ಬ್ಲೂ ಡಾರ್ಟ್ ಪ್ಲಸ್ ಹೆಸರು ಬದಲಾವಣೆ, ಇನ್ನು ಭಾರತ್ ಪ್ಲಸ್!
ಬೆಂಗಳೂರು, ಸೆಪ್ಟೆಂಬರ್ 13; ಎಕ್ಸ್‌ಪ್ರೆಸ್ ಕೋರಿಯರ್ ಸೇವೆ ನೀಡುವ ಪ್ರಮುಖ ಕಂಪನಿ ಬ್ಲೂ ಡಾರ್ಟ್ ಮಹತ್ವದ ಘೋಷಣೆಯೊಂದನ್ನು ಮಾಡಿದೆ. ದೇಶದ ಹೆಸರು ಬದಲಾವಣೆ ಚರ್ಚೆಯ ನಡಯವೆಯೇ ಭಾರತೀಯ ಪ್ರಮುಖ ಲಾಜಿಸ್ಟಿಕ್ಸ್ ಕಂಪನಿ ತನ್ನ ಹೆಸರು ಬದಲಾಯಿಸಿದೆ.
ಬ್ಲೂ ಡಾರ್ಟ್ ಭಾರತದ ಪ್ರೀಮಿಯಂ ಸೇವೆ 'ಡಾರ್ಟ್ ಪ್ಲಸ್' ಹೆಸರನ್ನು ಬದಲಾವಣೆ ಮಾಡುವುದಾಗಿ ಘೋಷಣೆ ಮಾಡಿದೆ. ಇನ್ನು ಮುಂದೆ ಈ ಸೇವೆಗೆ 'ಭಾರತ್ ಪ್ಲಸ್' ಎಂದು ಕರೆಯಲಾಗುತ್ತದೆ ಎಂದು ತಿಳಿಸಿದೆ. ಮುಂಬೈನಲ್ಲಿ ಪ್ರಧಾನ ಕಛೇರಿ ಹೊಂದಿರುವ ಬ್ಲೂ ಡಾರ್ಟ್ ಮಹಾನಗರಗಳಲ್ಲಿ ಸೇವೆ ನೀಡುತ್ತದೆ.

ಬುಧವಾರ ಈ ಕುರಿತು ಘೋಷಣೆ ಮಾಡಿರುವ ಬ್ಲೂ ಡಾರ್ಟ್, "ಈ ರೂಪಾಂತರ ಬ್ಲೂ ಡಾರ್ಟ್‌ನ ಪ್ರಯಾಣದಲ್ಲಿ ಒಂದು ಮೈಲಿಗಲ್ಲು. ಭಾರತದ ವೈವಿಧ್ಯಮಯ ಅಗತ್ಯಗಳನ್ನು ಪೂರೈಸಲು ನಾವು ಬದ್ಧರಾಗಿದ್ದೇವೆ" ಎಂದು ಹೇಳಿದೆ.
"ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ತನ್ನನ್ನು ತಾನು ಹೊಂದಿಸಿಕೊಂಡು ಮುಂದೆ ಸಾಗಲಾಗುತ್ತಿದೆ. ಹಲವು ದಿನಗಳ ಅನ್ವೇಷಣೆ ಮತ್ತು ಸಂಶೋಧನಾ ಪ್ರಕ್ರಿಯೆಯ ಬಳಿಕ ಈ ಕ್ರಮವನ್ನು ಘೋಷಣೆ ಮಾಡಲಾಗಿದೆ" ಎಂದಿದೆ.
"ನಮ್ಮ ಈ ರೂಪಾಂತರದಲ್ಲಿ ನೀವು ಭಾಗಿಯಾಗಿತ್ತೀರಿ ಎಂಬ ನಂಬಿಕೆ ಇದೆ ಎಂದು ಷೇರುದಾರರಿಗೆ ಹೇಳಿದೆ. ಕಂಪನಿ ಭಾರತವನ್ನು ವಿಶ್ವದೊಂದಿಗೆ ವಿಶ್ವವನ್ನು ಭಾರತದೊಂದಿಗೆ ಸಂಪರ್ಕಿಸುವ ಕಾರ್ಯ ಮುಂದುವರೆಸಲಿದೆ" ಎಂದು ತಿಳಿಸಿದೆ.
ಹೆಸರು ಬದಲಾವಣೆ ಚರ್ಚೆ; ಭಾನುವಾರ ತೆರೆಕಂಡ ಜಿ 20 ಶೃಂಗಸಭೆಯ ಆಮಂತ್ರಣ ಪತ್ರಿಕೆಗಳಲ್ಲಿ 'ಇಂಡಿಯಾ' ಬದಲು 'ಭಾರತ' ಎಂದು ಮುದ್ರಿಸಿರುವುದು ಭಾರೀ ಚರ್ಚೆಗೆ ಕಾರಣವಾಗಿತ್ತು. ಬಳಿಕ ದೇಶದ ಹೆಸರು 'ಭಾರತ' ಆಗಿ ಬದಲಾವಣೆ ಮಾಡಲಾಗುತ್ತದೆ ಎಂಬ ಚರ್ಚೆ ಜೋರಾಗಿತ್ತು.
ಜಿ 20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕುಳಿತ ಕುರ್ಚಿಯ ಮುಂದೆ 'ಭಾರತ' ಎಂದು ಬರೆಯಲಾಗಿತ್ತು. ದೇಶದ ಹೆಸರು ಬದಲಾವಣೆ ಚರ್ಚೆಗೆ ಇದು ಇನ್ನಷ್ಟು ಪುಷ್ಠಿ ನೀಡಿತ್ತು. ಈ ಸಮಯದಲ್ಲಿಯೇ ಬ್ಲೂ ಡಾರ್ಟ್ ಪ್ಲಸ್ ತನ್ನ ಹೆಸರು ಭಾರತ್ ಪ್ಲಸ್ ಎಂಬ ಬದಲಾವಣೆ ಮಾಡಿದೆ.
ಕೇಂದ್ರ ಸರ್ಕಾರ ಸಂಸತ್ತಿನ ಉಭಯ ಸದನಗಳ ವಿಶೇಷ ಅಧಿವೇಶನವನ್ನು ಸೆಪ್ಟೆಂಬರ್ 18 ರಿಂದ 22ರ ತನಕ ನಡೆಸಲಿದೆ. ಈ ವಿಶೇಷ ಅಧಿವೇಶನ ಏಕೆ ಕರೆಯಲಾಗಿದೆ? ಎಂಬುದು ಇನ್ನೂ ಕುತೂಹಲಕ್ಕೆ ಕಾರಣವಾಗಿದೆ. ದೇಶದ ಹೆಸರು ಬದಲಾವಣೆ ಬಗ್ಗೆ ಚರ್ಚೆ ನಡೆಯಲಿದೆ ಎಂಬ ಚರ್ಚೆಯೂ ಸಾಗಿದೆ.












Click it and Unblock the Notifications