ಹಿಂಡೆನ್‌ಬರ್ಗ್ ಆರೋಪಗಳಿಗೆ ತಿರುಗೇಟು ಕೊಟ್ಟ ಅದಾನಿ ಗ್ರೂಪ್, ಸೆಬಿ ಮುಖ್ಯಸ್ಥರು
ಅದಾನಿ ಗ್ರೂಪ್ ಬೆನ್ನುಬಿದ್ದಿರುವ ಹಿಂಡೆನ್‌ಬರ್ಗ್, ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಅದಾನಿ ಷೇರು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪ ಮಾಡಿತ್ತು. ಹಿಂಡೆನ್‌ಬರ್ಗ್ ಆರೋಪಗಳಿಗೆ ಈಗ ಅದಾನಿ ಗ್ರೂಪ್, ಸೆಬಿ ಅಧ್ಯಕ್ಷೆ ಮತ್ತು ಪ್ರಮುಖ ಉದ್ಯಮದಾರರು ಪ್ರತಿಕ್ರಿಯೆ ನೀಡಿದ್ದು, ದುರುದ್ದೇಶಪೂರ್ವಕವಾಗಿ ಈ ಆರೋಪಗಳನ್ನು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂಡೆನ್‌ಬರ್ಗ್ ರಿಸರ್ಚ್ ಆರೋಪಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಅದಾನಿ ಗ್ರೂಪ್, ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಗಳನ್ನು ದುರುದ್ದೇಶಕಪೂರ್ವಕವಾಗಿ ಆಯ್ಕೆ ಮಾಡಿಕೊಂಡು ಆರೋಪ ಮಾಡಲಾಗುತ್ತಿದೆ ಎಂದು ಹೇಳಿದೆ. ಕಾನೂನನ್ನು ನಿರ್ಲಕ್ಷಿಸಿ ವೈಯಕ್ತಿಕ ಲಾಭಕ್ಕಾಗಿ ಇಂತಹ ಆರೋಪಗಳನ್ನು ಮಾಡಲಾಗುತ್ತಿದೆ. ಈ ಬಗ್ಗೆ ಎಲ್ಲಾ ರೀತಿಯ ತನಿಖೆ ನಡೆದಿದ್ದು, ಆಧಾರ ರಹಿತ ಎಂದು ಸಾಬೀತಾಗಿದೆ ಎಂದು ಅದಾನಿ ಗ್ರೂಪ್ ಹೇಳಿದೆ.

ಭಾರತೀಯ ಸೆಕ್ಯುರಿಟೀಸ್ ಕಾನೂನುಗಳನ್ನು ಹಲವು ಬಾರಿ ಉಲ್ಲಂಘಿಸಿರುವ ಶಾರ್ಟ್-ಸೆಲ್ಲರ್‌ಗೆ, ಹಿಂಡೆನ್‌ಬರ್ಗ್‌ನ ಆರೋಪಗಳು ಭಾರತೀಯ ಕಾನೂನುಗಳ ಮೇಲೆ ಹತಾಶೆಯಿಂದ ಮಾಡಿರುವ ಆರೋಪಗಳು ಇದಾಗಿದೆ ಎಂದು ಅದಾನಿ ಗ್ರೂಪ್ ಸಮರ್ಥನೆ ಕೊಟ್ಟಿದೆ.
ಸೆಬಿ ಅಧ್ಯಕ್ಷರು ಹೇಳಿದ್ದೇನು?
ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಅಧ್ಯಕ್ಷೆ ಮಾಧವಿ ಪುರಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ತಮ್ಮ ವಿರುದ್ಧ ಹಿಂಡೆನ್‌ಬರ್ಗ್ ಮಾಡಿದ ಆರೋಪಗಳನ್ನು ನಿರಾಕರಿಸಿದ್ದಾರೆ. ನನ್ನ ವ್ಯಕ್ತಿತ್ವವನ್ನು ಹಾಳು ಮಾಡಿರುವ ಪ್ರಯತ್ನ ಎಂದು ಹೇಳಿರುವ ಅವರು, ಈ ಬಗ್ಗೆ ಶೋಕಾಸ್ ನೋಟಿಸ್ ಕೊಡಲಾಗಿದೆ ಎಂದು ಹೇಳಿದರು.
"ಸೆಬಿ ಅವರ ವಿರುದ್ಧ ಜಾರಿ ಕ್ರಮ ಕೈಗೊಂಡು ಶೋಕಾಸ್ ನೋಟಿಸ್ ನೀಡಿದ್ದಕ್ಕೆ ಪ್ರತೀಕಾರವಾಗಿ ಹಿಂಡೆನ್‌ಬರ್ಗ್ ರಿಸರ್ಚ್ ನನ್ನ ಮೇಲೆ ಆರೋಪ ಮಾಡುತ್ತಿರುವುದು ದುರದೃಷ್ಟಕರ" ಮಾಧವಿ ಬುಚ್ ಮತ್ತು ಧವಲ್ ಬುಚ್ ಹೇಳಿದ್ದಾರೆ.
ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ಹಿಂಡೆನ್‌ಬರ್ಗ್‌ನ ಇತ್ತೀಚಿನ ಆರೋಪಗಳನ್ನು ಟೀಕಿಸಿದ್ದಾರೆ. ಭಾರತದ ಷೇರು ಮಾರುಕಟ್ಟೆಯನ್ನು ಅಸ್ಥಿರಗೊಳಿಸಲು, ಈ ರೀತಿ ಅಪಪ್ರಚಾರ ಮಾಡಲಾಗುತ್ತಿದೆ. ಅದಾನಿ ಗ್ರೂಪ್ ವಿರುದ್ಧ ಅವರ ಆರೋಪಗಳೇನೂ ಹೊಸದಲ್ಲ ಯುಎಸ್ ಶಾರ್ಟ್ ಸೆಲ್ಲರ್ ಹಿಂಡೆನ್‌ಬರ್ಗ್ ಅದಾನಿ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಕೂಡ ಹಿಂಡೆನ್‌ಬರ್ಗ್ ವರದಿಯನ್ನು ತಿರಸ್ಕರಿಸಿದ್ದು, ಭಾರತದ ಆರ್ಥಿಕತೆಯನ್ನು ಅಸ್ಥಿರಗೊಳಿಸಲು ಜಾಗತಿಕವಾಗಿ ಪ್ರಯತ್ನ ನಡೆಯುತ್ತಿದೆ ಎಂದಿದ್ದಾರೆ. ಐಎಂಎಫ್ ಕಾರ್ಯನಿರ್ವಾಹಕ ನಿರ್ದೇಶಕ ಕೆ.ವಿ. ಸುಬ್ರಮಣಿಯನ್ ಕೂಡ ಸೆಬಿ ಮುಖ್ಯಸ್ಥರ ಪರವಾಗಿ ಮಾತನಾಡಿದ್ದು, ಹಿಂಡೆನ್‌ಬರ್ಗ್ ವರದಿಯನ್ನು ತಿರಸ್ಕರಿಸಿದ್ದಾರೆ.












Click it and Unblock the Notifications