ನಾಥೂರಾಮ್ ಗೋಡ್ಸೆ ಬಗೆಗಿನ ಹೇಳಿಕೆ ತಿದ್ದಿಕೊಂಡ ಸಾದ್ವಿ ಪ್ರಜ್ಞಾ
ಭೋಪಾಲ್, ಮೇ 16: ಮಹಾತ್ಮಾ ಗಾಂಧಿ ಅವರನ್ನು ಕೊಂದ ನಾಥೂರಾಮ್ ಗೋಡ್ಸೆ ಒಬ್ಬ ದೇಶಭಕ್ತ ಎಂದು ಹೇಳಿದ್ದ ಬಿಜೆಪಿ ಮುಖಂಡೆ ಸಾದ್ವಿ ಪ್ರಜ್ಞಾ ಠಾಕೂರ್ ಅವರು ತಮ್ಮ ಹೇಳಿಕೆಯನ್ನು ತಿದ್ದಿಕೊಂಡಿದ್ದಾರೆ.
ಸಾದ್ವಿ ಪ್ರಜ್ಞಾ ಠಾಕೂರ್ ಅವರ ಹೇಳಿಕೆಯನ್ನು ಸ್ವತಃ ಬಿಜೆಪಿ ಖಂಡಿಸಿತ್ತು, ಅಲ್ಲದೆ ಸಾರ್ವಜನಿಕವಾಗಿ ಕ್ಷಮೆ ಕೇಳುವಂತೆ ಸೂಚನೆ ನೀಡಿತ್ತು.
ಹಾಗಾಗಿ ಸಂಜೆ ವೇಳೆಗೆ ತಮ್ಮ ಹೇಳಿಕೆಯನ್ನು ತಿದ್ದಿಕೊಂಡಿರುವ ಸಾದ್ವಿ ಪ್ರಜ್ಞಾ ಠಾಕೂರ್, ನಾನು ಬಿಜೆಪಿಯ ಕಾರ್ಯಕರ್ತೆ, ಬಿಜೆಪಿಯ ವಿಚಾರಗಳಲ್ಲಿ ನಂಬಿಕೆ ಇಟ್ಟಿದ್ದೇನೆ, ಬಿಜೆಪಿಯ ಅಭಿಪ್ರಾಯವೇ ನನ್ನ ಅಭಿಪ್ರಾಯವೂ ಆಗಿದೆ ಎಂದು ಒಲ್ಲದ ಮನಸ್ಸಿನಿಂದಲೇ ತಮ್ಮ ಹೇಳಿಕೆಯನ್ನು ಬದಲಾಯಿಸಿಕೊಂಡಿದ್ದಾರೆ.

ಸುದ್ದಿ ಸಂಸ್ಥೆಯೊಂದಕ್ಕೆ ಈ ಬಗ್ಗೆ ಪ್ರಜ್ಞಾ ಠಾಕೂರ್ ಅವರು ಹೇಳಿಕೆ ನೀಡಿದ್ದು, ಯಾವುದೇ ಕ್ಷಮಾಪಣೆ ಕೋರುವುದಾಗಿ, ವಿಷಾದ ವ್ಯಕ್ತಪಡಿಸುವುದಾಗಲಿ ಮಾಡಿಲ್ಲ, ಅಲ್ಲದೆ ಅವರ ಮುಖಚರ್ಯೆಯೂ ಸಹ ಒಲ್ಲದ ಮನಸ್ಸಿನಿಂದಲೇ ಹೇಳಿಕೆಯನ್ನು ಬದಲಾಯಿಸಿಕೊಂಡತೆ ತೋರುತ್ತಿದೆ.
ತಮಿಳು ನಟ ಕಮಲ್ ಹಸನ್ ಅವರು ಇತ್ತೀಚೆಗೆ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ, ಮಹಾತ್ಮಾ ಗಾಂಧಿಯನ್ನು ಕೊಂದ ನಾಥೂರಾಮ್ ಗೂಡ್ಸೆ, ಸ್ವತಂತ್ರ್ಯ ಭಾರತದ ಮೊದಲ ಹಿಂದೂ ಭಯೋತ್ಪಾದಕ ಎಂದಿದ್ದರು, ಇದನ್ನು ಖಂಡಿಸಿದ್ದ ಸಾದ್ವಿ ಪ್ರಜ್ಞಾ ಠಾಕೂರ್ ಅವರು ನಾಥೂರಾಮ್ ಒಬ್ಬ ದೇಶಭಕ್ತ ಆಗಿದ್ದರು ಎಂದು ಅವರ ಪರವಾಗಿ ಹೇಳಿಕೆ ನೀಡಿದ್ದರು.












Click it and Unblock the Notifications