ಸಿಮೆಂಟ್ ದರ ಪ್ರತಿ ಚೀಲಕ್ಕೆ ಶೇ.25ರಷ್ಟು ಹೆಚ್ಚಳ
ಬೆಂಗಳೂರು, ಜೂ.21: ಸಿಮೆಂಟ್ ತಯಾರಿಕಾ ಕಂಪನಿಗಳ ಸಂಘ ಸಿಮೆಂಟ್ ದರವನ್ನು ಹೆಚ್ಚಳ ಮಾಡಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕ್ರೆಡಾಯ್ - ಕರ್ನಾಟಕ ಘಟಕ, ಇದು ಸಿಮೆಂಟ್ ಕಂಪನಿಗಳ ಸ್ವೇಚ್ಛಾಚಾರದ ನಿರ್ಧಾರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಕ್ರೆಡಾಯ್ ಆಡಳಿತ ಮಂಡಳಿ ಸಭೆಯಲ್ಲಿ ಈ ಸಂಬಂಧ ಚರ್ಚೆ ನಡೆಸಿದ್ದು, ಸದಸ್ಯರು ಬೆಲೆ ಹೆಚ್ಚಳದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರತಿ ಚೀಲಕ್ಕೆ 255 ರೂಪಾಯಿ ಬೆಲೆ ಇತ್ತು. ಆದರೆ, ಈಗ 315 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಈ ಮೂಲಕ ಒಟ್ಟಾರೆ ಶೇ. 25 ರಷ್ಟು ಹೆಚ್ಚಳ ಮಾಡಲಾಗಿದೆ.

ಸಿಮೆಂಟ್ ತಯಾರಿಕಾ ಕಂಪನಿಗಳ ಈ ಕ್ರಮವನ್ನು ಪ್ರಶ್ನಿಸಿ ಕ್ರೆಡಾಯ್ ಕೇಂದ್ರ ಸರ್ಕಾರಕ್ಕೆ ದೂರನ್ನು ನೀಡುವುದರ ಜತೆಯಲ್ಲಿ ಒಂದು ವಾರದ ಒಳಗೆ ಸಿಮೆಂಟ್ ದರವನ್ನು ಇಳಿಸಬೇಕೆಂದು ಮನವಿ ಮಾಡಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ದಿ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ, ಕನ್ ಸ್ಟ್ರಕ್ಷನ್ ಫೆಡರೇಷನ್ ಆಫ್ ಇಂಡಿಯಾ, ನ್ಯಾಷನಲ್ ಹೈವೆ ಅಥಾರಿಟಿ ಆಫ್ ಇಂಡಿಯಾ ಮತ್ತು ಕ್ರೆಡಾಯ್ ಸಿಮೆಂಟ್ ದರ ಹೆಚ್ಚಳ ಖಂಡಿಸಿ ಕಾಂಪಿಟಿಷನ್ ಕಮಿಷನ್ ಆಫ್ ಇಂಡಿಯಾಕ್ಕೆ ದೂರು ನೀಡಲಿವೆ.
ದರ ಹೆಚ್ಚಳದ ಪರಿಣಾಮ ನೇರವಾಗಿ ಜನಸಾಮಾನ್ಯರ ಮೇಲೆ ಆಗಲಿದೆ. ಏಕೆಂದರೆ, ಸಿಮೆಂಟ್ ಬೆಲೆ ಹೆಚ್ಚಳದಿಂದ ನಿರ್ಮಾಣ ವೆಚ್ಚ ಅಧಿಕಗೊಳ್ಳಲಿದೆ. ಹೀಗಾಗಿ ಅಪಾರ್ಟ್ ಮೆಂಟ್ ಗಳ ಬೆಲೆಯಲ್ಲೂ ಹೆಚ್ಚಳವಾಗುತ್ತದೆ. ಅಂದರೆ, ಜನ ಸಾಮಾನ್ಯರು ಹೆಚ್ಚಿನ ಹೊರೆಯನ್ನು ಹೊರಬೇಕಾಗುತ್ತದೆ.
ಸಿಮೆಂಟ್ ಕಂಪನಿಗಳು ಸಿಮೆಂಟ್ ದರವನ್ನು ಈ ಸಂದರ್ಭದಲ್ಲಿ ಹೆಚ್ಚಳ ಮಾಡಬಾರದಿತ್ತು ಎಂದು ಅಭಿಪ್ರಾಯಪಟ್ಟಿರುವ ಕಟ್ಟಡ ನಿರ್ಮಾಣ ಸಂಸ್ಥೆಗಳು ಇದಕ್ಕೆ ನೀಡಿರುವ ಸಮರ್ಥನೆ, ಮುಂಗಾರು ಮಳೆ ಆರಂಭವಾಗಿದೆ. ಈ ಸಂದರ್ಭದಲ್ಲಿ ನಿರ್ಮಾಣ ಕಾಮಗಾರಿಗಳು ಕುಂಠಿತವಾಗುತ್ತವೆ.
ಕ್ರೆಡಾಯ್ ಪ್ರಕಾರ, ಬೆಲೆ ಹೆಚ್ಚಳದಿಂದಾಗಿ ಸಿಮೆಂಟ್ ಮಾರಾಟದಲ್ಲಿ ಸ್ವಲ್ಪ ಕುಂಠಿತವಾಗಲಿದೆ. ಸಿಮೆಂಟ್ ಕಂಪನಿಗಳು ಇಷ್ಟೊಂದು ಪ್ರಮಾಣದಲ್ಲಿ ಬೆಲೆ ಹೆಚ್ಚಳ ಮಾಡಬಾರದಿತ್ತು. ಈಗಾಗಲೆ ಕಬ್ಬಿಣದ ಕಂಪನಿಗಳು ಮೆಟ್ರಿಕ್ ಟನ್ ಗೆ 5 ಸಾವಿರ ರೂಪಾಯಿ ಹೆಚ್ಚಳ ಮಾಡಿ ಕಟ್ಟಡ ನಿರ್ಮಾಣ ಸಂಸ್ಥೆಗಳಿಗೆ ಹೆಚ್ಚಿನ ಹೊರೆಯಾಗುವಂತೆ ಮಾಡಿವೆ.
ದೇಶದಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ಬಹುತೇಕ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಹೊಂದಿವೆ. ಬೆಲೆ ಹೆಚ್ಚಳದಿಂದ ಕಾಮಗಾರಿಗೆ ಹಿನ್ನಡೆ ಆಗುವುದಲ್ಲದೆ, ಕಾಮಗಾರಿ ಮುಗಿಯುವ ವೇಳೆಗೆ ದುಬಾರಿಯಾಗಲಿವೆ. ಅಲ್ಲದೇ ಮುಂದಿನ ದಿನಗಳಲ್ಲಿ ಜನ ಸಾಮಾನ್ಯರ ಮೇಲೆ ಹೆಚ್ಚಿನ ತೆರಿಗೆ ಹೊರೆ ಬೀಳಲೂ ಇದು ಕಾರಣವಾಗುತ್ತದೆ. (ಒನ್ಇಂಡಿಯಾ ಬಿಜಿನೆಸ್ ಡೆಸ್ಕ್)












Click it and Unblock the Notifications