Get Updates
Get notified of breaking news, exclusive insights, and must-see stories!

ಕಿಲ್ ಸ್ವಿಚ್, ಹಿಂಸಾಚಾರ, ದೊಡ್ಡವರ ಆಟ- ಊಬರ್ ಫೈಲ್ಸ್ ಹೇಳೋದೇನು?

ಟ್ಯಾಕ್ಸಿ ಅಗ್ರಿಗೇಟರ್ ಆಗಿರುವ ಊಬರ್ ಕಂಪನಿಯ ವ್ಯವಹಾರದ ಬಗ್ಗೆ ಸಾಕಷ್ಟು ಮಾಹಿತಿ ನೀಡುವ ರಹಸ್ಯ ಕಡತಗಳು ಸೋರಿಕೆಯಾಗಿವೆ. ಊಬರ್ ಫೈಲ್ಸ್ ಎಂದು ಕರೆಯಲಾಗುತ್ತಿರುವ ಈ ಹಗರಣದಲ್ಲಿ ಲಕ್ಷಕ್ಕೂ ಹೆಚ್ಚು ದಾಖಲೆಗಳು ಸಿಕ್ಕಿವೆ.

ಇವು ಊಬರ್ ಕಂಪನಿಯ ನಿರ್ದಯ ವ್ಯವಹಾರ ನೀತಿ, ಯೂರೋಪ್‌ನ ದೊಡ್ಡ ಮಂದಿಯ ಸಹಾಯ ಇತ್ಯಾದಿ ಅನೇಕ ವಿಚಾರಗಳನ್ನು ಬಹಿರಂಗಪಡಿಸುತ್ತವೆ.

ಈಗ ಫ್ರಾನ್ಸ್ ಅಧ್ಯಕ್ಷರಾಗಿರುವ ಇಮ್ಯಾನುಯೆಲ್ ಮ್ಯಾಕ್ರಾನ್ ಮತ್ತು ಯೂರೋಪಿಯನ್ ಯೂನಿಯನ್‌ನ ಮಾಜಿ ಡಿಜಿಟಲ್ ಕಮಿಷನರ್ ನೀಲೀ ಕ್ರೂಸ್ ಅವರಿಂದ ಊಬರ್‌ಗೆ ಏನೇನು ಸಹಾಯವಾಯಿತು, ತನ್ನ ವಿರುದ್ಧದ ಹಿಂಸಾಚಾರಗಳನ್ನೇ ತನಗೆ ವರದಾನವಾಗುವಂತೆ ಕಂಪನಿ ಹೇಗೆ ಬಳಸಿಕೊಂಡಿತು ಇವೆಲ್ಲವೂ ಸೋರಿಕೆಯಾದ ಊಬರ್ ಫೈಲ್ಸ್‌ಗಳು ಸ್ಪಷ್ಟವಾಗಿ ಹೇಳುತ್ತವೆ.

ಅಷ್ಟೇ ಅಲ್ಲ, ತನ್ನ ಅವ್ಯವಹಾರಗಳು ಕಾನೂನು ಸಂಸ್ಥೆಗಳ ಕಣ್ಣಿಗೆ ಬೀಳುವ ಸಾಧ್ಯತೆ ತಪ್ಪಿಸಲು ಕಿಲ್ ಸ್ವಿಚ್ ಇತ್ಯಾದಿ ತಂತ್ರಜ್ಞಾನವನ್ನು ಊಬರ್ ಹೇಗೆ ಅಳವಡಿಸಿಕೊಂಡಿತ್ತು ಎಂಬುದೂ ಊಬರ್ ಕಡತಗಳಿಂದ ತಿಳಿದುಬರುತ್ತದೆ.

2009ರಲ್ಲಿ ಅಮೆರಿಕದಲ್ಲಿ ಆರಂಭಗೊಂಡ ಊಬರ್ ಈಗ ಸುಮಾರು 72 ದೇಶಗಳಲ್ಲಿ ಟ್ಯಾಕ್ಸಿ ಸೇವೆ ನೀಡುವ ಮಟ್ಟಕ್ಕೆ ಬೆಳೆದಿದೆ. ಈ ಬೆಳವಣಿಗೆಯ ಹಾದಿಯಲ್ಲಿ ಅದಕ್ಕೆ ಎದುರಾದ ಪ್ರತಿರೋಧ, ಆ ಪ್ರತಿರೋಧವನ್ನು ಎದುರಿಸಿದ ರೀತಿ ಇವೆಲ್ಲವೂ ಊಬರ್ ಫೈಲ್ಸ್‌ನಲ್ಲಿವೆ.

