ಫ್ಲಿಪ್ಕಾರ್ಟ್-ವಾಲ್ಮಾರ್ಟ್ ಡೀಲ್ ವಿರುದ್ಧ 10 ಲಕ್ಷ ವ್ಯಾಪಾರಿಗಳಿಂದ ಪ್ರತಿಭಟನೆ
ಬೆಂಗಳೂರು, ಜುಲೈ 2: ಅಮೆರಿಕಾ ಮೂಲದ ದೈತ್ಯ ಸಂಸ್ಥೆ ವಾಲ್ ಮಾರ್ಟ್ ಮತ್ತು ಭಾರತದ ಆನ್ಲೈನ್ ಮಾರುಕಟ್ಟೆ ದಿಗ್ಗಜ ಫ್ಲಿಪ್ ಕಾರ್ಟ್ ನಡುವಿನ ಡೀಲ್ ವ್ಯಾಪಾರಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಈ ಡೀಲ್ ವಿರುದ್ಧ ವ್ಯಾಪಾರಿಗಳು ಬೀದಿಗೆ ಇಳಿದಿದ್ದು, ಇಂದಿನಿಂದ 10 ಲಕ್ಷ ವ್ಯಾಪಾರಿಗಳು ದೇಶದಾದ್ಯಂತ ಪ್ರತಿಭಟನೆ ನಡೆಸಲಿದ್ದಾರೆ.
ಇ-ಕಾಮರ್ಸ್ ದೈತ್ಯ ಕಂಪನಿ ಮಾರುಕಟ್ಟೆಯನ್ನು ದುರ್ಬಲಗೊಳಿಸುತ್ತದೆ ಎಂಬುದು ವ್ಯಾಪಾರಿಗಳ ದೂರಾಗಿದೆ. ಬೆಲೆಗಳಲ್ಲಿ ವ್ಯತ್ಯಾಸ, ಭಾರೀ ರಿಯಾಯಿತಿ ಮೂಲಕ ಎಲ್ಲ ರೀತಿಯ ದುರ್ಬಳಕೆಗಳನ್ನು ಕಂಪನಿ ಮಾಡಲಿದೆ ಎಂದು ದೂರಿ ವ್ಯಾಪಾರಿಗಳು ಈ ಡೀಲ್ ವಿರೋಧಿಸುತ್ತಿದ್ದಾರೆ.

ಮೇ ತಿಂಗಳಲ್ಲಿ, ಫ್ಲಿಪ್ಕಾರ್ಟ್ ತನ್ನ ಶೇ. 77 ಷೇರುಗಳನ್ನು 16 ಬಿಲಿಯನ್ ಡಾಲರ್ಗಳಿಗೆ ವಾಲ್ ಮಾರ್ಟ್ ಗೆ ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿದೆ.
ಅಖಿಲ ಭಾರತೀಯ ವ್ಯಾಪಾರಿಗಳ ಒಕ್ಕೂಟ ಅಥವಾ ಸಿಎಐಟಿ ಅಮೆರಿಕಾದ ಸಂಸ್ಥೆ ಭಾರತಕ್ಕೆ ಬರುತ್ತಿರುವುದನ್ನು ವಿರೋಧಿಸುತ್ತಿದೆ. ವಾಲ್ ಮಾರ್ಟ್ ಭಾರತದಲ್ಲಿ ಅನೈತಿಕ ಸ್ಪರ್ಧೆಗೆ ಇಳಿದು ಇಲ್ಲಿನ ಸಣ್ಣ ವ್ಯಾಪಾರಿಗಳಿಗೆ ಹೊಡೆತ ನೀಡಿಲಿದೆ ಎಂದಿರುವ ಸಿಐಎಟಿ ಪ್ರಧಾನ ಕಾರ್ಯದರ್ಶಿ ಪ್ರವೀಶ್ ಖಂಡೇಲ್ವಾಲ್, ದೇಶದಲ್ಲಿ ಇ ಕಾಮರ್ಸ್ ಪಾಲಿಸಿಯೇ ಇಲ್ಲದಿರುವುದು ವಾಲ್ ಮಾರ್ಟ್ ಗೆ ಹೂವಿನ ಹಾಸಿಗೆಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಡೀಲ್ ಬಗ್ಗೆ ಈಗಾಗಲೇ ವ್ಯಾಪಾರಿಗಳು ಭಾರತೀಯ ಸ್ಪರ್ಧಾತ್ಮಕ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಆಯೋಗ ಇನ್ನೂ ಈ ಡೀಲ್ ಗೆ ಒಪ್ಪಿಗೆ ನೀಡಿಲ್ಲ ಎಂಬುದು ಗಮನಾರ್ಹ. ಇದಕ್ಕೂ ಮೊದಲು ವಾಣಿಜ್ಯ ಸಚಿವ ಸುರೇಶ್ ಪ್ರಭು ಅವರಿಗೂ ಸಿಎಐಟಿ ಪತ್ರ ಬರೆದಿದೆ. ಈ ಪತ್ರದಲ್ಲಿ ವಾಲ್ ಮಾರ್ಟ್ ಅನ್ನು ಈಸ್ಟ್ ಇಂಡಿಯಾ ಕಂಪನಿಯ ಅಮೆರಿಕಾ ರೂಪ ಎಂದು ಕಿಡಿಕಾರಲಾಗಿದೆ.
ಜಾಗತಿಕವಾಗಿ ಅತ್ಯಂತ ಕಡಿಮೆ ದರದ ವಸ್ತುಗಳನ್ನು ಭಾರತದಲ್ಲಿ ತಂದು ಸುರಿದು ಪ್ರತಿಸ್ಪರ್ಧಿಗಳನ್ನು ವಾಲ್ ಮಾರ್ಟ್ ಬಗ್ಗು ಬಡಿಯುತ್ತದೆ ಎಂದು ದೂರಿರುವ ಸಿಎಐಟಿ, ಆದಷ್ಟು ಬೇಗ ದೇಶದಲ್ಲಿ ಇ-ಕಾಮರ್ಸ್ ನೀತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದೆ.












Click it and Unblock the Notifications