'ದಂಗಲ್' ಅತಿ ಹೆಚ್ಚು ಹಣ ಗಳಿಸಿದ 5ನೇ ನಾನ್-ಇಂಗ್ಲೀಷ್ ಚಿತ್ರ
ಅಮೀರ್ ಖಾನ್ ಅಭಿನಯದ ದಂಗಲ್ ಚಿತ್ರವು ವಿಶ್ವದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಇಂಗ್ಲೀಷೇತರ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತ ಹಾಗೂ ವಿದೇಶಗಳಲ್ಲಿ ಈ ಚಿತ್ರದ ಕಲೆಕ್ಷನ್ 1924 ಕೋಟಿ ರು.ಗಳಷ್ಟಾಗಿದೆ.
ನವದೆಹಲಿ, ಜೂನ್ 14: ಕಳೆದ ವರ್ಷಾಂತ್ಯಕ್ಕೆ ರಿಲೀಸ್ ಆಗಿ ಭಾರತೀಯ ಸಿನಿಮಾ ರಂಗದ ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಗಳಿಕೆ ಮಾಡಿದ್ದ ಅಮೀರ್ ಖಾನ್ ಅಭಿನಯದ ಹಿಂದಿ ಚಿತ್ರ 'ದಂಗಲ್', ಈಗ ವಿಶ್ವದಲ್ಲೇ ಅತಿ ಹೆಚ್ಚು ಹಣ ಗಳಿಸಿದ ಐದನೇ ಇಂಗ್ಲೀಷೇತರ (non-english) ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇತ್ತೀಚೆಗೆಷ್ಟೇ ಚೀನಾದಲ್ಲಿ ಸದ್ದು ಮಾಡಿ ದೊಡ್ಡ ಹೆಸರು ಮಾಡುತ್ತಿರುವ ದಂಗಲ್ ಚಿತ್ರ ಈವರೆಗೆ ಭಾರತವೂ ಸೇರಿ ವಿಶ್ವದಾದ್ಯಂತ ಸುಮಾರು 301 ಮಿಲಿಯನ್ ಅಮೆರಿಕನ್ ಡಾಲರ್ (1924 ಕೋಟಿ ರು.) ಗಳಿಸಿದೆ.

ಜನಪ್ರಿಯ ನಿಯತಕಾಲಿಕೆ ಫೋರ್ಬ್ಸ್ ನೀಡಿರುವ ವರದಿಯ ಪ್ರಕಾರ, ಈ ಚಿತ್ರ ಭಾರತದಲ್ಲಿ ಅದು ಗಳಿಸಿದ್ದು, 84.4 ಮಿಲಿಯನ್ (ಸುಮಾರು 542 ಕೋಟಿ ರು.). ಇತ್ತೀಚೆಗೆ, ಚೀನಾದಲ್ಲಿ ಬಿಡುಗಡೆಯಾಗಿರುವ ಈ ಚಿತ್ರ 1,155 ಕೋಟಿ ರು. ಗಳಿಸಿದೆ.
ಈವರೆಗೆ, ವಿಶ್ವಮಟ್ಟದಲ್ಲಿ ಹೀಗೆ ಭಾರೀ ಸದ್ದು ಮಾಡಿದ ಚಿತ್ರಗಳೆಂದರೆ, ಚೀನಾದ 'ದ ಮೆರ್ಮೇಯ್ಡ್' (533 ಮಿಲಿಯನ್ ಅಮೆರಿಕನ್ ಡಾಲರ್ - 3425 ಅಮೆರಿಕನ್ ಡಾಲರ್) ಹಾಗೂ 'ಮಾನ್ ಸ್ಟರ್ ಹಂಟ್' (386 ಮಿಲಿಯನ್ ಅಮೆರಿಕನ್ ಡಾಲರ್ - 2481 ಕೋಟಿ ರು.), ಫ್ರಾನ್ಸ್ ನ 'ದ ಇನ್ ಟಚಬಲ್ಸ್' (427 ಮಿಲಿಯನ್ ಅಮೆರಿಕನ್ ಡಾಲರ್ - 2744 ಕೋಟಿ ರು.) ಹಾಗೂ ಜಪಾನ್ ನ 'ಯುವರ್ ನೇಮ್' (354 ಮಿಲಿಯನ್ ಅಮೆರಿಕನ್ ಡಾಲರ್ - 2275 ಕೋಟಿ ರು.). ಇದೀಗ ಈ ಚಿತ್ರಗಳ ಸಾಲಿಗೆ ದಂಗಲ್ ಕೂಡಾ ಸೇರಿದೆ.
ಭಾರತೀಯ ಮಹಿಳಾ ಕುಸ್ತಿಪಟುಗಳಾದ ಗೀತಾ ಹಾಗೂ ಬಬಿತಾ ಫೋಗಟ್ ಅವರ ತಂದೆ ಮಹಾವೀರ್ ಸಿಂಗ್ ಫೋಗಟ್ ಅವರ ಜೀವನಾಧಾರಿತ ಚಿತ್ರ ಇದಾಗಿದೆ.












Click it and Unblock the Notifications