ಕರ್ನಾಟಕದಲ್ಲಿ ಹೈದರಾಬಾದ್ ವಿಮೋಚನೆಗಾಗಿ ಹೋರಾಡಿದವರನ್ನು ಕಾಂಗ್ರೆಸ್ ಮರೆತಿದೆ: ಅಮಿತ್ ಶಾ
ಬೀದರ್, ಮಾರ್ಚ್. 26: ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂಬ ಹಠದಲ್ಲಿರುವ ಬಿಜೆಪಿ ರಾಷ್ಟ್ರೀಯ ನಾಯಕರು ಪದೇ ಪದೇ ರಾಜ್ಯಕ್ಕೆ ಬಂದು ಪ್ರಚಾರ ನಡೆಸುತ್ತಿದ್ದಾರೆ. ಬೀದರ್‌ನಲ್ಲಿ ಪ್ರಚಾರ ನಡೆಸಲು ಬಂದಿರುವ ಅಮಿತ್ ಶಾ, ಕರ್ನಾಟಕದಲ್ಲಿ ಹೈದರಾಬಾದ್ ವಿಮೋಚನೆಗಾಗಿ ಹೋರಾಡಿದವರನ್ನು ಕಾಂಗ್ರೆಸ್ ಮರೆತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಇಳಿದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಹೈದರಾಬಾದ್‌ನ 'ಕ್ರೂರ' ನಿಜಾಮ್ ಆಳ್ವಿಕೆಯಿಂದ ವಿಮೋಚನೆಗಾಗಿ ಹೋರಾಡಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದವರನ್ನು ಕಾಂಗ್ರೆಸ್ ಎಂದಿಗೂ ನೆನಪಿಸಿಕೊಳ್ಳುವುದಿಲ್ಲ ಎಂದು ಆರೋಪಿಸಿದ್ದಾರೆ. ಬೀದರ್ ಜಿಲ್ಲೆಯ ಗೊರಟಾ ಗ್ರಾಮದಲ್ಲಿ ಅಮಿತ್ ಶಾ ಮಾತನಾಡುತ್ತಿದ್ದರು.

ಗೋರಾಟ ಹುತಾತ್ಮರ ಸ್ಮಾರಕ ಮತ್ತು ದೇಶದ ಮೊದಲ ಗೃಹ ಸಚಿವ ದಿವಂಗತ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯನ್ನು ಉದ್ಘಾಟಿಸಿದ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಹೈದರಾಬಾದ್ ವಿಮೋಚನಾ ದಿನವನ್ನು ಆಚರಿಸಲು ಹಿಂದೇಟು ಹಾಕುತ್ತಿರುವ ಕೆ ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿದ್ದ ಗುಲಾಮತನದ ಸಂಕೇತ ಹೈದರಾಬಾದ್ ಕರ್ನಾಟಕದ ಹೆಸರನ್ನು ಬದಲಾಯಿಸಿ ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಿದ್ದರು. pic.twitter.com/c3SRvaBtGz
— Amit Shah (@AmitShah) March 26, 2023
"ದಕ್ಷಿಣ ಭಾರತದ ಜಲಿಯನ್ ವಾಲಾ ಬಾಗ್" ಎಂದು ಕರೆಯಲ್ಪಡುವ ಗೋರಾಟಾದಲ್ಲಿ 103 ಅಡಿ ಎತ್ತರದ ರಾಷ್ಟ್ರಧ್ವಜವನ್ನು ಅಮಿತ್ ಶಾ ಹಾರಿಸಿದ್ದಾರೆ. ಮೇ 9, 1948 ರಂದು ಗೋರಾಟನ ಭೀಕರತೆಯನ್ನು ನೆನಪಿಸಿಕೊಂಡ ಕೇಂದ್ರ ಸಚಿವರು, ದೇಶವು ಸ್ವತಂತ್ರಗೊಂಡಿದ್ದರೂ ಕ್ರೂರ ನಿಜಾಮರು 200 ಜನರನ್ನು ಕಗ್ಗೊಲೆ ಮಾಡಿದ್ದರು ಎಂದು ನೆನಪಿಸಿಕೊಂಡಿದ್ದಾರೆ.
ಎಂಟು ವರ್ಷಗಳ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ ಇಲ್ಲಿಗೆ ಭೇಟಿ ನೀಡಿ ಗೋರಟ ಹುತಾತ್ಮರ ಸ್ಮಾರಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದೆ. ನೂರಾರು ವರ್ಷಗಳ ಕಾಲ ದೇಶಾದ್ಯಂತ ಸ್ಮರಣೀಯ ಸ್ಮಾರಕ ನಿರ್ಮಿಸುವಂತೆ ಭಾರತೀಯ ಜನತಾ ಯುವಮೋರ್ಚಾ ಕಾರ್ಯಕರ್ತರಿಗೆ ನಿರ್ದೇಶನ ನೀಡಿದ್ದನ್ನು ಅಮಿತ್ ಶಾ ಈ ವೇಳೆ ಸ್ಮರಿಸಿದ್ದಾರೆ.