 ಏನಿದು ಊಬರ್ ಫೈಲ್ಸ್?

ಏನಿದು ಊಬರ್ ಫೈಲ್ಸ್?

ಊಬರ್ ಕಂಪನಿಯಲ್ಲಿ ಅಂತರಿಕವಾಗಿ ನಡೆದ ಇಮೇಲ್ ಇತ್ಯಾದಿ ಸಂದೇಶಗಳೇ ಊಬರ್ ಫೈಲ್ಸ್. 2013ರಿಂದ 2017ರವರೆಗಿನ ಅವಧಿಯಲ್ಲಿ ನಡೆದಿದೆ ಎನ್ನಲಾದ 1.24 ಲಕ್ಷ ಇಮೇಲ್ ಸಂವಾದ ಮತ್ತಿತರ ದಾಖಲೆಗಳು ಸೋರಿಕೆಯಾಗಿವೆ.

ಬ್ರಿಟನ್‌ನ ದಿ ಗಾರ್ಡಿಯನ್ ಪತ್ರಿಕೆಗೆ ಮೊದಲು ಈ ಸೋರಿಕೆಯ ಕಡತಗಳು ಸಿಕ್ಕಿವೆ. ಬಳಿಕ ತನಿಖಾ ಪತ್ರಕರ್ತರ ಅಂತಾರಾಷ್ಟ್ರೀಯ ಗುಂಪಿಗೆ ಊಬರ್ ಫೈಲ್ಸ್ ಸಿಕ್ಕಿವೆ.

ಊಬರ್‌ನ ಸಹ-ಸಂಸ್ಥಾಪಕ ಹಾಗೂ ಮಾಜಿ ಸಿಇಒ ಟ್ರಾವಿಸ್ ಕಲನಿಕ್ ಅವರ ಇ-ಮೇಲ್ ಸಂದೇಶಗಳು ಆ ಕಂಪನಿಯ ಅಂದಿನ ಕಾರ್ಯನೀತಿ, ವ್ಯವಹಾರ ನೀತಿಯ ಸುಳಿವನ್ನು ಸ್ಪಷ್ಟವಾಗಿ ನೀಡುತ್ತವೆ.

 ಹಿಂಸಾಚಾರ ಆಗಲಿ ಬಿಡಿ

ಹಿಂಸಾಚಾರ ಆಗಲಿ ಬಿಡಿ

ಊಬರ್ ಟ್ಯಾಕ್ಸಿ ಕಂಪನಿಯಲ್ಲ, ಅದು ಅಗ್ರಿಗೇಟರ್ ಕಂಪನಿ ಎಂಬುದು ನಿಮಗೂ ಗೊತ್ತು. ವಾಹನ ಹೊಂದಿರುವ ಚಾಲಕರನ್ನು ಕಮಿಷನ್ ಮೇರೆಗೆ ಸೇವೆಗೆ ಬಳಸಿಕೊಳ್ಳುವ ಕಂಪನಿ ಅದು. ಬಹಳ ಅಗ್ರೆಸಿವ್ ಆಗಿ ಮಾರುಕಟ್ಟೆಯನ್ನು ಆವರಿಸಿಕೊಂಡಿದೆ. ಅಂದರೆ ಚಾಲ್ತಿ ಟ್ಯಾಕ್ಸಿಗಳಿಗಿಂತ ಕಡಿಮೆ ದರದಲ್ಲಿ ಸೇವೆಯನ್ನು ನೀಡುವ ಮೂಲಕ ಟ್ಯಾಕ್ಸಿ ಮಾರುಕಟ್ಟೆಯಲ್ಲಿ ಊಬರ್, ಒಲಾ ಇತ್ಯಾದಿ ಕಂಪನಿಗಳು ಬೆಳೆಯುತ್ತಾ ಹೋಗಿವೆ. ಸಹಜವಾಗಿಯೇ ಅನೇಕ ದೇಶಗಳಲ್ಲಿ ಸ್ಥಳೀಯ ಟ್ಯಾಕ್ಸಿ ಡ್ರೈವರ್‌ಗಳಿಂದ ಪ್ರತಿರೋಧ ವ್ಯಕ್ತವಾಗಿದ್ದಿದೆ. ಈ ಪ್ರತಿಭಟನೆಗಳು ಹಿಂಸಾಚಾರಕ್ಕೂ ಎಡೆ ಮಾಡಿಕೊಟ್ಟಿದ್ದಿದೆ.

