ಹಣದುಬ್ಬರ ಎಂದರೇನು? ಭಾರತ ಹಾಗು ಬೇರೆ ದೇಶಗಳ ಪರಿಸ್ಥಿತಿ ಹೇಗೆ?
ಎಲ್‌ಟಿಟಿಇ ಭಯೋತ್ಪಾದನೆಯ ಅವಧಿ ಬಿಟ್ಟರೆ ಶ್ರೀಲಂಕಾ ಯಾವತ್ತೂ ಶಾಂತಿಯ ನಾಡು, ಪ್ರವಾಸಿಗರ ಬೀಡು. ಆದರೆ, ಈಗ್ಗೆ ಕೆಲ ತಿಂಗಳಿಂದ ಶ್ರೀಲಂಕಾ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಆರ್ಥಿಕತೆ ನೆಲ ಕಚ್ಚಿದೆ. ವಿದೇಶಿ ವಿನಿಮಯದಲ್ಲಿ ಮೀಸಲು ನಿಧಿಯೇ ಬಹುತೇಕ ಖಾಲಿಯಾಗಿದೆ. ಶ್ರೀಲಂಕಾದಲ್ಲಿ ಹಣದುಬ್ಬರ ವಿಪರೀತ ಏರಿಕೆಯಾಗಿದೆ.
ಸಿಂಹಳೀಯ ನಾಡಿನಲ್ಲಿ ವಾರ್ಷಿಕವಾರು ಲೆಕ್ಕದಲ್ಲಿ ಹಣದುಬ್ಬರ ಶೇ. 54.6ರಷ್ಟು ಏರಿದೆ. ಇದು ಕಳೆದ ವರ್ಷದ ಜೂನ್ ತಿಂಗಳಿಗೆ ಹೋಲಿಸಿದರೆ ಈ ಜೂನ್‌ನಲ್ಲಿ ಏರಿಕೆಯಾಗಿರುವ ಹಣದುಬ್ಬರ.
ಆರ್ಥಿಕತೆಯ ಆರೋಗ್ಯಕ್ಕೆ ಇರುವ ಪ್ರಮುಖ ಸೂಚಕಗಳಲ್ಲಿ ಹಣದುಬ್ಬರವೂ ಒಂದು. ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿಗೆ ಹಣದುಬ್ಬರ ಕೈಗನ್ನಡಿಯಾಗಿದೆ. ಶ್ರೀಲಂಕಾ ಮಾತ್ರವಲ್ಲ ವಿಶ್ವದ ಅನೇಕ ದೇಶಗಳ ಅರ್ಥವ್ಯವಸ್ಥೆ ಅಲುಗಾಡಿ ಹೋಗುತ್ತಿದೆ. ವಿಶ್ವದ 63 ದೇಶಗಳಲ್ಲಿ ಹಣದುಬ್ಬರ ಗಂಭೀರ ಮಟ್ಟಕ್ಕೆ ಏರಿದೆ.
ಭಾರತದಲ್ಲಿ ಹಣದುಬ್ಬರ ತಾಳಿಕೆಯ ಮಟ್ಟ ಮೀರಿ ಬೆಳೆದಿದೆ. ಆದರೆ, ಅಮೆರಿಕ ಹಾಗೂ ಇತರ ಪ್ರಮುಖ ಆರ್ಥಿಕ ದೇಶಗಳಿಗಿಂತ ಭಾರತದಲ್ಲಿ ಹಣದುಬ್ಬರ ಪ್ರಮಾಣ ಕಡಿಮೆಯೇ.

ಹಣದುಬ್ಬರ ಅಂದರೇನು?
ಒಂದು ಅರ್ಥವ್ಯವಸ್ಥೆಯಲ್ಲಿ ಸರಕು ಮತ್ತು ಸೇವೆಗಳ ಬೆಲೆ ಏರಿಕೆಯ ದರವೇ ಹಣದುಬ್ಬರ (Inflation). ಆಹಾರ ಇತ್ಯಾದಿ ಬಹಳ ಮೂಲಭೂತ ಅಗತ್ಯ ವಸ್ತುಗಳ ಬೆಲೆ ಹೆಚ್ಚಿದಷ್ಟೂ ಹಣದುಬ್ಬರ ದರ ಹೆಚ್ಚುತ್ತದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಒಂದು ವಸ್ತುವಿನ ಬೆಲೆ ಎಷ್ಟು ಇತ್ತು, ಈಗ ಎಷ್ಟಿದೆ ಎಂಬ ಅಂತರ ಈ ಹಣದುಬ್ಬರ.
ಸಾಮಾನ್ಯವಾಗಿ ಒಂದು ಉತ್ಪನ್ನದ ಬೆಲೆ ಏರಲು ಎರಡು ಕಾರಣ ಇರುತ್ತದೆ. ಉತ್ಪಾದನೆಯ ವೆಚ್ಚ ಏರಿದರೆ ಉತ್ಪನ್ನದ ಬೆಲೆ ಏರುತ್ತದೆ. ಅಥವಾ ಆ ಉತ್ಪನ್ನದ ಪೂರೈಕೆಗಿಂತ ಬೇಡಿಕೆ ಹೆಚ್ಚಿದ್ದರೂ ಬೆಲೆ ಏರುತ್ತದೆ. ಅದರ ಪರಿಣಾಮವಾಗಿ ಹಣದುಬ್ಬರ ದರವೂ ಏರುತ್ತದೆ.