ಎಂಟು ವರ್ಷಗಳ ನಂತರ ಗೋರಟ ಹುತಾತ್ಮರ ಸ್ಮಾರಕ ಉದ್ಘಾಟನೆ ಮಾಡುವ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ ಎಮದ ಅವರು, "ಇಲ್ಲಿ 200 ಕ್ಕೂ ಹೆಚ್ಚು ಜನರನ್ನು ಕ್ರೂರ ನಿಜಾಮರು ಗೋರಟಾದಲ್ಲಿ ಕಗ್ಗೊಲೆ ಮಾಡಿದರು. ಆದರೆ ಕಾಂಗ್ರೆಸ್ ತನ್ನ ಮತ ಬ್ಯಾಂಕ್‌ಗಾಗಿ ದುರಾಸೆಗಾಗಿ ಹೈದರಾಬಾದ್ ವಿಮೋಚನೆಗಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದವರನ್ನು ಎಂದಿಗೂ ನೆನಪಿಸಿಕೊಳ್ಳಲಿಲ್ಲ. ಸರ್ದಾರ್ ಪಟೇಲ್ ಇಲ್ಲದಿದ್ದರೆ ಹೈದರಾಬಾದ್ ಉದ್ಧಾರವಾಗುತ್ತಿರಲಿಲ್ಲ" ಎಂದು ಹೇಳಿದ್ದಾರೆ.
ಈ ವೇಳೆ ತೆಲಂಗಾಣ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವರು, "ತೆಲಂಗಾಣ ಸರ್ಕಾರವು ಹೈದರಾಬಾದ್ ವಿಮೋಚನಾ ದಿನವನ್ನು (ಸೆಪ್ಟೆಂಬರ್ 17) ಆಚರಿಸಲು ಹಿಂದೇಟು ಹಾಕುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಈ ದಿನವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿದೆ. ಕಳೆದ ವರ್ಷ ತೆಲಂಗಾಣದಲ್ಲಿ ಬಿಜೆಪಿ ಈ ದಿನವನ್ನು ಆಚರಿಸಿದ್ದು, ಈ ವರ್ಷವೂ ಆಚರಿಸಲಿದೆ" ಎಂದು ತಿಳಿಸಿದರು.
ಬಿಜೆಪಿ ಸರ್ಕಾರ 50 ಕೋಟಿ ವೆಚ್ಚದಲ್ಲಿ ಗೊರಟಾದಲ್ಲಿ ಭವ್ಯ ಹುತಾತ್ಮರ ಸ್ಮಾರಕ ನಿರ್ಮಿಸಿದ್ದು, ಇದು ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಪ್ರವಾಸಿಗರನ್ನು ಆಕರ್ಷಿಸಿ ಗೋರಾಟದ ಜನರ ಕಥೆ ತಿಳಿಸಲಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಂದಿನ ಹೈದರಾಬಾದ್ ವಿಮೋಚನಾ ದಿನವನ್ನು ಗೊರಟಾದಲ್ಲಿ ಆಚರಿಸಲಿದೆ ಎಂದು ಹೇಳಿದ್ದಾರೆ.
"ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ಹಿಂದಿನ ಹೈದರಾಬಾದ್-ಕರ್ನಾಟಕ ಪ್ರದೇಶವನ್ನು ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಿದೆ. ಯಡಿಯೂರಪ್ಪ ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 3,000 ಕೋಟಿ ರೂ.ಗಳನ್ನು ನೀಡಿದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕ್ಷೇತ್ರಕ್ಕೆ 5,000 ರೂ. ಅನುದಾನ ನೀಡಿದೆ" ಎಂದಿದ್ದಾರೆ.
" ಹೈದರಾಬಾದ್ ನಿಜಾಮರು ಈ ಪ್ರದೇಶವನ್ನು ಆಳಿದ ಕಾರಣ ಇದನ್ನು ಹೈದರಾಬಾದ್-ಕರ್ನಾಟಕ ಪ್ರದೇಶ ಎಂದು ಕರೆಯಲಾಯಿತು. ಭಾರತದ ಗುಲಾಮಗಿರಿಯ ಚಿಹ್ನೆಗಳು ಇಲ್ಲಿ ಮುಂದುವರಿಯಲು ಕಾಂಗ್ರೆಸ್ ಅವಕಾಶ ಮಾಡಿಕೊಟ್ಟಿತು. ಆದರೆ ಯಡಿಯೂರಪ್ಪ ಅದನ್ನು ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಿದರು" ಎಂದು ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications