ಸಾಲ ಮುಂದೂಡಿಕೆ ಅವಧಿಯಲ್ಲಿ ಬಡ್ಡಿ ವಿಧಿಸುವುದು ಸರಿಯಲ್ಲ: ಸುಪ್ರೀಂ ಕೋರ್ಟ್
ನವದೆಹಲಿ, ಜೂನ್ 18: ರಾಷ್ಟ್ರವ್ಯಾಪಿ ಲಾಕ್‌ಡೌನ್ ಅವಧಿಯಲ್ಲಿ ಸಾಲಗಳ ಇಎಂಐ ಮರುಪಾವತಿ ಮುಂದೂಡಿಕೆ ಅವಧಿಯಲ್ಲಿನ ಬಡ್ಡಿ ಮೇಲೆ ಬಡ್ಡಿ ವಿಧಿಸುವುದಕ್ಕೆ ಯಾವುದೇ ಅರ್ಹತೆಯೇ ಇಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಲಾಕ್‌ಡೌನ್ ಅವಧಿಯಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಕಂತು ಮರುಪಾವತಿ ಮುಂದೂಡಿಕೆ ಅವಧಿಯನ್ನು ನಿಗದಿ ಮಾಡಿದ ಮೇಲೆ ಅದರ ಅಪೇಕ್ಷಿತ ಉದ್ದೇಶ ಈಡೇರಬೇಕು. ಈ ವಿಷಯದಲ್ಲಿ ಕೇಂದ್ರ ಸರ್ಕಾರವು ಮಧ್ಯ ಪ್ರವೇಶಿಸಬೇಕು. ಪ್ರತಿಯೊಂದು ನಿರ್ಧಾರವನ್ನು ಬ್ಯಾಂಕ್ ವಿವೇಚನೆಗೆ ಬಿಟ್ಟುಕೊಡಬಾರದು ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಬಡ್ಡಿ ಮನ್ನಾ ಆದರೆ ಬ್ಯಾಂಕುಗಳಿಗೆ 2 ಲಕ್ಷ ಕೋಟಿ ರುಪಾಯಿ ನಷ್ಟ: ಆರ್‌ಬಿಐ
ಆಗ್ರಾದ ನಿವಾಸಿ ಗಜೇಂದ್ರ ಶರ್ಮಾ ಅವರು, ಸಾಲದ ಕಂತು ಪಾವತಿ ಮುಂದೂಡಿಕೆ ಅವಧಿಗೆ ಬಡ್ಡಿ ವಿಧಿಸುವ ಆರ್‌ಬಿಐ ಅಧಿಸೂಚನೆ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದರು.
ಆದರೆ, ಬ್ಯಾಂಕ್ ಪರ ವಾದಗಳು 'ಸಾಲ ಮರುಪಾವತಿ ಮುಂದೂಡಿಕೆ ಅವಧಿಯಲ್ಲಿ ಸಂಪೂರ್ಣವಾಗಿ ಬಡ್ಡಿ ಮನ್ನಾ ಮಾಡುವುದು ಬ್ಯಾಂಕ್‌ಗಳ ಪಾಲಿಗೆ ಸುಲಭ ನಿರ್ಧಾರವಲ್ಲ. ಬ್ಯಾಂಕ್‌ಗಳು ತಮ್ಮ ಠೇವಣಿದಾರರಿಗೆ ಬಡ್ಡಿ ಪಾವತಿಸಬೇಕಾಗುತ್ತದೆ. ಬಡ್ಡಿ ಮನ್ನಾ ಮಾಡಿದರೆ ಬ್ಯಾಂಕುಗಳ ಪರಿಸ್ಥಿತಿ ಚಿಂತಾಜನಕವಾಗುತ್ತದೆ' ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಪರ ವಾದ ಮಾಡಿದರು.
Good News: ನಿಮ್ಮ ಸ್ಯಾಲರಿ ಅಕೌಂಟ್ ಐಸಿಐಸಿಐ ಬ್ಯಾಂಕ್ನಲ್ಲಿದ್ಯಾ?
ಸುಪ್ರೀಂಕೋರ್ಟ್ ನ್ಯಾಯಪೀಠವು ವಿಚಾರಣೆಯನ್ನು ಆಗಸ್ಟ್ ಮೊದಲ ವಾರಕ್ಕೆ ಮುಂದೂಡಿದೆ. ಜೊತೆಗೆ ಸಾಲದ ಕಂತು ಮರುಪಾವತಿ ಕುರಿತು ಹೊಸ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಬಹುದೇ ಎಂಬ ಬಗ್ಗೆ ನ್ಯಾಯಾಲಯವು ಭಾರತದ ಬ್ಯಾಂಕ್ ಸಂಘಕ್ಕೆ(ಐಬಿಎ) ಸ್ಪಷ್ಟತೆಯನ್ನು ಕೇಳಿದೆ.