ಎಸ್ಬಿಐ ಬಡ್ಡಿದರ ಇಳಿಕೆ, ಕಾರು, ಮನೆ ಸಾಲ ಇಎಂಐ ಕಡಿಮೆ?
ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಸಾಲದ ಮೇಲಿನ ಬಡ್ಡಿ ದರವನ್ನು ಇಳಿಸಿದೆ.2017ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಮನೆ, ಕಾರಿನ ಮೇಲಿನ ಸಾಲದ ಬಡ್ಡಿದರ ಕನಿಷ್ಠ ಶೇ 0.15ರಷ್ಟು ಇಳಿಕೆ ಸಾಧ್ಯತೆಯಿದೆ.
ನವದೆಹಲಿ, ಏಪ್ರಿಲ್ 03: ಸಹವರ್ತಿ ಬ್ಯಾಂಕುಗಳ ಜತೆ ಮಹಾ ವಿಲೀನದ ನಂತರ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಸೋಮವಾರದಂದು ಮಹತ್ವದ ನಿರ್ಧಾರ ಪ್ರಕಟಿಸಿದೆ. ಸಾಲದ ಮೇಲಿನ ಬಡ್ಡಿದರವನ್ನು ಅಲ್ಪಪ್ರಮಾಣದಲ್ಲಿ ಇಳಿಕೆ ಮಾಡಿದೆ.
2017ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಎಸ್‌ಬಿಐ ಮೂಲ ದರವನ್ನು 15 ಮೂಲ ಅಂಕದಷ್ಟು ಕಡಿತಗೊಳಿಸಿ, ಶೇ.9.25ರಿಂದ ಶೇ. 9.10ಕ್ಕೆ ಇಳಿಸಿದೆ. ಆರ್ ಬಿಐ ನೀತಿ ಪ್ರಕಟಕ್ಕೂ ಮುನ್ನ ಎಸ್ಬಿಐ ಈ ನಿರ್ಧಾರ ಕೈಗೊಂಡಿದ್ದು, ಮೂಲ ದರದ ಮೇಲೆ ಕಾರು, ಮನೆ ಸಾಲದ ಬಡ್ಡಿದರಗಳು ಕನಿಷ್ಟ ಶೇ 0.15ರಷ್ಟು ಇಳಿಕೆ ಕಾಣಲಿದೆ.

ಮಿಕ್ಕಂತೆ, ಎಸ್ಬಿಐ ನೀತಿ, ನಿಯಮ, ಗ್ರಾಹಕರ ಮೇಲೆ ಹಾಕುತ್ತಿರುವ ದಂಡದ ಬಗ್ಗೆ ಗ್ರಾಹಕರಲ್ಲಿ ಅಸಮಾಧಾನ ಮುಂದುವರೆದಿದೆ. [ಈ ಬಗ್ಗೆ ಇಲ್ಲಿ ಓದಿ]
ಸಾಲದ ಮೇಲಿನ ಬಡ್ಡಿದರ ಅಲ್ಪಪ್ರಮಾಣದಲ್ಲಿ ಇಳಿಕೆ ಮಾಡಿದ್ದರೂ, ಆರು ತಿಂಗಳಾವಧಿಯ ಎಂಸಿಎಲ್‌ಆರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಶೇ. 7.95 ಹಾಗೂ ಮೂರು ವರ್ಷದ ಎಂಸಿಎಲ್‌ಆರ್ ಶೇ. 8.15 ಆಗಿರುತ್ತದೆ.
ಸಹವರ್ತಿ ಬ್ಯಾಂಕುಗಳಾದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಬಿಕನೇರ್ ಮತ್ತು ಜೈಪುರ, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾ, ಸ್ಟೇಟ್ ಬ್ಯಾಂಕ್ ಆಫ್ ತಿರುವಾಂಕೋರ್ ಜತೆಗೆ ಭಾರತೀಯ ಮಹಿಳಾ ಬ್ಯಾಂಕ್ ಏಪ್ರಿಲ್ 1ರಂದು ಎಸ್ಬಿಐನಲ್ಲಿ ವಿಲೀನಗೊಂಡಿದ್ದವು.
ಈ ಮಹಾ ವಿಲೀನದ ಬಳಿಕ ಎಸ್ಬಿಐ ತನ್ನ ಮೌಲ್ಯವನ್ನು 41 ಲಕ್ಷ ಕೋಟಿ ರುಗೆ ಏರಿಸಿಕೊಂಡು ವಿಶ್ವದ ಟಾಪ್ 50 ಬ್ಯಾಂಕ್ ಪಟ್ಟಿಗೆ ಎಂಟ್ರಿ ಕೊಟ್ಟಿದೆ. ಎಸ್ಬಿಐ ಈಗ 37ಕೋಟಿ ಗ್ರಾಹಕರ ಸಂಖ್ಯೆ ಹೊಂದಿದ್ದು, 24 ಸಾವಿರ ಒಟ್ಟು ಶಾಖೆಗಳು ಹಾಗೂ 59 ಸಾವಿರ ಎಟಿಎಂಗಳನ್ನು ಹೊಂದಲಿದೆ.












Click it and Unblock the Notifications