿರುವರಿಗೂ ಅವಕಾಶ ಸಿಗಲಿದೆ. 2020, 2021 ಹಾಗೂ 2022ರಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಟಿಸಿಎಸ್ ಅಧಿಕೃತ ವೆಬ್ ತಾಣದಲ್ಲಿ ಏಪ್ರಿಲ್ 20ರೊಳಗೆ ನೋಂದಣಿ ಮಾಡಿಕೊಳ್ಳಬಹುದು.
''2021-22ರ ಆರ್ಥಿಕ ವರ್ಷದಲ್ಲಿ 40 ಸಾವಿರ ಹೊಸ ನೇಮಕಾತಿ ಸಾಧಿಸಿದ ಟಿಸಿಎಸ್, ಕೆಲ ತಿಂಗಳುಗಳಲ್ಲೇ ಒಟ್ಟಾರೆ ಉದ್ಯೋಗಿಗಳ ಸಂಖ್ಯೆಯನ್ನು ದಾಖಲೆಯ 5 ಲಕ್ಷ ಸಂಖ್ಯೆಗೇರಿಸಿಕೊಂಡಿತ್ತು. ಪ್ರಸಕ್ತ ವರ್ಷದಲ್ಲಿ ನೇಮಕಾತಿ ಪ್ರಮಾಣ ಇನ್ನಷ್ಟು ಏರಿಕೆಯಾಗಬಹುದು,''ಎಂದು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಸಂಸ್ಥೆ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಮಿಲಿಂದ್ ಲಕ್ಕಡ್ ಹೇಳಿದ್ದಾರೆ.

50 ಸಾವಿರಕ್ಕೂ ಅಧಿಕ ಫ್ರೆಶರ್ಸ್ ನೇಮಕ
ಇನ್ನೊಂದೆಡೆ, ಇನ್ಫೋಸಿಸ್ ಪ್ರಸಕ್ತ ಆರ್ಥಿಕ ವರ್ಷದಲ್ಲಿ 50 ಸಾವಿರಕ್ಕೂ ಅಧಿಕ ಫ್ರೆಶರ್ಸ್ ಸೇರಿದಂತೆ 80, 000 ಹೊಸ ನೇಮಕಾತಿ ಘೋಷಿಸಲಾಗಿದೆ. ಮೂರನೇ ತ್ರೈಮಾಸಕ ಅವಧಿಯಲ್ಲಿ ಶೇ 25.5 ರಷ್ಟಿದ್ದ ಕಂಪನಿಯ ಕ್ಷೀಣತೆ(attrition) ದರ ಈ ತ್ರೈಮಾಸಿಕದಲ್ಲಿ ಶೇ 27.7ಕ್ಕೇರಿದೆ.
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಇನ್ಫೋಸಿಸ್, ವಿಪ್ರೋ ಸಂಸ್ಥೆಗಳು ಕಳೆದ ಆರ್ಥಿಕ ವರ್ಷದಲ್ಲಿ ಬೇರೆ ಐಟಿ ಕಂಪನಿಗಳಿಗೆ ಹೋಲಿಸಿದರೆ ಶೇ 45ರಷ್ಟು ಅಧಿಕ ನೇಮಕಾತಿ ಮಾಡಿಕೊಂಡಿವೆ. ಕೊರೊನಾ ಕಾಲದಲ್ಲಿಸರ್ಕಾರಿ ಸಂಸ್ಥೆಗಳು ಸೇರಿದಂತೆ ಅನೇಕ ಸಂಸ್ಥೆಗಳು ಡಿಜಿಟಲ್ ಸೇವೆಗೆ ಹೆಚ್ಚಿನ ಬೇಡಿಕೆ ಒಡ್ಡಿದ್ದರಿಂದ ಟಾಪ್ 3 ಸಂಸ್ಥೆಗಳಲ್ಲಿ ಹೆಚ್ಚಿನ ನೇಮಕಾತಿ ನಡೆದಿದೆ.

ಹೈಬ್ರೀಡ್ ಮಾದರಿ ವ್ಯವಸ್ಥೆ
ಕೊವಿಡ್ ಮಾರ್ಗಸೂಚಿಯಂತೆ ಸಾಂಕ್ರಾಮಿಕ ಹರಡುವಿಕೆ ಹೆಚ್ಚಾಗಿದ್ದ ಕಾಲದಲ್ಲಿ ಶೇ 5 ರಷ್ಟು ಜನರು ಮಾತ್ರ ಕಚೇರಿಗಳಿಂದ ಕೆಲಸ ಮಾಡುತ್ತಿದ್ದರು. ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಬಂದ ನಂತರದಲ್ಲಿ ಪ್ರಮುಖ ಐಟಿ ಕಂಪೆನಿ ಟಿಸಿಎಸ್ (TCS ) ಎರಡು ವರ್ಷಗಳ ವರ್ಕ್ ಫ್ರಂ ಹೋಮ್ ಕೊನೆಗೊಳಿಸಿ ಕಚೇರಿಗೆ ಮರಳುವಂತೆ ಸೂಚನೆಯನ್ನು ನೀಡಿದೆ.
TCS ತನ್ನ 25 /25 ಮಾದರಿಯ ತಯಾರಿಯಲ್ಲಿ ತನ್ನ ಉದ್ಯೋಗಿಗಳನ್ನು ಮತ್ತೆ ಕಚೇರಿಗಳಿಗೆ ಕರೆಸುತ್ತಿದೆ, ಇದು 2025 ರ ವೇಳೆಗೆ ಕಾರ್ಯಗತಗೊಳ್ಳುವ ನಿರೀಕ್ಷೆಯಿದೆ.ಹೈಬ್ರಿಡ್ ಮಾದರಿಯು ಯಾವುದೇ ನಿರ್ದಿಷ್ಟ ಹಂತದಲ್ಲಿ ಕೇವಲ 25 ಪ್ರತಿಶತದಷ್ಟು ಉದ್ಯೋಗಿಗಳು ಮಾತ್ರ ಕಚೇರಿಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ಅಲ್ಲದೆ, ಉದ್ಯೋಗಿಗಳು ತಮ್ಮ ಕೆಲಸದ ಶೇಕಡಾ 25 ಕ್ಕಿಂತ ಹೆಚ್ಚು ಸಮಯವನ್ನು ಕಳೆಯಬೇಕಾಗಿಲ್ಲ.












Click it and Unblock the Notifications