'ರೆಪೋ, ರಿವರ್ಸ್ ರೆಪೋ ಬದಲಾವಣೆ ಇಲ್ಲ': ಆರ್‌ಬಿಐ ಗವರ್ನರ್
ಮುಂಬೈ, ಅಕ್ಟೋಬರ್ 08: ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಸತತ ಎಂಟನೇ ಬಾರಿಯೂ ರೆಪೋ ದರವನ್ನು ಬದಲಾವಣೆ ಮಾಡದಿರಲು ನಿರ್ಧಾರ ಮಾಡಿದೆ. ಈ ಹಿನ್ನೆಲೆಯಲ್ಲಿ ರೆಪೋ ದರವು ಈ ಹಿಂದಿನ ಶೇಕಡ 4 ರಲ್ಲೇ ಉಳಿಸಿಕೊಂಡಿದೆ. ದೇಶದ ಆರ್ಥಿಕತೆಯು ಕೊಂಚ ಚೇತರಿಕೆಯ ಲಕ್ಷಣ ಕಂಡು ಬಂದರೂ ರೆಪೋ ದರವನ್ನು ಬದಲಾವಣೆ ಮಾಡದಿರಲು ಆರ್‌ಬಿಐ ತೀರ್ಮಾನ ಮಾಡಿದೆ.
ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಸತತ ಎಂಟನೇ ಬಾರಿಗೆ ರೆಪೋ ದರದಲ್ಲಿ ಯಥಾಸ್ಥಿತಿಯಲ್ಲಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅಕ್ಟೋಬರ್ 8 ರ ಶುಕ್ರವಾರ ಮಾಧ್ಯಮಗೋಷ್ಠಿ ನಡೆಸಿ ದ್ವೈ-ಮಾಸಿಕ ವಿತ್ತೀಯ ನೀತಿಯನ್ನು ಪರಿಶೀಲನೆ ಪ್ರಕಟನ ಮಾಡುವ ಸಂದರ್ಭದಲ್ಲಿ, "ರೆಪೋ ದರವನ್ನು ಈ ಹಿಂದಿನ ಶೇಕಡ 4 ರಲ್ಲೇ ಹಾಗೂ ರಿವರ್ಸ್ ರೆಪೋ ದರವನ್ನು ಶೇಕಡ 3.35 ಉಳಿಸಿಕೊಂಡಿದೆ," ಎಂದು ಮಾಹಿತಿ ನೀಡಿದ್ದಾರೆ.
ಈ ಹಿಂದೆ ಆರ್‌ಬಿಐ 2020 ರ ಮೇ 22 ರಂದು ಕೊನೆಯ ಬಾರಿಗೆ ರೆಪೋ ದರವನ್ನು ಪರಿಷ್ಕರಣೆ ಮಾಡಿತ್ತು. ಇದರಿಂದಾಗಿ ಬಡ್ಡಿದರವು ಐತಿಹಾಸಿಕವಾಗಿ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿತ್ತು. ಆದರೆ ಕಳೆದ ಎಂಟು ಬಾರಿ ಆರ್‌ಬಿಐ ರೆಪೋ ದರವನ್ನು ಬದಲಾವಣೆ ಮಾಡಿಲ್ಲ.

ಪ್ರಸ್ತುತ ರೆಪೋ ದರವು ಶೇಕಡ 4 ಹಾಗೂ ರಿವರ್ಸ್ ರೆಪೋ ದರ ಶೇಕಡ 3.35 ರಲ್ಲಿ ಉಳಿದುಕೊಂಡಿದೆ. ಈ ಮೂಲಕ ಬಡ್ಡಿದರದಲ್ಲಿ ಯಾವುದೇ ದೊಡ್ಡಮಟ್ಟಿನ ವ್ಯತ್ಯಾಸಗಳು ಆಗುವುದಿಲ್ಲ.
"ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಹಣಕಾಸು ನೀತಿ ಸಮಿತಿಯು (ಎಂಪಿಸಿ) ಸರ್ವಾನುಮತದಿಂದ ಸಮ್ಮತಿ ನೀಡಿದೆ," ಎಂದು ಕೂಡಾ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.
ಸಾಮಾನ್ಯವಾಗಿ ಆರ್‌ಬಿಐ ಹಣದ ಬಿಕ್ಕಟ್ಟು ಎದುರಾದ ಸಂದರ್ಭದಲ್ಲಿ ರೆಪೋ ದರವನ್ನು ಇಳಿಸುತ್ತದೆ. ಈ ಮೂಲಕ ಆರ್‌ಬಿಐನಲ್ಲಿ ಕಡಿಮೆ ಬಡ್ಡಿಗೆ ಹಣ ಸಿಗುವ ಹಿನ್ನೆಲೆ ಬ್ಯಾಂಕುಗಳು ಲಾಭವನ್ನು ತನ್ನ ಗ್ರಾಹಕರಿಗೂ ನೀಡಬಹುದು. ಇದರಿಂದಾಗಿ ಬ್ಯಾಂಕಿನ ಗ್ರಾಹಕರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲಗಳು ದೊರೆಯುತ್ತದೆ. ಈ ಹಿನ್ನೆಲೆ ಮಾರುಕಟ್ಟೆಗೆ ಹೆಚ್ಚು ಹಣ ಹರಿಯುತ್ತದೆ. ಇದರಿಂದಾಗಿ ಆರ್ಥಿಕತೆಗೆ ಬಲ ಬರುವ ಸಾಧ್ಯತೆ ಇರುತ್ತದೆ.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications