ವೀಸಾ ವಂಚನೆ : ಇನ್ಫೋಸಿಸ್ ಗೆ 215 ಕೋಟಿ ರು ದಂಡ
ವಾಷ್ಟಿಂಗ್ಟನ್, ಅ.30 : ವಾಣಿಜ್ಯೋದ್ದೇಶದ ತಾತ್ಕಾಲಿಕ ವೀಸಾ ದುರ್ಬಳಕೆ ಪ್ರಕರಣದಲ್ಲಿ ಐಟಿ ದಿಗ್ಗಜ ಇನ್ಫೋಸಿಸ್ ಭಾರಿ ಮುಖಭಂಗ ಅನುಭವಿಸಿದೆ. ನ್ಯಾಯಾಂಗ ಇಲಾಖೆ ಬುಧವಾರ ನೀಡಿರುವ ತೀರ್ಪಿನ ಪ್ರಕಾರ ಭಾರತದ ಇನ್ಫೋಸಿಸ್ ಕಂಪನಿಗೆ 35 ದಶಲಕ್ಷ ಡಾಲರ್ ದಂಡ ವಿಧಿಸಲಾಗಿದೆ.
''ಪ್ರಕರಣ ಇತ್ಯರ್ಥ ಕುರಿತು ಅಮೆರಿಕ ಸರಕಾರದ ಮಾತುಕತೆ ನಡೆಸಲಾಗುತ್ತಿದೆ. ಆದರೆ ಇನ್ನೂ ಇತ್ಯರ್ಥವಾಗಿಲ್ಲ''ಎಂದು ಇನ್ಫೋಸಿಸ್ ಮಂಗಳವಾರ ಪಿಟಿಐಗೆ ಹೇಳಿಕೆ ನೀಡಿತ್ತು. ಅದರೆ, East Texas Attorney ನ್ಯಾಯಾಂಗ ಇಲಾಖೆ ವಿಚಾರಣೆ ನಂತರ ಇನ್ಫೋಸಿಸ್ ಸಂಸ್ಥೆ ಭಾರಿ ಮೊತ್ತದ ದಂಡ ಪಾವತಿಸಲು ಮುಂದಾಗಿರುವುದು ದೃಢಪಟ್ಟಿದ್ದು ಅಮೆರಿಕದ ಇತಿಹಾಸದಲ್ಲೆ ಇದು ಹೊಸ ದಾಖಲೆಯಾಗಲಿದೆ. ವೀಸಾ ನಿಯಮೋಲ್ಲಂಘನೆಗೆ ಸಂಬಂಧಿಸಿದ ಅತಿ ದೊಡ್ಡ ಮೊತ್ತದ ದಂಡ ಇದಾಗಲಿದೆ ಎಂದು ವಾಲ್ ಸ್ಟ್ರೀಟ್ ಪತ್ರಿಕೆ ಹೇಳಿದೆ.
ಈ ಬಗ್ಗೆ 2011ರಿಂದ ಅಮೆರಿಕದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.ಪ್ರಕರಣದ ಇತ್ಯರ್ಥಕ್ಕೆ ಸಂಬಂಧಿಸಿ 35 ದಶಲಕ್ಷ ಡಾಲರ್ ಮೊತ್ತವನ್ನು ಮೀಸಲಿಟ್ಟಿರುವುದಾಗಿ ಇನ್ಫೋಸಿಸ್ ಇತ್ತೀಚೆಗೆ ಹೇಳಿತ್ತು. ಸಾಫ್ಟ್ ವೇರ್ ವಲಯದಲ್ಲಿ ಅಗ್ಗದ ದರದಲ್ಲಿ ದೊರೆಯುತ್ತಾರೆ ಎಂಬ ಕಾರಣಕ್ಕೆ ಸುಶಿಕ್ಷಿತ ಅಮೆರಿಕನ್ನರ ಬದಲಿಗೆ ವಿದೇಶಿ ಕೆಲಸಗಾರರನ್ನು ನೇಮಿಸಲಾಗುತ್ತಿದೆ ಎಂಬ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಈ ಪ್ರಕರಣದ ತನಿಖೆ ನಡೆದಿದೆ.
ಇನ್ಫೋಸಿಸ್ ನಂಥ ಭಾರತೀಯ ಐಟಿ ಕಂಪನಿಗಳು ಸಾವಿರಾರು ತಾತ್ಕಾಲಿಕ ವೀಸಾಗಳ ಮೂಲಕ ಉದ್ಯೋಗಿಗಳನ್ನು ಅಮೆರಿಕಕ್ಕೆ ಕರೆಸಿಕೊಳ್ಳುತ್ತಿದೆಎಂಬುದರ ಬಗ್ಗೆ ಸ್ಥಳೀಯ ಕಂಪನಿಗಳು ಆಕ್ಷೇಪ ವ್ಯಕ್ತಪಡಿಸಿದ್ದವು, ಅಮೆರಿಕದ ಸಂಸತ್ತಿನಲ್ಲಿ ಬಿಸಿಬಿಸಿ ಚರ್ಚೆ ನಡೆದಿತ್ತು. ಇನ್ಫೋಸಿಸ್ ಮೇಲಿನ ದೂರುಗಳು ಹಾಗೂ ಕೇಸು ಗಳ ಹಿನ್ನೋಟ ಇಲ್ಲಿದೆ ತಪ್ಪದೇ ನೋಡಿ

ಜನಪ್ರತಿನಿಧಿಗಳಿಂದ ದೂರು
ಇನ್ಫೋಸಿಸ್ ನಂಥ ಭಾರತೀಯ ಐಟಿ ಕಂಪನಿಗಳು ಸಾವಿರಾರು ತಾತ್ಕಾಲಿಕ ವೀಸಾಗಳ ಮೂಲಕ ಉದ್ಯೋಗಿಗಳನ್ನು ಅಮೆರಿಕಕ್ಕೆ ಕರೆಸಿಕೊಳ್ಳುತ್ತಿದೆ. ಇದರಿಂದ ಅಮೆರಿಕನ್ನರಿಗೆ ಉದ್ಯೋಗ ನಷ್ಟವಾಗುತ್ತಿದೆ ಎಂದು ಅಲ್ಲಿನ ಕೆಲ ಜನಪ್ರತಿನಿಧಿಗಳು ದೂರಿದ್ದರು.

