ಪ್ರವಾಸಿಗರಿಗೆಂದೇ ಸೋನು ಸೂದ್‌ರಿಂದ ಹೊಸ ಆ್ಯಪ್ ಬಿಡುಗಡೆ
ಮುಂಬೈ, ಜೂನ್ 7: ಬಾಲಿವುಡ್ ನಟ ಸೋನು ಸೂದ್ ಏನಾದರೊಂದು ಸಾಹಸ ಮಾಡುತ್ತಲೇ ಇರುತ್ತಾರೆ. ಪ್ರವಾಸಿಗರ ಅನುಕೂಲಕ್ಕೆಂದು ಅವರು ಎಕ್ಸ್‌ಪ್ಲರ್ಜರ್ (Explurger Application) ಎಂಬ ಹೊಸ ಆ್ಯಪ್ ಅನ್ನು ಮಂಗಳವಾರ ಬಿಡಗಡೆ ಮಾಡಿದ್ದಾರೆ.
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ವಿಫುಲವಾಗಿ ಬಳಸಿಕೊಳ್ಳಲಾಗಿರುವ ಈ ಆ್ಯಪ್‌ನಲ್ಲಿ ಜನರು ತಮ್ಮ ಪ್ರವಾಸದ ಕ್ಷಣಗಳನ್ನು ಬಹಳ ಅದ್ಭುತ ರೀತಿಯಲ್ಲಿ ಸ್ನೇಹಿತರು ಮತ್ತು ಕುಟುಂಬದ ಜೊತೆ ಹಂಚಿಕೊಳ್ಳಬಹುದು ಎನ್ನಲಾಗಿದೆ.
ಏನಿವೆ ಫೀಚರ್ಸ್?
ಈ ಸೋಷಿಯಲ್ ಮೀಡಿಯಾ ಅಪ್ಲಿಕೇಶನ್‌ನಲ್ಲಿ ಜನರು ಚಿತ್ರ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳಬಹುದು. ಜೊತೆಗೆ, ಅವರು ಪ್ರವಾಸ ಮಾಡಿದ ನಗರ, ದೇಶ, ಖಂಡಗಳು ಮತ್ತು ಎಷ್ಟು ದೂರ ಪ್ರವಾಸ ಹೋಗಿದ್ದು ಎಂಬ ನಿಖರ ಮಾಹಿತಿ ಇತ್ಯಾದಿಯನ್ನು ಈ ಆ್ಯಪ್ ಹಿಡಿದಿಡುತ್ತದೆ.

ಈ ಆ್ಯಪ್‌ನಲ್ಲಿ ಜನರು ತಮ್ಮ ಇಚ್ಛಾ ಪಟ್ಟಿ (Bucket List)ಗೆ ತಮ್ಮಿಚ್ಛೆಯ ಸ್ಥಳಗಳನ್ನು ಸೇರಿಸಬಹುದು. ತಮ್ಮ ಪ್ರವಾಸದ ಅನುಭವಗಳ ಕಥನ (Travelogue) ದಾಖಲಿಸಬಹುದು. ತಮ್ಮ ಭವಿಷ್ಯದ ಪ್ರವಾಸೀ ಯೋಜನೆಗಳನ್ನು ಇಲ್ಲಿ ಪ್ರಕಟಿಸಬಹುದು. ಅದಕ್ಕೆಲ್ಲಾ ಆ್ಯಪ್ ನಲ್ಲಿ ಅವಕಾಶ ಮಾಡಿಕೊಡಲಾಗಿದೆ.
ಮತ್ತೊಂದು ಪ್ರಮುಖ ಫೀಚರ್ ಎಂದರೆ ಇದರಲ್ಲಿ ಮೋಜಿನ ಜೊತೆಗೆ ಆಟದ ರಂಗೂ ಇದೆ. ಟಾಟಾ ಸ್ಕೈ, ಲೆನೋವೊ ಮೊದಲಾದ ಜನಪ್ರಿಯ ಬ್ರ್ಯಾಂಡ್‌ಗಳಲ್ಲಿ ನೀವು ರಿಯಾಯಿತಿ ಪಡೆಯಲು ಅವಕಾಶ ಮಾಡಿಕೊಡುವ ಒಂದು ವಿಶೇಷ ಸೆಕ್ಷನ್ ಕೂಡ ಇದೆ.

ಸೋನು ಸೂದ್ ಸಹ-ಸ್ಥಾಪಕ:
ಹಿಂದಿ ಮತ್ತು ತೆಲುಗಿನಲ್ಲಿ ಬಹಳ ಜನಪ್ರಿಯವಾಗಿರುವ ನಟ ಸೋನು ಸೂದ್ ಅವರು ಎಕ್ಸ್‌ಪ್ಲರ್ಜರ್ ಆ್ಯಪ್‌ನ ಸಹ-ಸಂಸ್ಥಾಪಕರಾಗಿದ್ದಾರೆ. ಜಿತಿನ್ ಭಾಟಿಯಾ ಇದರ ಪ್ರಧಾನ ಸ್ಥಾಪಕರು ಮತ್ತು ಈಗಿನ ಸಿಇಒ ಕೂಡ ಇವರೆಯೇ. ಈ ಆ್ಯಪ್‌ನ ಬೀಟಾ ವರ್ಷನ್ ಅನ್ನು ವಿವಿಧ ದೇಶಗಳಲ್ಲಿ 5 ಲಕ್ಷ ಮಂದಿ ಬಳಸುತ್ತಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications