ಎರಡು ತಿಂಗಳಲ್ಲಿ 37ನೇ ಬಾರಿ ಪೆಟ್ರೋಲ್ ದರ ಏರಿಕೆ
ನವದೆಹಲಿ, ಜುಲೈ 8: ದೇಶದ ಪ್ರಮುಖ ಮೂರು ತೈಲ ಕಂಪನಿಗಳು ಗುರುವಾರ (ಜುಲೈ 8) ದಂದು ಪೆಟ್ರೋಲ್, ಡೀಸೆಲ್ ದರವನ್ನು ಏರಿಕೆ ಮಾಡಲಾಗಿದೆ. ಮೆಟ್ರೋ ನಗರಗಳ ಪೈಕಿ ದೆಹಲಿ ಹಾಗೂ ಕೋಲ್ಕತಾ ಲೇಟೆಸ್ಟ್ ಆಗಿ ಪೆಟ್ರೋಲ್ 100 ರು ಪ್ರತಿ ಲೀಟರ್ ಕ್ಲಬ್ಬಿಗೆ ಎಂಟ್ರಿ ಕೊಟ್ಟಿವೆ.
ಮೇ 4ರಿಂದ ಇಂದಿನ ತನಕ ಒಟ್ಟು 37 ಬಾರಿ ಹಾಗೂ ಜೂನ್ ತಿಂಗಳಲ್ಲೇ 19 ಬಾರಿ ಬೆಲೆ ಏರಿಕೆ ಮಾಡಲಾಗಿದೆ. ಜುಲೈ 08ರಂದು ಪೆಟ್ರೋಲ್ ಬೆಲೆ ಸರಾಸರಿ 34 ಪೈಸೆ ಪ್ರತಿ ಲೀಟರ್ ಏರಿಕೆ, ಡೀಸೆಲ್ ಬೆಲೆ 9 ಪೈಸೆ ಪ್ರತಿ ಲೀಟರ್ ನಂತೆ ಏರಿಕೆಯಾಗಿದೆ.
ದೆಹಲಿಯಲ್ಲಿ ದರ ಗುರುವಾರದಂದು ಪೆಟ್ರೋಲ್ ಪ್ರತಿ ಲೀಟರ್‌ಗೆ 100.56ರು ಹಾಗೂ ಡೀಸೆಲ್ ಪ್ರತಿ ಲೀಟರ್‌ಗೆ 89.62ರು ಆಗಿದೆ. ಕರ್ನಾಟಕ ಸೇರಿದಂತೆ 15ಕ್ಕೂ ಅಧಿಕ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ಗಗನಕ್ಕೇರಿದೆ. ಸಿಕ್ಕಿಂ ರಾಜ್ಯ ಈ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡಿದೆ.