ಹಣದುಬ್ಬರವೇ ಇರಬಾರದಾ?
ನಮ್ಮ ದೇಹದಲ್ಲಿ ಕೊಬ್ಬು ಪ್ರಮಾಣ ಹೆಚ್ಚಾದರೆ ಆರೋಗ್ಯಕ್ಕೆ ಮಾರಕ. ಆದರೆ, ದೈಹಿಕ ಆರೋಗ್ಯಕ್ಕೆ ಕೊಬ್ಬೂ ಕೂಡ ಅಗತ್ಯವೇ. ಸೀಮಿತ ಮಟ್ಟದಲ್ಲಿ ಕೊಬ್ಬು ಇರಬೇಕು. ಅದೇ ರೀತಿಯಲ್ಲಿ ಆರ್ಥಿಕತೆಯ ಬೆಳವಣಿಗೆಗೆ ಸೀಮಿತ ಮಟ್ಟದಲ್ಲಿ ಹಣದುಬ್ಬರ ಇರಬೇಕು ಎನ್ನುತ್ತಾರೆ ಅರ್ಥಜ್ಞರು.
ಇವರ ಪ್ರಕಾರ ಶೇ. 2-3ರಷ್ಟು ಹಣದುಬ್ಬರ ಇರುವುದು ಉತ್ತಮ. ಹಣದುಬ್ಬರ ಇದ್ದರೆ ಉತ್ಪಾದಕರಿಗೆ ಅನುಕೂಲ. ಹೆಚ್ಚು ದರಕ್ಕೆ ಉತ್ಪನ್ನ ಮಾರಬಹುದು. ಹೀಗಾಗಿ ಉತ್ಪಾದನೆಗೆ ಉತ್ತೇಜನ ಸಿಗುತ್ತದೆ. ಅದರಿಂದ ಆರ್ಥಿಕತೆಗೆ ಪರೋಕ್ಷ ರೀತಿಯಲ್ಲಿ ಬೇರೆ ಬೇರೆ ಅನುಕೂಲಗಳಾಗುತ್ತವೆ.
ಆದರೆ ಹಣದುಬ್ಬರ ದರ ಮಿತಿಮೀರಿ ಏರಿದರೆ ಹಣದ ಖರೀದಿ ಶಕ್ತಿ ಕಡಿಮೆಯಾಗುತ್ತದೆ. ಸಂಬಳ ಇತ್ಯಾದಿ ಸೀಮಿತ ಆದಾಯ ಮೂಲದ ವ್ಯಕ್ತಿಗಳ ಖರೀದಿ ಶಕ್ತಿ ಕಡಿಮೆ ಆಗುತ್ತದೆ. ಅತ್ತ ಉದ್ಯಮಿಗಳಿಗೆ ಹೆಚ್ಚು ಲಾಭವಾಗುತ್ತದೆ. ಸಾಮಾನ್ಯ ಜನರಿಗೆ ನಷ್ಟ ಆಗುತ್ತದೆ. ಪರಿಣಾಮವಾಗಿ ಸಂಪತ್ತು ಹಂಚಿಕೆಯಲ್ಲಿ ಅಸಮತೋಲನ ಸೃಷ್ಟಿಯಾಗುತ್ತದೆ.

