ಕಳ್ಳನ ಮೊಬೈಲ್ ನಲ್ಲಿ ಗ್ಯಾಂಗ್ ರೇಪ್ ವಿಡಿಯೋ; ಸಿಕ್ಕಿಬಿದ್ದ ನಾಲ್ವರು
ಭೋಪಾಲ್, ಜನವರಿ 08: ಕಳ್ಳತನದ ಆರೋಪದ ಮೇಲೆ ಬಂಧಿತನಾಗಿದ್ದ ವ್ಯಕ್ತಿಯಿಂದ ಮೊಬೈಲ್ ವಶಪಡಿಸಿಕೊಂಡ ಪೊಲೀಸರಿಗೆ ಮತ್ತೊಂದು ಶಾಕ್ ಕಾದಿತ್ತು. ಆ ಮೊಬೈಲ್ ನಲ್ಲಿ ಗ್ಯಾಂಗ್ ರೇಪ್ ವಿಡಿಯೋ ಕಂಡುಬಂದಿದ್ದು, ಮತ್ತೊಂದು ಪ್ರಕರಣ ದಾಖಲಿಸಿದ ಪೊಲೀಸರು ನಾಲ್ಕು ಆರೋಪಿಗಳನ್ನು ಬಂಧಿಸಿದ್ದಾರೆ.
ಭೋಪಾಲ್ ನಿಂದ 186 ಕಿ.ಮೀ ದೂರದ ಸಾಗರ ಜಿಲ್ಲೆಯಲ್ಲಿ ಜನವರಿ 1ರಂದು ಈ ಘಟನೆ ನಡೆದಿದೆ. ತನ್ನ ಸೋದರ ಮಾವನೊಂದಿಗೆ ಯುವತಿಯು ಅಮ್ಜಿರಾದಲ್ಲಿ ಪಿಕ್ ನಿಕ್ ಹೋಗಿದ್ದು, ದೇವಸ್ಥಾನದಿಂದ ಹಿಂದಿರುಗುವ ಸಂದರ್ಭ ದುಷ್ಕರ್ಮಿಗಳು ದಾಳಿ ಮಾಡಿ, ಯುವಕನನ್ನು ಥಳಿಸಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.
ಜನವರಿ 2ರಂದು 18 ವರ್ಷದ ಆ ಯುವತಿಯು ತನ್ನ ಬೆಳ್ಳಿ ಆಭರಣಗಳು, ನಗದು, ತನ್ನ ಹಾಗೂ ತನ್ನ ಸಹಚರನ ಮೊಬೈಲ್ ಕಳುವಾಗಿರುವುದಾಗಿ ದೂರು ನೀಡಿದ್ದಾಳೆ. ಆದರೆ ತನ್ನ ಮೇಲೆ ಅತ್ಯಾಚಾರ ನಡೆದ ವಿಷಯವನ್ನು ಆಕೆ ಬಾಯಿ ಬಿಟ್ಟಿಲ್ಲ. 394 ಹಾಗೂ 34 ಸೆಕ್ಷನ್ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದರು.

ಆನಂತರ ಪ್ರಕರಣದಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಅವರ ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಮೊಬೈಲ್ ಪರಿಶೀಲಿಸುವ ವೇಳೆ ಸಾಮೂಹಿಕ ಅತ್ಯಾಚಾರ ನಡೆಸಿರುವ ವಿಡಿಯೋ ಕಂಡುಬಂದಿದ್ದು, ಆನಂತರ ಈ ಆರೋಪಿಗಳೊಂದಿಗೆ ಇನ್ನೂ ಇಬ್ಬರನ್ನು ಬಂಧಿಸಿದ್ದಾರೆ. ಯುವತಿಯು ಸಾಮಾಜಿಕ ಕಳಂಕದ ಕಾರಣದಿಂದಾಗಿ ತನ್ನ ಮೇಲೆ ಅತ್ಯಾಚಾರ ನಡೆಸಿದ ಸಂಗತಿಯನ್ನು ಪೊಲೀಸರಿಂದ ಮುಚ್ಚಿಟ್ಟಿದ್ದಾಗಿ ತಿಳಿಸಿದ್ದಾರೆ.












Click it and Unblock the Notifications