ಎನ್‌ಆರ್‌ಸಿ ಗೆ ಬೆಂಬಲ ಇಲ್ಲ ಎಂದ ನವೀನ್ ಪಟ್ನಾಯಕ್, ಬಿಜೆಪಿಗೆ ಆಘಾತ
ಭುವನೇಶ್ವರ್, ಡಿಸೆಂಬರ್ 18: ಎನ್‌ಆರ್‌ಸಿ ಗೆ ಬೆಂಬಲ ನೀಡುವುದಿಲ್ಲ ಎಂದು ಒಡಿಶಾ ಸಿಎಂ ನವೀನ್ ಪಟ್ನಾಯಕ್ ಇಂದು ಅಧಿಕೃತವಾಗಿ ಘೋಷಿಸಿದ್ದಾರೆ.
ಪೌರತ್ವ ಕಾಯ್ದೆಯನ್ನು ಬಿಜೆಪಿಯು ಲೋಕಸಭೆಯಲ್ಲಿ ಮಂಡಿಸಿದ್ದಾಗ ನವೀನ್ ಪಟ್ನಾಯಕ್ ಮುಖಂಡತ್ವದ ಬಿಜು ಜನತಾ ದಳದ ಸದಸ್ಯರು ಮಸೂದೆಗೆ ಬೆಂಬಲ ನೀಡಿದ್ದರು. ಆದರೆ ಈಗ ನವೀನ್ ಪಟ್ನಾಯಕ್ ಎನ್‌ಆರ್‌ಸಿ ಗೆ ಬೆಂಬಲ ನೀಡುವುದಿಲ್ಲ ಎನ್ನುವ ಮೂಲಕ ಬಿಜೆಪಿಗೆ ಆಘಾತ ಮೂಡಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ನವೀನ್ ಪಟ್ನಾಯಕ್ ಅವರು, 'ನಮ್ಮ ಸಂಸದರು ಸಿಎಬಿ ಗೆ ಬೆಂಬಲ ನೀಡಿದ್ದರು. ಪೌರತ್ವ ಕಾಯ್ದೆಯು ವಿದೇಶಿಗರ ಮೇಲೆ ಪರಿಣಾಮ ಬೀರುತ್ತದೆ, ಭಾರತದವರ ಮೇಲೆ ಅಲ್ಲ, ಆದರೆ ನಾವು ಎನ್‌ಆರ್‌ಸಿ ಯನ್ನು ಬೆಂಬಲಿಸುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

ಒಡಿಶಾ ರಾಜ್ಯದಲ್ಲಿ ಸಹ ಎನ್‌ಆರ್‌ಸಿ ಮತ್ತು ಪೌರತ್ವ ಕಾಯ್ದೆಯ ವಿರುದ್ಧ ಸತತ ಪ್ರತಿಭಟನೆಗಳು ನಡೆಯುತ್ತಿದ್ದವು. ಹಾಗಾಗಿ ನವೀನ್ ಪಟ್ನಾಯಕ್ ಅವರು ಈ ನಿರ್ಧಾರ ತಳೆದಿದ್ದಾರೆ.
ಪಟ್ನಾಯಕ್ ಅವರ ಬಿಜೆಡಿ ಯು ಬಿಜೆಪಿ ನೇತೃತ್ವದ ಎನ್‌ಡಿಎ ಗುಂಪಿನಲ್ಲಿತ್ತು. ಆದರೆ ನಂತರ ಅದರಿಂದ ಹೊರಬಂದಿತ್ತಾದರೂ, ಲೋಕಸಭೆಯಲ್ಲಿ ಬಿಜೆಪಿ ಗೆ ಬೆಂಬಲ ಸೂಚಿಸುತ್ತಲೇ ಬಂದಿತ್ತು. ಆದರೆ ಈಗ ಏಕಾ-ಏಕಿ ಬಿಜೆಪಿ ಯ ಮಹಾತ್ವಾಕಾಂಕ್ಷೆಯ ಎನ್‌ಆರ್‌ಸಿ ವಿರುದ್ಧ ನಿಂತಿರುವುದು ಬಿಜೆಪಿ ಗೆ ಆಘಾತ ತಂದಿದೆ.
ದೇಶದ ನಾಗರೀಕರನ್ನು ಪತ್ತೆ ಹಚ್ಚಲು ರಾಷ್ಟ್ರೀಯ ನಾಗರೀಕ ನೊಂದಣಿ (ಎನ್‌ಆರ್‌ಸಿ) ಯನ್ನು ಕೇಂದ್ರ ಸರ್ಕಾರ ಜಾರಿಗೆ ನಿಶ್ಚಯಿಸಿದೆ. ಆದರೆ ಇದರ ವಿರುದ್ಧ ತೀವ್ರ ಅಸಮಾಧಾನ ಕೇಳಿಬರುತ್ತಿದೆ.












Click it and Unblock the Notifications