ಐದು ವರ್ಷದಲ್ಲೇ ಅತಿ ಕಡಿಮೆ ಹಣದುಬ್ಬರ ದಾಖಲು
ನವದೆಹಲಿ, ಅ, 14 : ಪ್ರತಿ ವರ್ಷ ದೀಪಾವಳಿ ಎದುರಾದಾಗ ಬೆಲೆ ಏರಿಕೆ ಬಿಸಿ ಕಾಡುತ್ತಿತ್ತು. ಆದರೆ ಈ ಬಾರಿ ಅದಕ್ಕೆಲ್ಲ ಮುಕ್ತಿ ಸಿಗುವ ಸಾಧ್ಯತೆ ಇದೆ. ಯಾಕೆಂದರೆ ಸಗಟು ಮಾರಾಟ ಮಾರುಕಟ್ಟೆ ಕಳೆದ ಐದು ವರ್ಷದಲ್ಲೇ ಅತಿ ಕಡಿಮೆ ಹಣದುಬ್ಬರ ದಾಖಲಿಸಿದೆ.
ಆಹಾರ ಮತ್ತು ತರಕಾರಿ ಬೆಲೆಗಳ ನಿರಂತರ ಇಳಿಕೆ ಆರ್ಥಿಕ ಅಭಿವೃದ್ಧಿ ಮೇಲೆ ನೇರ ಪರಿಣಾಮ ಬೀರಿದ್ದು ಸಗಟು ಮಾರುಕಟ್ಟೆಯಲ್ಲಿ ಕಳೆದ ಐದು ವರ್ಷದಲ್ಲೇ ಅತಿ ಕಡಿಮೆ ಅಂದರೆ ಶೇಕಡಾ 2.38 ರಷ್ಟು ಹಣದುಬ್ಬರ ದಾಖಲಾಗಿದೆ.

ಚಿಲ್ಲರೆ ಮಾರಾಟ ದರದಲ್ಲೂ ಗಣನೀಯ ಇಳಿಕೆಯಾಗಿದೆ. ಕಳೆದ ಆಗಸ್ಟ್ ನಲ್ಲಿ 3.52 ಮತ್ತು ಕಳೆದ 2013ರಲ್ಲಿ 7.05 ಇದ್ದ ದರ 2.38ಕ್ಕೆ ಕುಸಿದಿದೆ ಎಂದು ಸರ್ಕಾರ ಬಿಡುಗಡೆ ಮಾಡಿರುವ ದಾಖಲೆಗಳಲ್ಲಿ ಹೇಳಿದೆ. ಕಳೆದ ಮೇ ತಿಂಗಳಿನಿಂದ ಈ ರೀತಿಯ ಬೆಳವಣಿಗೆ ಕಂಡುಬರುತ್ತಿದೆ. ರೂಪಾಯಿ ಮೌಲ್ಯವೂ ದೃಢತೆ ಸಾಧಿಸಿದೆ ಎಂದು ದಾಖಲೆಗಳು ತಿಳಿಸಿವೆ.
ಇತ್ತ ರಿಟೈಲ್ ಹಣದುಬ್ಬರದಲ್ಲೂ ನಿರಂತರ ಇಳಿಕೆ ಕಂಡುಬಂದಿದ್ದು ಶೇ. 6.46ರಷ್ಟಕ್ಕೆ ಮುಟ್ಟಿದೆ. ಇದನ್ನು ಕಳೆದ ಎರಡೂವರೆ ವರ್ಷಗಳಲ್ಲೇ ಅತ್ಯಂತ ಕಡಿಮೆ ಎಂದು ಹೇಳಲಾಗಿದೆ.
ಇಡೀ ತರಕಾರಿ ಮಾರುಕಟ್ಟೆಗೆ ಹೋಲಿಸಿದರೆ ಒಟ್ಟು ಶೇ. 14.98 ಹಣದುಬ್ಬರ ಇಳಿಕೆ ಕಂಡುಬಂದಿದೆ. ಆದರೆ ಕಳೆದ ತಿಂಗಳು ಆಲೂಗಡ್ಡೆ ಬೆಲೆ ಶೇ. 61ರಿಂದ ಶೇ, 90ಕ್ಕೆ ಜಿಗಿದಿದ್ದನ್ನು ಮರೆಯುವಂತಿಲ್ಲ.
ಮೊಟ್ಟೆ, ಮಾಂಸ, ಹಾಲು, ಮೀನು ಮತ್ತಿತರ ವಸ್ತುಗಳ ಬೆಲೆ ಕಳೆದ ತಿಂಗಳು ಕಡಿಮೆಯಾಗಿದೆ. ಆದರೆ ಹಣ್ಣಿನ ದರದಲ್ಲಿ ಕೊಂಚ ಹೆಚ್ಚಳವಾಗಿರುವುದನ್ನು ನೋಡಬಹುದು.
ಇತ್ತ ಸಕ್ಕರೆ, ಅಡುಗೆ ಎಣ್ಣೆ, ಸಿಮೆಂಟ್ ಮುಂತಾದ ವಸ್ತುಗಳು ಬೆಲೆ ತಗ್ಗಿಸಿಕೊಂಡಿದ್ದು ಶೇ.3.45 ರಿಂದ ಶೇ. 2.84ಕ್ಕೆ ಕುಸಿದಿದೆ. ಇದು ನಿರಂತರ ನಾಲ್ಕನೇ ತಿಂಗಳ ಕುಸಿತ ಎಂದು ದಾಖಲೆಗಳು ಹೇಳಿವೆ.
ಇಂಧನ ಮೂಲಗಳಾಗಿರುವ ಎಲ್ ಪಿಜಿ, ಪೆಟ್ರೋಲ್ ಮತ್ತು ಡಿಸೇಲ್ ಸಹ ಕೊಂಚ ಅಗ್ಗವಾಗಿರುವುದು ವಿಶೇಷ. ಆಗಸ್ಟ್ ತಿಂಗಳಲ್ಲಿ ಶೇ. 4.54 ಇದ್ದ ಇಂಧನ ಶಕ್ತಿಗಳ ಹಣದುಬ್ಬರ ಶೇ. 1.33 ರಷ್ಟು ಕುಸಿತ ಕಂಡಿದೆ.
ಕೇಂದ್ರ ಸರ್ಕಾರದ ನೀತಿಗಳು, ಮೌಲ್ಯ ವೃದ್ಧಿಸಿಕೊಂಡ ರೂಪಾಯಿ, ಹೆಚ್ಚಿದ ಬಂಡವಾಳ ಹೂಡಿಕೆ, ಹಣದುಬ್ಬರ ತಡೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತೆಗೆದುಕೊಂಡ ಕ್ರಮಗಳು ಎಲ್ಲವೂ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ.












Click it and Unblock the Notifications