ಸೆಪ್ಟೆಂಬರ್ 1ರಿಂದ ಎಲ್‌ಪಿಜಿ ಸೇರಿ ಹಲವು ನಿಯಮಗಳಲ್ಲಿ ಮಹತ್ವದ ಬದಲಾವಣೆ
ಬೆಂಗಳೂರು, ಆಗಸ್ಟ್ 31: ಆಗಸ್ಟ್ ಮುಗಿದು ಸೆಪ್ಟೆಂಬರ್ ತಿಂಗಳ ಆರಂಭಕ್ಕೆ ಕ್ಷಣಗಣನೆ ಬಾಕಿಯಿದೆ. ಮುಂಬರುವ ತಿಂಗಳ ಆರಂಭದಿಂದಲೇ ಎಲ್‌ಪಿಜಿ ಸೇರಿದಂತೆ ಹಲವು ನಿಯಮಗಳಲ್ಲಿ ಮಹತ್ವದ ಬದಲಾವಣೆಗಳಾಗಲಿವೆ. ಹಾಗಾದ್ರೆ ಅವುಗಳೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಆಗಸ್ಟ್ ತಿಂಗಳು ಮುಗಿದು ಸೆಪ್ಟೆಂಬರ್ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬ ಸಾರ್ವಜನಿಕರ ಜೇಬಿನ ಮೇಲೆ ನೇರ ಪರಿಣಾಮ ಬೀರುವ ಹಲವು ಪ್ರಮುಖ ಹಣಕಾಸು ನಿಯಮಗಳು ಮತ್ತು ಡೆಡ್‌ಲೈನ್‌ಗಳಲ್ಲಿ ಬದಲಾವಣೆಗಳು ಜಾರಿಗೆ ಬರಲಿವೆ. ಆದಾಯ ತೆರಿಗೆ ಸಲ್ಲಿಕೆಯಿಂದ ಹಿಡಿದು ಇಂಧನ ದರಗಳವರೆಗೆ ಸೆಪ್ಟೆಂಬರ್ 1ರಿಂದ ಜಾರಿಯಾಗಲಿರುವ ಪ್ರಮುಖ ಬದಲಾವಣೆಗಳ ವಿವರ ಇಲ್ಲಿದೆ.

ವಿಳಂಬವಾಗಿ ಐಟಿಆರ್ ಸಲ್ಲಿಕೆಗೆ ದಂಡ
ಆಡಿಟಿಂಗ್ ಅಗತ್ಯವಿಲ್ಲದ ಸಾಮಾನ್ಯ ತೆರಿಗೆದಾರರು ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಲು ಆಗಸ್ಟ್ 31 ಕೊನೆಯ ದಿನವಾಗಿದೆ. ಸೆಪ್ಟೆಂಬರ್ 1ರಿಂದ ಸಲ್ಲಿಕೆಯಾಗುವ ರಿಟರ್ನ್ಸ್‌ಗಳನ್ನು 'ವಿಳಂಬ ರಿಟರ್ನ್ಸ್' (Belated ITR) ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಈಗ ಸಲ್ಲಿಕೆ ಮಾಡುವವರು ಆದಾಯ ತೆರಿಗೆ ಕಾಯ್ದೆಯಡಿ ನಿಗದಿತ ದಂಡ ಮತ್ತು ಬಡ್ಡಿಯನ್ನು ಪಾವತಿಸುವುದು ಕಡ್ಡಾಯವಾಗಲಿದೆ.
ವಿದೇಶಿ ವಿಮಾನ ಪ್ರಯಾಣಿಕರು ಗಮನಿಸಬೇಕಾದ ಮಾಹಿತಿ
ಅಂತಾರಾಷ್ಟ್ರೀಯ ಪ್ರಯಾಣಿಕರ ಅನುಕೂಲಕ್ಕಾಗಿ ವಿಮಾನಯಾನ ವಲಯದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಭಾರತದಿಂದ ವಿದೇಶಕ್ಕೆ ತೆರಳುವ ಪ್ರಯಾಣಿಕರು ಸೆಪ್ಟೆಂಬರ್ 1 ರಿಂದ ಇಮಿಗ್ರೇಷನ್ ಕೌಂಟರ್‌ಗಳಲ್ಲಿ ತಮ್ಮ ಭೌತಿಕ ಬೋರ್ಡಿಂಗ್ ಪಾಸ್‌ಗಳ ಮೇಲೆ ಯಾವುದೇ ಮುದ್ರೆ ಹಾಕಿಸಿಕೊಳ್ಳುವ ಅಗತ್ಯವಿರುವುದಿಲ್ಲ. ಬದಲಾಗಿ ಸ್ಮಾರ್ಟ್‌ಫೋನ್‌ನಲ್ಲಿರುವ ಡಿಜಿಟಲ್ ಬೋರ್ಡಿಂಗ್ ಪಾಸ್ ತೋರಿಸಿ ಸುಲಭವಾಗಿ ನಿರ್ಗಮನ ಪ್ರಕ್ರಿಯೆ ಪೂರ್ಣಗೊಳಿಸಬಹುದು.
