ಎಟಿಎಂನಲ್ಲಿ ಬರಲಿಲ್ಲ ಹಣ, ಖಾತೆಯಿಂದ ಕಡಿತ; ಬ್ಯಾಂಕಿಗೆ 2 ಲಕ್ಷ ದಂಡ
ಹುಬ್ಬಳ್ಳಿ, ಜನವರಿ 05; ಎಟಿಎಂನಲ್ಲಿ ಹಣ ಬರಲಿಲ್ಲ. ಆದರೆ ಬ್ಯಾಂಕ್ ಖಾತೆಯಿಂದ ಕಡಿತವಾಗಿತ್ತು. ಗ್ರಾಹಕನಿಗೆ ಹಣ ನೀಡಲು ನಿರಾಕರಿಸಿದ ಹೆಚ್‌ಡಿಎಫ್‌ಸಿ ಬ್ಯಾಂಕಿಗೆ 2 ಲಕ್ಷದ 24 ಸಾವಿರ ರೂ. ಗಳ ದಂಡ ಹಾಕಲಾಗಿದೆ.
ಹುಬ್ಬಳ್ಳಿಯ ಅಂಚಟಗೇರಿ ನಿವಾಸಿ ಮಹ್ಮದರಫಕತ್ ಅನಸಾರಿ ಎಂಬುವವರು ಬಿಹಾರ ರಾಜ್ಯದ ಮುಜಾಫರಪುರ್‌ಗೆ ಪ್ರವಾಸಕ್ಕೆ ತೆರಳಿದಾಗ ಅಲ್ಲಿನ ಹೆಚ್‌ಡಿಎಫ್‌ಸಿ ಬ್ಯಾಂಕಿನ ಎಟಿಎಂನಲ್ಲಿ 10 ಸಾವಿರದಂತೆ ಎರಡು ಬಾರಿ ಹಣ ತೆಗೆಯಲು ಕಾರ್ಡ್ ಬಳಸಿದ್ದರು.
ಆದರೆ ಎಟಿಎಂನಿಂದ ಹಣ ಬರದೇ ಇದ್ದರೂ ಅವರ ಉಳಿತಾಯ ಖಾತೆಯಿಂದ 20,000 ರೂ. ಕಡಿತವಾಗಿತ್ತು. ಈ ಬಗ್ಗೆ ಅವರು ತನ್ನ ಉಳಿತಾಯ ಖಾತೆ ಇರುವ ಹುಬ್ಬಳ್ಳಿಯ ಅಂಚಟಗೇರಿಯ ಯುನಿಯನ್ ಬ್ಯಾಂಕ್‍ಗೆ ದೂರು ನೀಡಿದ್ದರು. ಎಟಿಎಂ ತಪ್ಪನ್ನು ಸರಿಪಡಿಸಲು ಕೋರಿದ್ದರು.

ದೂರಿನ ಆಧಾರದ ಮೇಲೆ ಯುನಿಯನ್ ಬ್ಯಾಂಕ್ ಎಟಿಎಂ ದೋಷದಿಂದ ಬಾರದ 20,000 ರೂ. ಗಳನ್ನು ತಕ್ಷಣ ದೂರುದಾರರ ಖಾತೆಗೆ ಜಮಾ ಮಾಡುವಂತೆ ಎಚ್‌ಡಿಎಫ್‌ಸಿ ಬ್ಯಾಂಕ್‍ಗೆ ಪತ್ರ ವ್ಯವಹಾರ ಮಾಡಿದ್ದರು. ಆದರೂ ಸದರಿ ಬ್ಯಾಂಕಿನವರು ಖಾತೆಗೆ ಜಮಾ ಮಾಡಲಿಲ್ಲ.
ಆಗ ಗ್ರಾಹಕರು ಹಣ ಖಾತೆಗೆ ಜಮಾವಾಗಿಲ್ಲ, ಇದರಿಂದ ತನಗೆ ತೊಂದರೆಯಾಗಿ ಆ ಬ್ಯಾಂಕ್‌ನಿಂದ ಸೇವಾ ನ್ಯೂನ್ಯತೆ ಆಗಿದೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ಸಲ್ಲಿಸಿದ್ದರು.
ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಎಚ್‌ಡಿಎಫ್‌ಸಿ ಬ್ಯಾಂಕಿನ ಎಟಿಎಂ ದೋಷದಿಂದ ದೂರುದಾರನಿಗೆ ಹಣ ಬಂದಿಲ್ಲ. ಕಾರಣ ಆ ಹಣ ಸದರಿ ಬ್ಯಾಂಕಿನಲ್ಲಿಯೇ ಉಳಿದಿತ್ತು.