ಅನೇಕ ಕಡೆ ಪ್ರತಿಭಟನೆ ವೇಳೆ ಊಬರ್ ಡ್ರೈವರ್‌ಗಳ ಮೇಲೆ ಬೇರೆ ಟ್ಯಾಕ್ಸಿ ಚಾಲಕರು ಹಲ್ಲೆ ಮಾಡಿದ ಘಟನೆಗಳು ನಡೆದಿವೆ. ಈ ಘಟನೆಗಳನ್ನು ಬಳಸಿಕೊಂಡು ಆಡಳಿತಯಂತ್ರದ ಅನುಕಂಪ ಗಿಟ್ಟಿಸಿ ತನ್ನ ಪರವಾಗಿ ನೀತಿ ರೂಪಿಸಿಕೊಳ್ಳುವ ಚಾಕಚಕ್ಯತೆಯನ್ನು ಊಬರ್ ತೋರಿದ್ದನ್ನು ಲೀಕ್ಡ್ ಫೈಲ್ಸ್ ಹೇಳುತ್ತವೆ.

"ಹಿಂಸಾಚಾರ ಯಶಸ್ಸನ್ನು ಖಾತ್ರಿಪಡಿಸುತ್ತದೆ" ಎಂಬುದು ಊಬರ್‌ನ ಸಿಇಒ ಆಗಿದ್ದ ಕಲಾನಿಕ್ ತನ್ನ ಸಹೋದ್ಯೋಗಿಗಳಿಗೆ ಕಳುಹಿಸಿದ ಒಂದು ಸಂದೇಶ. ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಊಬರ್ ಚಾಲನೆಗೊಂಡ ಬಳಿಕ ನಡೆದ ಪ್ರತಿಭಟನೆಗಳಿಗೆ ಪ್ರತಿಯಾಗಿ ಬೇರೆ ಪ್ರತಿಭಟನೆಗೆ ಕುಮ್ಮಕ್ಕು ಕೊಡುವ ಸಂದೇಶ ಅದು.

 ಭಾರತದ ವಿಚಾರ

ಭಾರತದ ವಿಚಾರ

ಭಾರತದಲ್ಲಿ ಊಬರ್ ಸೇವೆ ಪ್ರಾರಂಭವಾಗಿದ್ದು 2014, ಆಗಸ್ಟ್ 23ರಂದು. ಅದಾಗಿ ಕೆಲವೇ ತಿಂಗಳಲ್ಲಿ ಊಬರ್‌ನ ಕ್ಯಾಬ್ ಡ್ರೈವರ್‌ವೊಬ್ಬ ಮಹಿಳೆ ಮೇಲೆ ಲೈಂಗಿಕ ಹಲ್ಲೆ ಎಸಗಿದ ಪ್ರಕರಣ ದೊಡ್ಡ ಸದ್ದು ಮಾಡಿತು. ಆಗ ಸರಕಾರಿ ಸಂಸ್ಥೆಗಳಿಂದ ಕಠಿಣ ಕಾನೂನುಗಳನ್ನು ರೂಪಿಸಲಾಗುತ್ತಿತ್ತು. ಇಂಥ ಸಂದರ್ಭದಲ್ಲೇ ಊಬರ್‌ನ ಏಷ್ಯಾ ವಿಭಾಗದ ಮುಖ್ಯಸ್ಥ ಅಲನ್ ಪೆನ್ ತಮ್ಮ ತಂಡಕ್ಕೆ ಇಮೇಲ್ ಕಳುಹಿಸುತ್ತಾರೆ: "ಗೊಂದಲವನ್ನು ಸ್ವೀಕರಿಸಿ. ಗೊಂದಲ ಎಂದರೆ ನೀವು ಸರಿಯಾದುದನ್ನೇ ಮಾಡುತ್ತಿದ್ದೀರೆಂದು ಅರ್ಥ" ಎಂದು ಬರೆದಿದ್ದರು.