ಮೆಟ್ರೋ ನಗರಗಳ ಪೈಕಿ ಮುಂಬೈನಲ್ಲಿ ಅತ್ಯಧಿಕ
ಮೆಟ್ರೋ ನಗರಗಳ ಪೈಕಿ ಮುಂಬೈನಲ್ಲಿ ಅತ್ಯಧಿಕ ಪೆಟ್ರೋಲ್ 106.59ರು ಪ್ರತಿ ಲೀಟರ್, ಡೀಸೆಲ್ 97.18ರು ಪ್ರತಿ ಲೀಟರ್‌ನಷ್ಟಿದೆ ಎಂದು ಇಂಡಿಯನ್ ಆಯಿಲ್ ಸಂಸ್ಥೆ ಪ್ರಕಟಿಸಿದೆ. ಮೇ 29ರಂದು ಮೊದಲ ಬಾರಿಗೆ ಮುಂಬೈನಲ್ಲಿ ಪೆಟ್ರೋಲ್ ದರ 100ರು ಗಡಿ ದಾಟಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.
ರಾಜಸ್ಥಾನ, ಮಧ್ಯಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಜಮ್ಮು ಮತ್ತು ಕಾಶ್ಮೀರ, ಲಡಾಕ್, ಒಡಿಶಾ, ಮಣಿಪುರ, ಸಿಕ್ಕಿಂ ಹಾಗೂ ಮಹಾರಾಷ್ಟ್ರದ ಹಲವು ಪಟ್ಟಣಗಳಲ್ಲೂ ಪೆಟ್ರೋಲ್ ಬೆಲೆ 100 ರು ಗಡಿ ದಾಟಿದೆ. ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ಪ್ರತಿ ಪೆಟ್ರೋಲ್ ಬೆಲೆ ದೇಶದಲ್ಲೇ ಅತ್ಯಧಿಕ 111.40ರು ನಷ್ಟಿದೆ, ಡೀಸೆಲ್ ಬೆಲೆ 102.45ರು ಆಗಿದೆ. ಅಲ್ಲದೆ ರಾಜಸ್ಥಾನದ ಎಲ್ಲಾ ಪ್ರಮುಖ ಪಟ್ಟಣಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಬೆಲೆ 100 ರು ಗಡಿ ದಾಟಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆ ಕಂಡು 73.41ಯುಎಸ್ ಡಾಲರ್(1 USD=74.71ರು) ಪ್ರತಿ ಬ್ಯಾರೆಲ್‌ನಷ್ಟಿದೆ. ಕಚ್ಚಾ ತೈಲ ಬೆಲೆ ಫೆಬ್ರವರಿಯಲ್ಲಿ 61.22 ಡಾಲರ್, ಮಾರ್ಚ್ ತಿಂಗಳಲ್ಲಿ 64.73 ಡಾಲರ್, ಏಪ್ರಿಲ್ ತಿಂಗಳಲ್ಲಿ 66 ಡಾಲರ್ ಹಾಗೂ ಮೇ ತಿಂಗಳಲ್ಲಿ ಸರಾಸರಿ 68 ಡಾಲರ್ ನಷ್ಟಿತ್ತು. ಭಾರತ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ ಪೆಟ್ರೋಲ್ ಮೇಲೆ 32. 98ರು ಹಾಗೂ ಡೀಸೆಲ್ ಮೇಲೆ 31.80 ರು ನಷ್ಟಿದೆ.

ನಗರ-ಇಂಧನ ದರ ಪ್ರತಿ ಲೀಟರ್ ರುಗಳಲ್ಲಿ
ನವದೆಹಲಿ: ಪೆಟ್ರೋಲ್ 100.56ರು- ಡೀಸೆಲ್ 89.62ರು
ಕೋಲ್ಕತಾ: ಪೆಟ್ರೋಲ್ 100.62ರು- ಡೀಸೆಲ್ 92.65ರು
ಮುಂಬೈ: ಪೆಟ್ರೋಲ್ 106.59ರು- ಡೀಸೆಲ್ 97.18ರು
ಚೆನ್ನೈ: ಪೆಟ್ರೋಲ್ 101.37ರು- ಡೀಸೆಲ್ 94.15ರು
ಬೆಂಗಳೂರು: ಪೆಟ್ರೋಲ್ 103.93ರು- ಡೀಸೆಲ್ 94.99ರು
ತಿರುವನಂತಪುರಂ: ಪೆಟ್ರೋಲ್ 102.54ರು- ಡೀಸೆಲ್ 96.20ರು
ಪಾಟ್ನ: ಪೆಟ್ರೋಲ್ 103.59ರು- ಡೀಸೆಲ್ 95.89ರು
ಹೈದರಾಬಾದ್: ಪೆಟ್ರೋಲ್ 104.50ರು- ಡೀಸೆಲ್ 97.68ರು
ನೋಯ್ಡಾ: ಪೆಟ್ರೋಲ್ 97.75ರು- ಡೀಸೆಲ್ 90.06ರು
ಜೈಪುರ: ಪೆಟ್ರೋಲ್ 107.01ರು- ಡೀಸೆಲ್ 98.41ರು

ಕಚ್ಚಾ ತೈಲ ಬೆಲೆ ನೋಡಿಕೊಂಡು ಬೆಲೆ ನಿರ್ಧಾರ
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.












Click it and Unblock the Notifications