100 ಜಿಬಿಪಿಎಸ್ ವೇಗದ ಇಂಟರ್ನೆಟ್ ಸಾಧ್ಯ : ಇಸ್ರೋ
ಬೆಂಗಳೂರು, ಸೆಪ್ಟೆಂಬರ್ 25: ಇಸ್ರೋ 2019 ರಲ್ಲಿ ಉಡಾಯಿಸಲಿರುವ 4 ಉಪಗ್ರಹಗಳ ನೆರವಿನಿಂದ ದೇಶದ ಇಂಟರ್ನೆಟ್ ವೇಗ ಹೆಚ್ಚಲಿದೆ. ಈ ಉಪಗ್ರಹಗಳಿಂದ ಪ್ರತಿ ಸೆಕೆಂಡ್ಗೆ 100 ಗಿಗಾ ಬೈಟ್(Gbps) ಸ್ಪೀಡ್ನಲ್ಲಿ ಇಂಟರ್ನೆಟ್ ಲಭ್ಯವಾಗಲಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದ್ದಾರೆ.
ಕಳೆದ ವರ್ಷ ಜಿ ಸ್ಯಾಟ್-19 ಉಪಗ್ರಹವನ್ನು ಉಡಾವಣೆ ಮಾಡಿದ ಇಸ್ರೋ ಸಂಸ್ಥೆ ಇದೇ ನವೆಂಬರ್ನಲ್ಲಿ ಜಿ ಸ್ಯಾಟ್-29 ಉಪಗ್ರಹದ ಉಡಾವಣೆಗೆ ತಯಾರಿ ನಡೆಸುತ್ತಿದೆ. ಡಿಸೆಂಬರ್ನಲ್ಲಿ ಜಿ ಸ್ಯಾಟ್-11ನ್ನು ಅಂತರಿಕ್ಷಕ್ಕೆ ಕಳುಹಿಸಲು ಇಸ್ರೋ ಮುಂದಾಗಿದೆ. ಇದಲ್ಲದೆ, ಸ್ಯಾಟ್-20ನ್ನು 2019ರಲ್ಲಿ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲು ಇಸ್ರೋ ಸಿದ್ದವಾಗಿದೆ. ಈ ನಾಲ್ಕು ಉಪಗ್ರಹಗಳಿಂದಾಗಿ ಭಾರತದ ಇಂಟರ್ನೆಟ್ ಹೊಸ ವೇಗ ಪಡೆದುಕೊಳ್ಳಲಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದರು.
ಭಾರತದಲ್ಲಿ 500 ಮಿಲಿಯನ್ ಇಂಟರ್ನೆಟ್ ಬಳಕೆದಾರರಿದ್ದರೂ, ಮೊಬೈಲ್ ಇಂಟರ್ನೆಟ್ ವೇಗದಲ್ಲಿ 109ನೇ ಸ್ಥಾನದಲ್ಲಿದೆ. ವಿಶ್ವದ ಇಂಟರ್ನೆಟ್ ಬಳಕೆದಾರರಲ್ಲಿ 2ನೇ ಸ್ಥಾನ ಪಡೆದಿರುವ ಭಾರತೀಯರ ಇಂಟರ್ನೆಟ್ ವೇಗವನ್ನು ಹೆಚ್ಚಿಸುವ ಸಲುವಾಗಿ ಅನೇಕ ಸಂಶೋಧನೆಗಳು ನಡೆಯುತ್ತಿದೆ.

ಭಾರತದಲ್ಲಿ ಮೊಬೈಲ್ ಇಂಟರ್ನೆಟ್ ವೇಗವು ಗರಿಷ್ಠ 8.8 ಎಂಬಿಪಿಎಸ್ ಹಾಗೂ ಬ್ರಾಡ್ಬ್ಯಾಂಡ್ ವೇಗ ಗರಿಷ್ಠ 18.82 ಎಂಬಿಪಿಎಸ್ ಹೊಂದಿದೆ. ವಿಶ್ವದಲ್ಲಿ ಅತಿ ವೇಗದ ಇಂಟರ್ನೆಟ್ ಸೌಲಭ್ಯವನ್ನು ನಾರ್ವೆ ದೇಶ ಒದಗಿಸುತ್ತಿದ್ದು, ಇಲ್ಲಿ 62 ಎಂಬಿಪಿಎಸ್ ವೇಗದಲ್ಲಿ ಮೊಬೈಲ್ನಲ್ಲಿ ಡೌನ್ಲೋಡ್ ಮಾಡಬಹುದಾಗಿದೆ. ಅದೇ ರೀತಿ 153 ಎಂಬಿಪಿಎಸ್ ಬ್ರಾಡ್ಬ್ಯಾಂಡ್ ವೇಗ ಹೊಂದಿರುವ ಸಿಂಗಪುರ ಕೂಡ ಇಂಟರ್ನೆಟ್ ಮೂಲಕ ಕ್ರಾಂತಿ ಉಂಟು ಮಾಡಿದೆ.












Click it and Unblock the Notifications