ಸರಕಾರದ ಮನವಿಗಳಿಗೆ ಬೆಲೆ ಕೊಡಬೇಡಿ. ಸರಕಾರಿ ಅಧಿಕಾರಿಗಳೊಂದಿಗೆ, ಅಥವಾ ಸರಕಾರಕ್ಕೆ ಜೋಡಿತವಾಗಿರುವ ವ್ಯಕ್ತಿಗಳೊಂದಿಗೆ ನೀವು ಮಾತುಕತೆ ನಡೆಸಲು ಹೋಗಬೇಡಿ ಎಂದು ಊಬರ್‌ನ ಭಾರತೀಯ ಘಟಕಕ್ಕೆ ನಿರ್ದೇಶನ ಕೊಡಲಾಗಿತ್ತು.

ತನಿಖಾ ಸಂಸ್ಥೆಗಳು ಊಬರ್‌ನ ಕಚೇರಿಗಳಿಗೆ ದಾಳಿ ಮಾಡಿದಾಗ ಕಿಲ್ ಸ್ವಿಚ್ ಬಳಸಲಾಗುತ್ತಿತ್ತು. ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ತನಿಖಾ ಸಂಸ್ಥೆಗಳ ವಿರುದ್ಧ ಊಬರ್ ಕಿಲ್ ಸ್ವಿಚ್ (Kill Switch) ತಂತ್ರ ಪ್ರಯೋಗಿಸಿದೆ.

 ಏನಿದು ಕಿಲ್ ಸ್ವಿಚ್?

ಏನಿದು ಕಿಲ್ ಸ್ವಿಚ್?

ಕಿಲ್ ಸ್ವಿಚ್ ಎಂಬುದು ಕಂಪ್ಯೂಟರ್‌ನಲ್ಲಿ ಇರುವ ದತ್ತಾಂಶವನ್ನು ನೋಡದಂತೆ ನಿರ್ಬಂಧಿಸುವ ವಿಶೇಷ ತಂತ್ರಾಂಶವಾಗಿದೆ. ಕ್ಯಾಸ್ಪರ್ (Casper) ಮತ್ತು ರಿಪ್ಲೀ (Ripley) ಎಂಬ ಸಾಫ್ಟ್‌ವೇರ್ ಅನ್ನು ಊಬರ್ ಅಳವಡಿಸಿಕೊಂಡಿತ್ತು.

ತನಿಖಾ ಸಂಸ್ಥೆಗಳು ಊಬರ್ ಕಚೇರಿ ಮೇಲೆ ದಾಳಿ ಮಾಡಿ ಕಂಪ್ಯೂಟರ್ ಅನ್ನು ವಶಪಡಿಸಿಕೊಂಡಾಗ ಕಿಲ್ ಸ್ವಿಚ್ ಬಳಕೆ ಮಾಡಲಾಗುತ್ತಿತ್ತು. ಇದರ ನಿಯಂತ್ರಣ ಕೇಂದ್ರ ಕಚೇರಿಯಲ್ಲಿರುತ್ತದೆ. ಅಲ್ಲಿಂದಲೇ ಆಪರೇಟ್ ಮಾಡಲಾಗುತ್ತದೆ. ಕಿಲ್ ಸ್ವಿಚ್ ಚಾಲನೆಗೊಂಡರೆ ಕಂಪ್ಯೂಟರ್ ಸ್ವಿಚ್ ಆಫ್ ಆಗುತ್ತದೆ. ಇದನ್ನು ಆನ್ ಮಾಡುವುದು ಅಸಾಧ್ಯವಾಗುತ್ತದೆ.

ಕಿಲ್ ಸ್ವಿಚ್ ಅಷ್ಟೇ ಅಲ್ಲ, ಒಂದು ವೇಳೆ ತನಿಖಾ ಸಂಸ್ಥೆಗಳು ವಿಚಾರಣೆಗೆ ಬಂದರೆ ಯಾವ ಮಾಹಿತಿ ನೀಡಬಹುದು ಎಂಬುದು ಬಿಟ್ಟರೆ ಮಿಕ್ಕೆಲ್ಲಾ ರಹಸ್ಯ ಮಾಹಿತಿಯನ್ನು ಕಿಲ್ ಸ್ವಿಚ್ ಬಚ್ಚಿಡುತ್ತದೆ. ಇದು ಸ್ಥಳೀಯ ಊಬರ್ ಮ್ಯಾನೇಜರ್‌ಗಳಿಗೂ ತಿಳಿಯುವುದಿಲ್ಲ. ಒಂದು ವೇಳೆ ಅವರು ತನಿಖಾಧಿಕಾರಿಗಳಿಗೆ ನಿರ್ದಿಷ್ಟ ಮಾಹಿತಿ ಕೊಡಬೇಕೆಂದು ಇಚ್ಛಿಸಿದರೂ ಕಂಪ್ಯೂಟರ್‌ನಲ್ಲಿ ಅದು ಕಾಣಿಸುವುದಿಲ್ಲ. ಅಂಥದ್ದೊಂದು ವ್ಯವಸ್ಥೆಯನ್ನು ಊಬರ್ ಹೊಂದಿತ್ತು.

