ಎಪಿಕ್ ಅಥವಾ ಆಧಾರ್ ನೀಡಿ ಪ್ಯಾನ್ ಕಾರ್ಡ್ ಪಡೆಯಿರಿ
ನವದೆಹಲಿ, ಏ. 21 : ಪ್ಯಾನ್ ಕಾರ್ಡ್ ಪಡೆಯುವ ವಿಧಾನವನ್ನು ಸರ್ಕಾರ ಮತ್ತಷ್ಟು ಸರಳ ಮಾಡಿದೆ. ಎಪಿಕ್ ಅಥವಾ ಆಧಾರ್ ಸಂಖ್ಯೆ ಒದಗಿಸಿದರೆ ಸಾಕು ಪ್ಯಾನ್ ಕಾರ್ಡ್ ನ್ನು ಸುಲಭವಾಗಿ ಪಡೆಯಬಹುದು.
ಆದಾಯ ತೆರಿಗೆ ಇಲಾಖೆಯ 'ನೇರ ತೆರಿಗೆಗಳ ಕೇಂದ್ರೀಯ ಮಂಡಳಿ' ಈ ಬಗ್ಗೆ ಅಧಿಕೃತ ಸೂಚನೆ ಹೊರಡಿಸಿದೆ. ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿ 'ಎಪಿಕ್' ಮತ್ತು ಆಧಾರ್ ಸಂಖ್ಯೆಯು ವ್ಯಕ್ತಿಯ ಜನ್ಮ ದಿನಾಂಕ ದೃಢೀಕರಿಸಲು ಅರ್ಹ ದಾಖಲೆಗಳಾಗುತ್ತವೆ. ಇವೆರಡು ದಾಖಲೆಗಳು ಪ್ಯಾನ್ ಕಾರ್ಡ್ ಪಡೆಯಲು ಸಾಕು ಎಂದು ತಿಳಿಸಿದೆ.[ಪ್ಯಾನ್ ಕಾರ್ಡ್ ಕಳೆದುಕೊಂಡರೆ ಏನು ಮಾಡಬೇಕು?]

ಈ ಹಿಂದೆ ಇದ್ದ ಗೊಂದಲಗಳು ಇದರಿಂದ ಬಗೆಹರಿದಂತಾಗಿವೆ. ಎಪಿಕ್ ಮತ್ತು ಆಧಾರ್ ಇನ್ನುಮುಂದೆ ವಿಶಿಷ್ಟ ಮತ್ತು ಎಲ್ಲಾ ಉದ್ದೇಶಗಳ ಗುರುತಿನ ದಾಖಲೆಗಳಾಗಲಿವೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ಕೇಂದ್ರ ಅಥವಾ ರಾಜ್ಯ ಸರ್ಕಾರ, ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳು ನೀಡುವ ಭಾವಚಿತ್ರವಿರುವ ಗುರುತಿನ ಚೀಟಿ, ಆರೋಗ್ಯ ಸೇವಾ ಯೋಜನೆಗಳಿಗೆ ನೀಡುವ ಗುರುತಿನ ಚೀಟಿಗಳು ಅಥವಾ ಮಾಜಿ ಯೋಧರಿಗೆ ನೀಡುವ ಆರೋಗ್ಯ ಯೋಜನೆಯ ಭಾವಚಿತ್ರವುಳ್ಳ ಗುರುತಿನ ಚೀಟಿಗಳನ್ನು ದಾಖಲೆಗಳೆಂದು ಪರಿಗಣಿಸಬಹುದು.[ಆಧಾರ್ ಕಾರ್ಡ್ ಮಾಡಿಸುವುದು ಹೇಗೆ?]
ಸರ್ಕಾರಿ ಸೇವೆಯಲ್ಲಿರುವವರು ಪ್ಯಾನ್ ಕಾರ್ಡ್ ಪಡೆಯಲು ಇದುವರೆಗೆ ಜನ್ಮ ದಿನಾಂಕದ ದೃಢೀಕರಣಕ್ಕೆ 8 ದಾಖಲೆಗಳನ್ನು ಗೊತ್ತುಪಡಿಸಲಾಗಿತ್ತು. ಸಿಬಿಡಿಟಿ ಮತ್ತು ಕೇಂದ್ರ ಸರ್ಕಾರ ಇದೀಗ ಹೊಸ ಅಧಿಸೂಚನೆ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಇನ್ನುಮುಂದೆ ವ್ಯಕ್ತಿಯ ಜನ್ಮ ದಿನಾಂಕ ದೃಢೀಕರಣಕ್ಕೆ 12 ಗುರುತಿನ ದಾಖಲೆಗಳನ್ನು ಬಳಸಬಹುದು.[ಪಾನ್ ಕಾರ್ಡ್ ಹೇಗೆ ಪಡೆಯಬೇಕು? ಏತಕ್ಕೆ ಬೇಕು?]
ನೀವು ಆನ್ ಲೈನ್ ಮೂಲಕ ಇಲ್ಲವೇ ನೇರವಾಗಿ ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುತ್ತಿದ್ದೀರಿ ಎಂಥಾದರೆ ಎಪಿಕ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ನೀಡಿದರೆ ಸಾಕಾಗುತ್ತದೆ. ಎರಡರಲ್ಲೂ ಸಾಮಾನ್ಯವಾಗಿ ಜನ್ಮದಿನಾಂಕ ಮತ್ತು ಫೋಟೋ ಇರುತ್ತದೆ. ಹಾಗಾಗಿ ಹಲವಾರು ದಾಖಲೆಗಳನ್ನು ಒದಗಿಸುವ ಬದಲು ಯೋಜನೆಯನ್ನು ಸರಳೀಕರಣ ಮಾಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಪ್ರಕಟಣೆ ತಿಳಿಸಿದೆ.











Click it and Unblock the Notifications