ಬ್ಯಾಂಕ್ ಎಫ್‌ಡಿ ಬಡ್ಡಿದರಗಳ ಬದಲಾವಣೆ
ಸೆಪ್ಟೆಂಬರ್ ತಿಂಗಳಿನಲ್ಲಿ ದೇಶದ ಹಲವು ಪ್ರಮುಖ ಸಾರ್ವಜನಿಕ ಹಾಗೂ ಖಾಸಗಿ ಬ್ಯಾಂಕ್‌ಗಳು ತಮ್ಮ ನಿಗದಿತ ಠೇವಣಿ ಯೋಜನಾ ಬಡ್ಡಿದರಗಳನ್ನು ಪರಿಷ್ಕರಿಸುವ ಸಾಧ್ಯತೆಯಿದೆ. ಹಿರಿಯ ನಾಗರಿಕರಿಗೆ ನೀಡಲಾಗುತ್ತಿದ್ದ ವಿಶೇಷ ಎಫ್‌ಡಿ ಯೋಜನೆಗಳ ಅವಧಿ ಹಾಗೂ ಬಡ್ಡಿದರಗಳಲ್ಲಿ ಬದಲಾವಣೆಗಳಾಗುವ ನಿರೀಕ್ಷೆಯಿದ್ದು, ಹೂಡಿಕೆದಾರರು ಈ ಬಗ್ಗೆ ಗಮನಹರಿಸುವುದು ಒಳಿತು.
ಇಂಧನ ದರ ಹಾಗೂ ಎಟಿಎಂ ಸೇವಾ ಶುಲ್ಕದ ವಿವರ
ತಿಂಗಳ ಮೊದಲ ದಿನದ ನಿಯಮದಂತೆ ವಿಮಾನ ಇಂಧನ ದರ, ವಾಣಿಜ್ಯ ಸಿಲಿಂಡರ್ ಹಾಗೂ ಪೆಟ್ರೋಲ್-ಡೀಸೆಲ್ ದರಗಳಲ್ಲಿ ಪರಿಷ್ಕರಣೆ ಆಗಲಿದೆ. ಇದರೊಂದಿಗೆ ವಿವಿಧ ಬ್ಯಾಂಕ್‌ಗಳು ತಮ್ಮ ಉಚಿತ ಎಟಿಎಂ ವಹಿವಾಟು ಮಿತಿ ಮತ್ತು ನಿಗದಿತ ಮೀರಿದ ವಹಿವಾಟುಗಳ ಸೇವಾ ಶುಲ್ಕಗಳ ನಿಯಮಗಳನ್ನು ಸೆಪ್ಟೆಂಬರ್‌ನಿಂದ ಪರಿಷ್ಕರಿಸುವ ಸಾಧ್ಯತೆಯಿದೆ.
ಎಲ್‌ಪಿಜಿ ಇ-ಕೆವೈಸಿ ಮತ್ತು ಬೆಲೆ ಪರಿಷ್ಕರಣೆ
ಅಡುಗೆ ಅನಿಲ ಸಂಪರ್ಕ ಹೊಂದಿರುವ ಗ್ರಾಹಕರಿಗೆ ಬಯೋಮೆಟ್ರಿಕ್ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಆಗಸ್ಟ್ 31ರ ವರೆಗೆ ಕಾಲಾವಕಾಶ ನೀಡಲಾಗಿತ್ತು. ಸೆಪ್ಟೆಂಬರ್ 1ರ ವೇಳೆಗೆ ಇ-ಕೆವೈಸಿ ಮಾಡಿಸದಿದ್ದರೆ ಸಬ್ಸಿಡಿ ಹಣ ಖಾತೆಗೆ ಜಮೆಯಾಗುವುದು ಸ್ಥಗಿತಗೊಳ್ಳಬಹುದು ಅಥವಾ ಗೃಹ ಬಳಕೆಯ ದರದಲ್ಲಿ ಸಿಲಿಂಡರ್ ಕಾಯ್ದಿರಿಸಲು ತೊಂದರೆ ಎದುರಾಗಬಹುದು. ಇದರ ಜೊತೆಗೆ ಪ್ರತಿ ತಿಂಗಳ ಮೊದಲ ದಿನದಂತೆ ತೈಲ ಕಂಪನಿಗಳು ಸಿಲಿಂಡರ್ ಬೆಲೆಗಳನ್ನು ಪುನರ್‌ಪರಿಶೀಲನೆ ಮಾಡಿ ಹೊಸ ದರ ಪ್ರಕಟಿಸಲಿವೆ.
ಒಟ್ಟಿನಲ್ಲಿ ಹೇಳುವುದಾದರೆ ತಿಂಗಳು ಮುಗಿಯೆತೆಂದರೆ ಹೊಸ ತಿಂಗಳಿನ ಆರಂಭದಲ್ಲೆ ಪ್ರಮುಖ ನಿಯಮಗಳಲ್ಲಿ ಬದಲಾವಣೆಹಳು ಆಗುತ್ತಲಿರುತ್ತವೆ. ಇದರ ನೇರ ಪರಿಣಾಮ ಬಿರುವುದೇ ಸಾಮಾನ್ಯ ಜನರ ಮೇಲೆ. ಆದ್ದರಿಂದ ಹೊಸ ತಿಂಗಳ ಆರಂಭದಲ್ಲಿ ಏನೆಲ್ಲಾ ಬದಲಾವಣೆಯಾಗಬಹುದು, ಇದರಿಂದ ಏನೆಲ್ಲಾ ಹೊಡೆತ ಬೀಳಬಹುದು ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿರುತ್ತದೆ.


Click it and Unblock the Notifications