 ಫ್ರಾನ್ಸ್ ಅಧ್ಯಕ್ಷರ ಸಹಾಯ

ಫ್ರಾನ್ಸ್ ಅಧ್ಯಕ್ಷರ ಸಹಾಯ

2014ರಲ್ಲಿ ಊಬರ್ ಯೂರೋಪ್‌ನಲ್ಲಿ ಮೊದಲ ಬಾರಿಗೆ ಸೇವೆ ಆರಂಭಿಸಿತು. ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಊಬರ್ ವಿರುದ್ಧ ಸ್ಥಳೀಯ ಟ್ಯಾಕ್ಸಿ ಉದ್ಯಮ ವಿರೋಧ ವ್ಯಕ್ತಪಡಿಸಿತು. ಬೀದಿಗಳಲ್ಲಿ ಪ್ರತಿಭಟನೆಗಳು ನಡೆದವು, ಹಿಂಸಾಚಾರಗಳಾದವು. ಈಗ ಫ್ರಾನ್ಸ್ ಅಧ್ಯಕ್ಷರಾಗಿರುವ ಇಮ್ಯಾನುಯಲ್ ಮ್ಯಾಕ್ರಾನ್ ಆಗ ಹೊಸದಾಗಿ ಆಯ್ಕೆಯಾದ ಹಣಕಾಸು ಸಚಿವರಾಗಿದ್ದರು.

ಆಗ ಮ್ಯಾಕ್ರಾನ್ ಜೊತೆ ಊಬರ್ ಲಾಬಿ ನಡೆಸಿತು. ಊಬರ್‌ಗೆ ಸಹಾಯ ಮಾಡಲು ಮ್ಯಾಕ್ರಾನ್ ಸಮ್ಮತಿಸಿದರು. ಊಬರ್ ಸಹ-ಸಂಸ್ಥಾಪಕ ಟ್ರಾವಿಸ್ ಕಲಾನಿಕ್ ಮತ್ತು ಮ್ಯಾಕ್ರಾನ್ ಹಲವು ಬಾರಿ ಭೇಟಿಯಾದರು.

ಊಬರ್‌ನ ಕಾರ್ಯನಿರ್ವಹಣೆಗೆ ಅನುವಾಗುವ ರೀತಿಯಲ್ಲಿ ಕಾನೂನುಗಳಲ್ಲಿ ಮ್ಯಾಕ್ರಾನ್ ತಿದ್ದುಪಡಿ ತಂದರು. ಉದಾಹರಣೆಗೆ, ಊಬರ್‌ನ ಡ್ರೈವರ್‌ಗಳಿಗೆ ಪರವಾನಿಗೆಯೇ ಇಲ್ಲದಿದ್ದರೂ ವಾಹನ ಚಲಾಯಿಸುತ್ತಾರೆ ಎಂಬ ದೂರಿತ್ತು. ಮ್ಯಾಕ್ರಾನ್ ಅವರು ವಾಹನ ಸವಾರರ ಲೈಸೆನ್ಸ್ ನೀಡಿಕೆ ಕ್ರಮವನ್ನು ಸುಲಭಗೊಳಿಸುವಂತೆ ಕಾನೂನು ರೂಪಿಸಿದರು. ಇವೆಲ್ಲ ಮಾಹಿತಿ ಸೋರಿಕೆಯಾದ ಊಬರ್ ಫೈಲ್ಸ್‌ನಲ್ಲಿ ಸಿಕ್ಕಿವೆ.

