ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಬಗ್ಗೆ ಜೇಟ್ಲಿ ಹೇಳಿದ್ದೇನು?
ನವದೆಹಲಿ, ಜೂನ್ 18: ಸತತವಾಗಿ ತೈಲ ಬೆಲೆ ಇಳಿಕೆಯಾಗುತ್ತಿದ್ದರೂ ಅಬಕಾರಿ ಸುಂಕ ಇಳಿಕೆ ಬಗ್ಗೆ ಯಾವುದೇ ಸುದ್ದಿ ಬಂದಿಲ್ಲ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಈ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ಅರುಣ್ ಜೇಟ್ಲಿ, ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಸದ್ಯಕ್ಕೆ ಇಳಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.
ದೇಶದ ನಾಗರಿಕರು ಪ್ರಮಾಣಿಕವಾಗಿ ಬಾಕಿ ಉಳಿಸಿಕೊಂಡಿರುವ ಎಲ್ಲಾ ವಿಧದ ತೆರಿಗೆಯನ್ನು ಪಾವತಿಸಬೇಕು. ಈ ಮೂಲಕ ಕೇಂದ್ರ ಸರ್ಕಾರ ಆದಾಯಕ್ಕಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೆಚ್ಚಾಗಿ ಅವಲಂಬಿತವಾಗುವುದನ್ನು ತಪ್ಪಿಸಬಹುದು ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ.

ಮಾಜಿ ವಿತ್ತ ಸಚಿವ, ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಅವರು, ತೈಲ ಬೆಲೆ ಇಳಿಕೆ ಬಗ್ಗೆ ಕಳೆದ ವಾರ ಮಾತನಾಡುತ್ತಾ, ಮೋದಿ ಸರ್ಕಾರವು ಮನಸ್ಸು ಮಾಡಿದರೆ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಇಳಿಸಬಹುದು. ಆ ಮೂಲಕ ಒಂದು ಲೀಟರ್ ಪೆಟ್ರೋಲ್ ಮೇಲೆ 25 ರೂ.ವರೆಗೆ ಕಡಿತ ಮಾಡಬಹುದು ಎಂದಿದ್ದು, ಭಾರಿ ಚರ್ಚೆಗೊಳಪಟ್ಟಿತ್ತು.
ಚಿದಂಬರಂ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಜೇಟ್ಲಿ, ಕಾಂಗ್ರೆಸ್ ನಾಯಕರ ಸಲಹೆ ಯುಪಿಎ ಸರ್ಕಾರದ ಅವಧಿಯಲ್ಲಿದ್ದಂತೆ ದೇಶವನ್ನು ಸಾಲದ ಸುಳಿಗೆ ಸಿಲುಕಿಸಲಿದೆ ಎಂದಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 1 ರೂ. ಕಡಿತ ಮಾಡಿದರೆ, ಕೇಂದ್ರ ಸರ್ಕಾರಕ್ಕೆ 13 ಸಾವಿರ ಕೋಟಿ ರೂ. ನಷ್ಟವಾಗಲಿದೆ ಎಂಬ ಅಂದಾಜಿದೆ. ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್ ತಂದರೆ, ಪ್ರತಿ ಲೀಟರ್ ಪೆಟ್ರೋಲ್ ಬೆಲೆ 38 ರು ಗಳಿಗೆ ತಗ್ಗಲಿದೆ. (ಪಿಟಿಐ)












Click it and Unblock the Notifications