ಜಿಎಸ್ ಟಿ ದರ ಮುದ್ರಿಸದಿದ್ದರೆ ತಯಾರಕರಿಗೆ ಜೈಲು!
ಜಿಎಸ್ ಟಿ ಅನ್ವಯಿಸುವ ಎಲ್ಲಾ ಸಾಮಗ್ರಿಗಳ ಮೇಲೆ ಬೆಲೆ ಮುದ್ರಿಸುವಂತೆ ಕೇಂದ್ರ ಸರ್ಕಾರದ ಆದೇಶ. ದೇಶದ ಎಲ್ಲಾ ತಯಾರಕರಿಗೆ, ಮಾರಾಟಗಾರರಿಗೆ ಆದೇಶ. ತಪ್ಪಿದರೆ ಜೈಲು ಶಿಕ್ಷೆ ಸೇರಿದಂತೆ ಹಲವಾರು ಕಾನೂನು ಕ್ರಮಗಳಿಗೆ ಒಳಪಡಿಸುವ ಎಚ್ಚರಿಕೆ.
ನವದೆಹಲಿ, ಜುಲೈ 7: ದೇಶಾದ್ಯಂತ ಸರಕು ಮತ್ತು ಸೇವಾ ತೆರಿಗೆ ಜಾರಿಗೊಂಡ ನಂತರ ಸರಕುಗಳ ಮೇಲೆ ಪರಿಷ್ಕೃತ ದರ ಎಂದು ಮುದ್ರಿಸಲೇಬೇಕು ಎಂದು ಕೇಂದ್ರ ಸರ್ಕಾರ ತಾಕೀತು ಮಾಡಿದೆ.
ಹೊಸದಾಗಿ ಜಾರಿಗೆ ಬಂದಿರುವ ತೆರಿಗೆ ವ್ಯವಸ್ಥೆಯು ಗ್ರಾಹಕರಿಗೆ ಹೊರೆಯಾಗದಂತೆ ನೋಡಿಕೊಳ್ಳಬೇಕೆನ್ನುವ ನಿಟ್ಟಿನಲ್ಲಿ ಗ್ರಾಹಕರ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ತರಲಾಗಿದೆ.
ಇದರ ಬೆನ್ನಲ್ಲೇ ಆದೇಶ ಹೊರಡಿಸಿರುವ ಕೇಂದ್ರ ಸರ್ಕಾರ, ಪ್ರತಿಯೊಂದು ಉತ್ಪನ್ನಗಳ ಮೇಲೂ ಜಿಎಸ್ ಟಿ ಅನ್ವಯ ಪರಿಷ್ಕೃತ ದರವನ್ನು ಮುದ್ರಿಸಬೇಕು. ಇಲ್ಲವಾದರೆ, ಜೈಲು ಶಿಕ್ಷೆಯಂಥ ಗಂಭೀರ ಕ್ರಮ ಕೈಗೊಳ್ಳಬೇಕಾಗಬಹುದು ಎಂದು ಅದು ಹೇಳಿದೆ.

ಪ್ರತ್ಯೇಕ ಮುದ್ರಣ
ಕಾನೂನುಬದ್ಧ ಮಾಪನ ಕಾಯ್ದೆ 2009ರ ಅಧಿನಿಯಮದ ಪ್ರಕಾರ, ಸಂಸ್ಕರಿಸಲ್ಪಟ್ಟ ಅಥವಾ ಪ್ಯಾಕ್ ಮಾಡಲ್ಪಟ್ಟ ಸರಕುಗಳ ಮೇಲೆ ಗರಿಷ್ಠ ಮಾರಾಟ ದರವನ್ನು (ಎಂಆರ್‌ಪಿ) ನಮೂದಿಸಬೇಕು. ಈಗ ಜಿಎಸ್ ಟಿ ಬಂದ ಮೇಲೆ ಹಳೆಯ ಹಾಗೂ ಹೊಸ ದರಗಳನ್ನು ಮುದ್ರಿಸಬೇಕಾಗುತ್ತದೆ.

ಹೊಸ ಲೇಬಲ್ ಹಾಕಬೇಕು ಎಂದ ಸರ್ಕಾರ
ಮೂಲ ಎಂಆರ್‌ಪಿ ಮೇಲೆ ಹೊಸ ದರ ಮುದ್ರಿಸಬಾರದು. ಎರಡನ್ನೂ ಪ್ರತ್ಯೇಕವಾಗಿ ಗುರುತಿಸುವಂತೆ ಹೊಸ ಲೇಬಲ್ ಗಳನ್ನೇ ಮುದ್ರಿಸಬೇಕೆಂದು ಸರ್ಕಾರ ತನ್ನ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ.

ನಿಯಮ ತಪ್ಪಿದರೆ ಜೈಲು
ಜಿಎಸ್‌ಟಿ ಫಲವಾಗಿ ಬೆಲೆ ಕುಸಿತದ ಮರೆ ಮಾಚಿ ಸಾಮಗ್ರಿಗಳನ್ನು ಹೆಚ್ಚು ದರಗಳಿಗೆ ಮಾರುವ ವರ್ತಕರ ವಿರುದ್ಧ ಉಗ್ರ ಕೈಗೊಳ್ಳುವುದಾಗಿಯೂ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

ಮೋಸ ತಪ್ಪಿಸಲು ಸರ್ಕಾರದ ಕ್ರಮ
ಜನರ ನಿತ್ಯ ಜೀವನಕ್ಕೆ ಉಪಯೋಗವಾಗುವಂಥ ದಿನಬಳಕೆಯ ವಸ್ತುಗಳನ್ನು ಹಾಗೂ ಸರಕು ಸಾಮಗ್ರಿಗಳ ಮೇಲಿನ ತೆರಿಗೆಯನ್ನು ಜಿಎಸ್ ಟಿ ಅಡಿಯಲ್ಲಿ ಇಳಿಸಲಾಗಿದೆ. ಇದರ ಪ್ರಯೋಜನ ನೇರವಾಗಿ ಜನರಿಗೆ ಸಿಗಬೇಕೆಂಬುದು ಸರ್ಕಾರದ ಉದ್ದೇಶ.












Click it and Unblock the Notifications