 ನೀಲೀ ಕ್ರೂಸ್

ನೀಲೀ ಕ್ರೂಸ್

ಯೂರೋಪ್ ಯೂನಿಯನ್‌ನ ಉಪಾಧ್ಯಕ್ಷೆ ಹಾಗೂ ಡಿಜಿಟಲ್ ಆಯುಕ್ತೆಯಾಗಿದ್ದ ನೀಲೀ ಕ್ರೂಸ್ (Neelie Kroes) ಮತ್ತು ಊಬರ್ ನಡುವೆ ಆಪ್ತ ಸಂಬಂಧ ಇತ್ತು. ಇಯುನಲ್ಲಿ ಅಧಿಕಾರದಲ್ಲಿದ್ದಾಗಲೇ ಅವರು ಊಬರ್‌ನ ಸಲಹಾ ಮಂಡಳಿ ಸೇರಿಕೊಳ್ಳುವ ಮಾತುಕತೆಯಲ್ಲಿದ್ದರು.

ವಿವಿಧ ಕಡೆ ತನಿಖಾ ಸಂಸ್ಥೆಗಳು ಊಬರ್ ಕಚೇರಿ ಮೇಲೆ ದಾಳಿ ಮಾಡುವಾಗೆಲ್ಲಾ ಈಕೆ ಅಲ್ಲಿನ ಸಚಿವರಿಗೆ ಕರೆ ಮಾಡಿ ರೇಡ್ ನಿಲ್ಲಿಸುವಂತೆ ಪ್ರಭಾವ ಬೀರುತ್ತಿದ್ದರೆನ್ನಲಾಗಿದೆ.

ಊಬರ್‌ನ ಆಂತರಿಕ ಇಮೇಲ್‌ನಲ್ಲಿ ನೀಲೀ ಕ್ರೂಸ್ ಬಗ್ಗೆ ಒಂದು ಆಂತರಿಕ ಇಮೇಲ್ ಕಳುಹಿಸಲಾಗಿತ್ತು. ಅದರಲ್ಲಿ "ನೀಲೀ ಕ್ರೂಸ್ ಮತ್ತು ಊಬರ್ ನಡುವಿನ ಸಂಬಂಧ ಬಹಳ ರಹಸ್ಯವಾದುದು. ಅವರ ಬಗ್ಗೆ ಕಂಪನಿಯ ಒಳಗಾಗಲೀ ಅಥವಾ ಹೊರಗಾಗಲೀ ಮಾತನಾಡಿದರೆ ಅವರ ಘನತೆಗೆ ಕುಂದುಂಟಾಗುವುದರ ಜೊತೆಗೆ ಊಬರ್‌ಗೆ ಸಹಾಯ ಹಸ್ತವೊಂದು ನಿಂತಂತಾಗುತ್ತದೆ" ಎಂದು ಬರೆಯಲಾಗಿದೆ.

2017ರವರೆಗೂ ಊಬರ್‌ನ ಕಾರ್ಯನಿರ್ವಹಣೆ ಬಹಳ ವಿವಾದಾತ್ಮಕವಾಗಿತ್ತೆನ್ನಲಾಗಿದೆ. 2017ರಲ್ಲಿ ಟ್ರಾವಿಸ್ ಕಲಾನಿಕ್ ಅವರ ನಿರ್ಗಮನದ ಬಳಿಕ ದಾರಾ ಖೊಸ್ರೋವಶಾಹಿ ಸಿಇಒ ಆದರು. ಅದಾದ ಬಳಿಕ ಊಬರ್‌ನ ನೀತಿ ಮತ್ತು ಕಾರ್ಯನಿರ್ವಹಣೆಯಲ್ಲಿ ಸಂಪೂರ್ಣ ಬದಲಾವಣೆ ಆಯಿತು ಎಂದು ಹೇಳಲಾಗುತ್ತದೆ. ಅದೇನೇ ಇದ್ದರೂ 2013ರಿಂದ 2017ರವರೆಗಿನ ಅವಧಿಯ ಊಬರ್ ಫೈಲ್‌ಗಳು ನಮ್ಮ ವ್ಯವಸ್ಥೆ ಮತ್ತು ವ್ಯವಹಾರಗಳಲ್ಲಿನ ನ್ಯೂನತೆಗಳನ್ನು ಬಹಳ ಸ್ಪಷ್ಟವಾಗಿ ತೋರಿಸುತ್ತದೆ.

(ಒನ್ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+