ಅಭಿವೃದ್ಧಿಶೀಲ ದೇಶಗಳಲ್ಲಿ ಹಣದುಬ್ಬರ
ಈ ವರ್ಷ ವಿಶ್ವದ ಬಹುತೇಕ ಆರ್ಥಿಕತೆಗಳಲ್ಲಿ ಹಣದುಬ್ಬರ ಹೆಚ್ಚುತ್ತದೆ. ಅಭಿವೃದ್ಧಿಶೀಲ ದೇಶಗಳ ಸರಾಸರಿ ಹಣದುಬ್ಬರ ಈ ವರ್ಷ ಶೇ. 8.7ರಷ್ಟು ಇರಬಹುದು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಅಂದಾಜು ಮಾಡಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಬಳಿಕ ಇದು ಎರಡಂಕಿ ಗಡಿ ದಾಟುವ ಸಾಧ್ಯತೆ ಇದೆಯಂತೆ.

ಅತಿ ಹೆಚ್ಚು ಹಣದುಬ್ಬರ ಇರುವ ದೇಶಗಳು
1) ಲೆಬನಾನ್- ಶೇ. 211
2) ಜಿಂಬಾಬ್ವೆ- ಶೇ. 192
3) ಸೂಡಾನ್- ಶೇ. 192
4) ವೆನಿಜುವೆಲಾ- ಶೇ. 167
5) ಸಿರಿಯಾ- ಶೇ. 139
ಈ ಐದು ದೇಶಗಳಲ್ಲಿ ಹಣದುಬ್ಬರ ಮೂರಂಕಿ ಗಡಿಗಿಂತ ಮೇಲಿದೆ. ಟರ್ಕಿ, ಅರ್ಜೆಂಟೀನಾ, ಸುರಿನಾಮ್, ಶ್ರೀಲಂಕಾ ಮತ್ತು ಇರಾನ್ ದೇಶಗಳಲ್ಲಿ ಶೇ. 50ಕ್ಕಿಂತ ಹೆಚ್ಚು ಹಣದುಬ್ಬರ ದರ ಇದೆ.

ಭಾರತದಲ್ಲಿ ಎಷ್ಟಿದೆ ಹಣದುಬ್ಬರ?
ಭಾರತದಲ್ಲಿ ಶೇ. 7.04 ಹಣದುಬ್ಬರ ಇದೆ. ಆರ್ಥಿಕತೆಯ ಆರೋಗ್ಯದ ದೃಷ್ಟಿಯಿಂದ ಹಣದುಬ್ಬರ ಶೇ. 6 ಮಟ್ಟವನ್ನು ದಾಟಿ ಹೋಗಬಾರದು. ಭಾರತದಲ್ಲಿ ಆ ಮಟ್ಟವನ್ನು ದಾಟಿರುವುದು ತುಸು ಆತಂಕಪಡುವ ಸಂಗತಿ. ಆದರೆ, ಬಲಾಢ್ಯ ದೇಶಗಳಾದ ಜರ್ಮನಿ, ಬ್ರಿಟನ್, ಇಟಲಿ, ಪೋರ್ಚುಗಲ್, ಆಸ್ಟ್ರಿಯ ಮೊದಲಾದೆಡೆ ಹಣದುಬ್ಬರ ಭಾರತದಕ್ಕಿಂತ ತೀರಾ ಕಳಪೆ ಸ್ಥಿತಿಯಲ್ಲಿದೆ. ಅಮೆರಿಕ ಮತ್ತು ಬ್ರಿಟನ್‌ನಲ್ಲಿ ಹಣದುಬ್ಬರ ಶೇ. 8.6 ಮತ್ತು ಶೇ. 9.1 ಇದೆ.
ವಿವಿಧ ದೇಶಗಳ ಸರಕಾರಗಳು ಅಧಿಕೃತವಾಗಿ ಬಿಡುಗಡೆ ಮಾಡಿದ ದತ್ತಾಂಶದ ಆಧಾರವಾಗಿ ಟ್ರೇಡಿಂಗ್ ಎಕನಾಮಿಕ್ಸ್ ವೆಬ್‌ಸೈಟ್ ಹಣದುಬ್ಬರ ದರದ ಪಟ್ಟಿ ಮಾಡಿದೆ. ಅದರಲ್ಲಿ 172 ದೇಶಗಳ ಹಣದುಬ್ಬರ ದರ ಇದ್ದು, ಆ ಪೈಕಿ ಭಾರತ 108ನೇ ಸ್ಥಾನದಲ್ಲಿದೆ. ಅಂದರೆ 107 ದೇಶಗಳಿಗಿಂತ ಭಾರತದ ಹಣದುಬ್ಬರ ಉತ್ತಮ ಎನ್ನಬಹುದು.
(ಒನ್ಇಂಡಿಯಾ ಸುದ್ದಿ)












Click it and Unblock the Notifications