ವಾಹನ ಸವಾರರಿಗೆ ಸಿಹಿಸುದ್ದಿ: ಪೆಟ್ರೋಲ್, ಡೀಸೆಲ್ ದರ ಇಳಿಕೆ
ನವದೆಹಲಿ, ಮಾರ್ಚ್ 22: ಭಾರತದ ವಾಹನ ಸವಾರರಿಗೆ 24 ದಿನಗಳ ನಂತರ ಇಂಧನ ಕಂಪನಿಗಳು ಸಿಹಿಸುದ್ದಿ ನೀಡಿವೆ. ಫೆಬ್ರವರಿ 27ರ ಬಳಿಕ ಮೊದಲ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಕೊಂಚ ಇಳಿಕೆ ಕಂಡಿದೆ.
ಸರ್ಕಾರಿ ಇಂಧನ ಕಂಪನಿಗಳಿಂದ ಒಂದು ಲೀಟರ್ ಪೆಟ್ರೋಲ್ ದರ ಮೇಲೆ 18 ಪೈಸೆ ಮತ್ತು ಒಂದು ಲೀಟರ್ ಡೀಸೆಲ್ ಮೇಲೆ 17 ಪೈಸೆ ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆಯಾದ ಹಿನ್ನೆಲೆ ದೇಶೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆ ಇಳಿಮುಖವಾಗಿದೆ.
ಪರಿಷ್ಕೃತ ದರದ ಪ್ರಕಾರ, ದೆಹಲಿಯಲ್ಲಿ ಪೆಟ್ರೋಲ್ ದರ 90.99 ರೂಪಾಯಿ, ಡೀಸೆಲ್ ದರ 81.30 ರೂಪಾಯಿ ಇದೆ. ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀ.ಗೆ 97.39 ಮತ್ತು ಡೀಸೆಲ್ ದರ ಪ್ರತಿ ಲೀ.ಗೆ 88.43 ರೂಪಾಯಿ ಇದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಇಳಿಕೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ 15 ದಿನಗಳಲ್ಲಿ ಶೇ.10ರಷ್ಟು ಇಂಧನ ಬೆಲೆ ಇಳಿಕೆಯಾಗಿದೆ. ಯುರೋಪಿಯನ್ ರಾಷ್ಟ್ರಗಳಲ್ಲಿ ಕೊರೊನಾವೈರಸ್ ಮೂರನೇ ಅಲೆಯ ಭೀತಿ ಹೆಚ್ಚಾಗಿದೆ. ಈ ಹಿನ್ನೆಲೆ ಆ ಮಾರುಕಟ್ಟೆಗಳಲ್ಲಿ ಇಂಧನಕ್ಕೆ ಬೇಡಿಕೆ ತಗ್ಗಿದೆ. 71 ಡಾಲರ್ ಇದ್ದ ಒಂದು ಬ್ಯಾರಲ್ ಇಂಧನದ ಬೆಲೆ 64 ಡಾಲರ್ ಆಗಿದೆ.

ಫೆಬ್ರವರಿಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ
2021ನೇ ವರ್ಷದ ಮೊದಲ ಎರಡು ತಿಂಗಳಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರದ ಮೇಲೆ 4.87 ರೂಪಾಯಿ ಏರಿಕೆಯಾಗಿತ್ತು. ಡೀಸೆಲ್ ದರವು ಪ್ರತಿ ಲೀ.ಗೆ 4.99 ರೂಪಾಯಿ ಹೆಚ್ಚಳವಾಗಿತ್ತು. ಫೆಬ್ರವರಿ ತಿಂಗಳಿನಲ್ಲಿ ಇಂಧನ ಕಂಪನಿಗಳು 4 ರಿಂದ 5 ರೂಪಾಯಿ ಹೆಚ್ಚಳ ಮಾಡಿದ್ದವು. ಕೊನೆಯದಾಗಿ ಕಳೆದ ಫೆಬ್ರವರಿ 27ರಂದು ಪೆಟ್ರೋಲ್ ದರ 24 ಪೈಸೆ ಮತ್ತು ಡೀಸೆಲ್ ದರ 15 ಪೈಸೆ ಏರಿಕೆಯಾಗಿತ್ತು. ಅಲ್ಲಿಂದ ಈವರೆಗೂ ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರವಾಗಿತ್ತು.

ಎರಡು ರಾಜ್ಯಗಳಲ್ಲಿ ಶತಕ ಬಾರಿಸಿದ ಪೆಟ್ರೋಲ್ ದರ
ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಹೆಚ್ಚಿನ ವ್ಯಾಟ್ ನಿಂದಾಗಿ ಪೆಟ್ರೋಲ್ ದರವು ಶತಕ ಬಾರಿಸಿದೆ. ಮಧ್ಯಪ್ರದೇಶದ ಅನುಪ್ಪುರ್ ನಗರದಲ್ಲಿ ಪೆಟ್ರೋಲ್ ದರ ಪ್ರತಿ ಲೀ.ಗೆ 101.41 ರೂಪಾಯಿ ಹಾಗೂ ಡೀಸೆಲ್ ಪ್ರತಿ ಲೀ.ಗೆ 91.80 ರೂಪಾಯಿ ಆಗಿತ್ತು. ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಪೆಟ್ರೋಲ್ ದರ ಪ್ರತಿ ಲೀ.ಗೆ 101.66 ರೂಪಾಯಿ ಹಾಗೂ ಡೀಸೆಲ್ ದರ ಪ್ರತಿ ಲೀ.ಗೆ 93.60 ರೂಪಾಯಿ ಆಗಿತ್ತು.

ನಿಮ್ಮ ನಗರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ
ಪ್ರಸ್ತುತ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಎಷ್ಟಿದೆ ಎನ್ನುವುದರ ಕುರಿತು ಮಾಹಿತಿ ಇಲ್ಲಿದೆ ನೋಡಿ.
ಪ್ರಮುಖ ನಗರದಲ್ಲಿ ಪೆಟ್ರೋಲ್, ಡೀಸೆಲ್ ದರ:
ನಗರ - ಪೆಟ್ರೋಲ್ ದರ(ಪ್ರತಿ ಲೀ.ಗೆ) - ಡೀಸೆಲ್ ದರ(ಪ್ರತಿ ಲೀ.ಗೆ)
ಶ್ರೀ ಗಂಗಾನಗರ - 101.66 - 93.60
ಅನುಪ್ಪುರ್ - 101.41 - 91.80
ನವದೆಹಲಿ - 90.99 - 81.30
ಮುಂಬೈ - 97.40 - 88.42
ಕೋಲ್ಕತ್ತಾ - 91.18 - 84.18
ಚೆನ್ನೈ - 92.95 - 86.29
ಬೆಂಗಳೂರು - 94.04 - 86.21
ಪಾಟ್ನಾ - 93.31 - 86.55
ಲಕ್ನೋ - 89.18 - 81.70












Click it and Unblock the Notifications