ಜನಾಂಗೀಯ ನಿಂದನೆ
ವಿಸ್ಕೊಸಿನ್ ಮೂಲದ ಬ್ರೆಂಡಾ ಕೊಹ್ಲರ್ ಎಂಬ ಐಟಿ ತಜ್ಞೆ ಇನ್ಫೋಸಿಸ್ ಕಂಪನಿ ವಿರುದ್ಧ ಕಾನೂನು ಸಮರ ಸಾರಿದ್ದಾರೆ. ಇನ್ಫೋಸಿಸ್ ಸಂಸ್ಥೆ ದಕ್ಷಿಣ ಏಷ್ಯನ್ನರು ನೇಮಿಸಿಕೊಳ್ಳುವ ಇಚ್ಛೆ ಹೊಂದಿರುವಂತೆ ಕಾಣುತ್ತದೆ ಹೀಗಾಗಿ ಸ್ಥಳೀಯರಿಗೆ ಉದ್ಯೋಗ ನೀಡಲು ನಿರಾಕರಿಸಿದೆ ಎಂದು ಆಕೆ ತನ್ನ ದೂರಿನಲ್ಲಿ ಹೇಳಿದ್ದಾರೆ.

ತ್ರಿಪುರನೇನಿ ಪ್ರಸಂಗ
ವೀಸಾ ವಂಚನೆಯನ್ನು ಬಯಲಿಗೆಳೆದ ನಂತರ ಕಂಪನಿ ತನಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ, ಕ್ಯಾಲಿಫೋರ್ನಿಯಾದ ಇನ್ಫೋಸಿಸ್‌ನಲ್ಲಿ ಅಕೌಂಟ್ಸ್ ಮ್ಯಾನೇಜರ್ ಆಗಿದ್ದ ಸತ್ಯ ದೇವ್ ತ್ರಿಪುರನೇನಿ ಅವರು ದಾವೆ ಹೂಡಿದ್ದರು.
ಐದು ವರ್ಷ ಅಕೌಂಟ್ಸ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ ನಂತರ ಕಂಪನಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ತ್ರಿಪುರನೇನಿ ಕಂಪನಿಗೆ ರಾಜೀನಾಮೆ ನೀಡಿದ್ದರು.
ತ್ರಿಪುರನೇನಿ ಮತ್ತು ಕಂಪನಿ ನಡುವೆ ನ್ಯಾಯಾಲಯದಾಚೆಗಿನ ಒಪ್ಪಂದ ಏರ್ಪಟ್ಟಿದ್ದು, ಕೇಸನ್ನು ವಾಪಸ್ ಪಡೆಯಲಾಗಿತ್ತು.

ಪಾಮರನ ಕೇಸು
ಅಮೆರಿಕದ ವೀಸಾ ನೀತಿ, ಬಿಸಿನೆಸ್ ವೀಸಾ ನಿಯಮಗಳನ್ನು ಮೀರಿ ಭಾರತದ ಉದ್ಯೋಗಿಗಳನ್ನು ಅಮೆರಿಕಕ್ಕೆ ಕಳುಹಿಸುವ ಮೂಲಕ ದೊಡ್ಡ ವಂಚನೆ ಜಾಲದಲ್ಲಿ ಇನ್ಫೋಸಿಸ್ ಮುಳುಗಿದೆ. ಉದ್ಯೋಗಿಗಳಿಗೆ ಇನ್ಫೋಸಿಸ್ ಕಿರುಕುಳ ನೀಡಿದೆ ಎಂದು ಯುಸ್ ಇನ್ಫೋಸಿಸ್ ನ ಮಾಜಿ ಉದ್ಯೋಗಿ ಜಾಕ್ ಪಾಮರ್ ಆರೋಪಿಸಿದ್ದರು.
ಇನ್ಫೋಸಿಸ್ ಸಂಸ್ಥೆ H-1B ವೀಸಾ ನಿಯಮಗಳನ್ನು ಗಾಳಿಗೆ ತೂರಿ ಅಲ್ಪ ಜ್ಞಾನ ಇರುವ ಸಿಬ್ಬಂದಿಗಳನ್ನು ಬಿ1 ವೀಸಾ ಮೂಲಕ ಅಮೆರಿಕಕ್ಕೆ ಕರೆಸಿಕೊಳ್ಳುತ್ತಿದೆ ಎಂದು ಪಾಮರ್ ಆರೋಪಿಸಿದ್ದರು. ಅಲಬಾಮದ ಕೋರ್ಟ್ ಇನ್ಫೋಸಿಸ್ ವಿರುದ್ಧದ ಕಿರುಕುಳದ ಕೇಸ್ ವಜಾಗೊಳಿಸಿತ್ತು.












Click it and Unblock the Notifications