ಈ ಬಗ್ಗೆ ಯುನಿಯನ್ ಬ್ಯಾಂಕ್ ಶಾಖಾ ವ್ಯವಸ್ಥಾಪಕರು 2019ರಲ್ಲಿ ಎರಡು ಬಾರಿ ಬ್ಯಾಂಕಿನವರನ್ನು ಸಂಪರ್ಕಿಸಿ ದೂರುದಾರನ ಹಣವನ್ನು ಅವನ ಖಾತೆಗೆ ಹಿಂದಿರುಗಿಸಲು ಕೋರಿದ್ದರು. ಆದರೂ ಬ್ಯಾಂಕಿನವರು ಘಟನೆ ನಡೆದ 17/01/2019 ರಿಂದ ಈ ವರೆಗೆ ಸುಮಾರು 4 ವರ್ಷ ದೂರುದಾರನ ಖಾತೆಗೆ ಹಣ ಜಮಾ ಮಾಡಿರಲಿಲ್ಲ.
ಈ ರೀತಿ ಎಟಿಎಂ ದೋಷದಿಂದ ಹಣ ಬಾರದ ಪ್ರಕರಣಗಳಲ್ಲಿ 6 ದಿವಸದೊಳಗಾಗಿ ಸಂಬಂಧಿಸಿದ ಬ್ಯಾಂಕಿನವರು ಕ್ರಮ ಕೈಗೊಂಡು ಗ್ರಾಹಕನ ಖಾತೆಗೆ ತಕ್ಷಣ ಹಣ ಜಮಾ ಮಾಡಬೇಕು. ತಪ್ಪಿದ್ದಲ್ಲಿ 7ನೇ ದಿನದಿಂದ ಜಮಾ ಆಗುವವರೆಗೆ ಪ್ರತಿ ದಿನ 100 ರೂ.ಗಳ ದಂಡ ಕೊಡಬೇಕು ಎಂದು ಸುತ್ತೋಲೆ ಇದೆ.
ಆದ್ದರಿಂದ 17/01/2019 ರಿಂದ ಈವರೆಗೆ ಸುಮಾರು 4 ವರ್ಷಗಳ ಕಾಲ ಹಣ ದೂರುದಾರನ ಖಾತೆಗೆ ಜಮಾ ಮಾಡದ ಕಾರಣ ಬ್ಯಾಂಕಿನ ಸಿಬ್ಬಂದಿ ಕರ್ತವ್ಯ ಲೋಪ ಎಸಗಿ ಸೇವಾ ನ್ಯೂನ್ಯತೆ ಮಾಡಿದ್ದಾರೆ ಎಂದು ಜಿಲ್ಲಾ ಗ್ರಾಹಕರ ಆಯೋಗ ತೀರ್ಪು ನೀಡಿದೆ.
ದಿನಾಂಕ 17/01/2019 ರಂದು ಈ ಘಟನೆ ನಡೆದಿದ್ದು ಅದು ಆದ 6 ದಿವಸದ ನಂತರ 23/01/2019 ರಿಂದ ಈ ತೀರ್ಪು ನೀಡಿದ 3/01/2023ರ ವರೆಗೆ 1441 ದಿವಸಕ್ಕೆ ಪ್ರತಿ ದಿವಸಕ್ಕೆ 100 ರೂಪಾಯಿಯಂತೆ ಲೆಕ್ಕಾ ಹಾಕಿ ಎಚ್‌ಡಿಎಫ್‌ಸಿ ಬ್ಯಾಂಕಿನವರು ದೂರುದಾರನಿಗೆ ರೂ. 1,44,100 ದಂಡ.
ರೂ. 20,000ಗಳ ಎಟಿಎಂ ಹಣ ಮತ್ತು ದೂರುದಾರನಿಗೆ ಆಗಿರುವ ತೊಂದರೆ ಮತ್ತು ಮಾನಸಿಕ ಹಿಂಸೆಗೆ 50,000ಗಳ ದಂಡ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಸೇರಿ 10,000 ರೂ. ಸೇರಿ ಒಟ್ಟು 2,24,100 ರೂ.ಗಳನ್ನು ಶೇ 8 ರಂತೆ ಬಡ್ಡಿ ಹಾಕಿ ನೀಡುವಂತೆ ಎಚ್‌ಡಿಎಫ್‌ಸಿ ಬ್ಯಾಂಕಿಗೆ ಆದೇಶಿಸಿದೆ.












Click it and Unblock the Notifications