ದುಬಾರಿಯಾಗಲಿವೆ ಎಲ್ಲಾ ಮೊಬೈಲ್ ರೀಚಾರ್ಜ್ ಪ್ಲಾನ್‌ಗಳು
ನವದೆಹಲಿ, ಮೇ 24: ಕಳೆದ ವರ್ಷವಷ್ಟೇ ಶೇ. 25ರವರೆಗೂ ರೀಚಾರ್ಜ್ ಪ್ಲಾನ್ ದರಗಳನ್ನು ಏರಿಸಿದ್ದ ಟೆಲಿಕಾಂ ಆಪರೇಟರ್‌ಗಳು ಈಗ ಒಂದೇ ವರ್ಷದ ಅಂತರದಲ್ಲಿ ಮತ್ತೊಮ್ಮೆ ಭಾರೀ ಏರಿಕೆಗೆ ಮುಂದಾಗುತ್ತಿವೆ. ಮುಂದಿನ ದಿನಗಳಲ್ಲಿ ಮೊಬೈಲ್ ರೀಚಾರ್ಜ್ ಪ್ಲಾನ್‌ಗಳು ಶೇ. 10-12ರಷ್ಟು ದುಬಾರಿಯಾಗಲಿವೆ. ನವೆಂಬರ್‌ನಲ್ಲಿ ಬರಲಿರುವ ದೀಪಾವಳಿ ಹಬ್ಬದಷ್ಟರಲ್ಲಿ ತಮ್ಮ ಪ್ರೀಪೇಯ್ಡ್ ದರಗಳನ್ನು ಏರಿಸಲು ಭಾರ್ತಿ ಏರ್ಟೆಲ್, ರಿಲಾಯನ್ಸ್ ಜಿಯೋ ಮತ್ತು ವೊಡಫೋನ್ ಐಡಿಯಾ ಸಂಸ್ಥೆಗಳು ನಿರ್ಧರಿಸಿವೆ. 2021ರ ನವೆಂಬರ್ ತಿಂಗಳಲ್ಲೇ ಈ ಕಂಪನಿಗಳು ತಮ್ಮ ಪ್ರೀಪೇಯ್ಡ್ ದರಗಳನ್ನು ಶೇ. 20-25ರಷ್ಟು ಏರಿಕೆ ಮಾಡಿದ್ದವು.
ಟೆಲಿಕಾಂ ಕಂಪನಿಗಳು ಲಾಭಕ್ಕಾಗಿ ಪರದಾಡುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಮಾಡಿವೆ. ಇದರಿಂದ ಪ್ರತೀ ಬಳಕೆದಾರನಿಂದ ಸಿಗುವ ಸರಾಸರಿ ಅದಾಯ (ARPU) ಹೆಚ್ಚಳವಾಗುವ ನಿರೀಕ್ಷೆ ಇಟ್ಟುಕೊಂಡಿವೆ ಈ ಕಂಪನಿಗಳು.
ವಿಲಿಯಮ್ ಓ ನೀಲ್ ಅಂಡ್ ಕೋ ಎಂಬ ಕಂಪನಿಯ ಈಕ್ವಿಟಿ ರಿಸರ್ಚ್ ಮುಖ್ಯಸ್ಥ ಮಯೂರೇಶ್ ಜೋಶಿ ನೀಡಿರುವ ಮಾಹಿತಿ ಪ್ರಕಾರ, ಪ್ರತೀ ಗ್ರಾಹಕನಿಂದ ಬರುವ ಸರಾಸರಿ ಆದಾಯ (ARPU) ವನ್ನು 200 ರೂಪಾಯಿಗೆ ಏರಿಸುವ ಗುರಿ ಏರ್‌ಟೆಲ್‌ಗೆ ಇದೆಯಂತೆ. ಅದೇ ವೊಡಾಫೋನ್ ಮತ್ತು ರಿಲಾಯನ್ಸ್ ಜಿಯೋ ಸಂಸ್ಥೆಗಳು ಎಆರ್‌ಪಿಯುನಿಂದ 135 ಮತ್ತು 185 ರೂ ಆದಾಯಕ್ಕೆ ಏರಿಸುವ ಗುರಿ ಹೊಂದಿವೆ ಎನ್ನಲಾಗುತ್ತಿದೆ.

ಜಿಯೋ ಪ್ರವೇಶದ ಬಳಿಕ ಟೆಲಿಕಾಂ ಕಂಪನಿಗಳ ಮಧ್ಯೆ ಬೆಲೆ ಪೈಪೋಟಿ ಬಿದ್ದು ಬಹುತೇಕ ದರಗಳು ಬಹಳ ಅಗ್ಗವಾದವು. ಜಿಯೋ ಜೊತೆ ಸ್ಪರ್ಧೆಗೆ ಬೆಲೆ ಸಮರಕ್ಕೆ ಬಿದ್ದು ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳು ಭಾರೀ ನಷ್ಟ ಅನುಭವಿಸಿದವು. ಕಳೆದ ವರ್ಷ, 2021ರಲ್ಲಿ ಈ ಮೂರು ಟೆಲಿಕಾಂ ಆಪರೇಟಿಂಗ್ ಕಂಪನಿಗಳು ರೀಚಾರ್ಜ್ ದರಗಳನ್ನು ಏರಿಸಲು ನಿರ್ಧರಿಸಿದವು. ಪರಿಣಾಮವಾಗಿ ಶೇ. 20-25ರಷ್ಟು ದರ ಏರಿಕೆ ಆದವು. ಈಗ ಒಂದು ವರ್ಷದ ಅಂತರದಲ್ಲೇ ಮೊಬೈಲ್ ಬಳಕೆದಾರರಿಗೆ ಬೆಲೆ ಏರಿಕೆ ಬಿಸಿ ತಾಗಲಿದೆ.

ಬಹುತೇಕ ಎಲ್ಲಾ ರೀತಿಯ ಪ್ಲಾನ್‌ಗಳ ಬೆಲೆಯೂ ಏರಿಕೆಯಾಗಲಿದೆ. ವೊಡಾಫೋನ್ ಐಡಿಯಾದ ಅನೇಕ ಗ್ರಾಹಕರು ಕಡಿಮೆ ಬೆಲೆಗೆ ಲಭ್ಯ ಇರುವ 2ಜಿ ಪ್ಲಾನ್‌ಗಳಿಗೆ ಮುಗಿಬಿದ್ದಿದ್ದರು. ಇದರಿಂದ ವಿಐನ ಆದಾಯಕ್ಕೆ ಕುತ್ತು ಬಂದಿತ್ತೆನ್ನಲಾಗಿದೆ. ಈಗ 2G ಪ್ಲಾನ್‌ಗಳ ಬೆಲೆಯನ್ನ ಏರಿಸಲು ವಿಐ (Vodafone Idea) ನಿರ್ಧರಿಸುವ ಸಾಧ್ಯತೆ ಇದೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications