750 ಕೋಟಿ ವೆಚ್ಚದಲ್ಲಿ ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಅಭಿವೃದ್ಧಿ
ಭೋಪಾಲ್, ಸೆ.20: ಉಜ್ಜಯಿನಿಯಲ್ಲಿ ಹೊಸದಾಗಿ ನಿರ್ಮಿಸಲಾದ ಮಹಾಕಾಳೇಶ್ವರ ದೇವಾಲಯದ ಕಾರಿಡಾರ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 11 ರಂದು ಉದ್ಘಾಟಿಸಲಿದ್ದಾರೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಯೋಜನೆಯನ್ನು ಪರಿಶೀಲಿಸಲು ಉಜ್ಜಯಿನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಈ ವಿಷಯ ತಿಳಿಸಿದ್ದಾರೆ. "ಉಜ್ಜಯಿನಿ ಮಹಾಕಾಲ್ ಕಾರಿಡಾರ್‌ನ ಮೊದಲ ಹಂತದ ಮಹತ್ವಾಕಾಂಕ್ಷೆಯ ಯೋಜನೆಯು ಮುಕ್ತಾಯದ ಹಂತದಲ್ಲಿದೆ. ಪ್ರಧಾನಿ ಮೋದಿ ಅವರು ಉಜ್ಜಯಿನಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಬರುತ್ತಾರೆ. ಅಕ್ಟೋಬರ್ 11 ರಂದು ಯೋಜನೆಯನ್ನು ಉದ್ಘಾಟಿಸಲಿದ್ದಾರೆ" ಎಂದಿದ್ದಾರೆ.

ಎರಡು ಹಂತದ ಮಹಾಕಾಲ್ ಕಾರಿಡಾರ್ ಯೋಜನೆ
ಉಜ್ಜಯಿನಿ ಮಹಾಕಾಲ್ ಕಾರಿಡಾರ್ ಯೋಜನೆಯನ್ನು ಎರಡು ಹಂತಗಳಾಗಿ ವಿಂಗಡಿಸಲಾಗಿದೆ, ಇದರಲ್ಲಿ ದೇವಾಲಯದ ಸಂಕೀರ್ಣವನ್ನು ಆಗಸ್ಟ್ 2023 ರ ವೇಳೆಗೆ 2.82 ಹೆಕ್ಟೇರ್‌ಗಳಿಂದ 20.23 ಹೆಕ್ಟೇರ್‌ಗಳಿಗೆ ವಿಸ್ತರಿಸಲಾಗುವುದು. ಪ್ರಸ್ತುತ ಗಾತ್ರದ ಸುಮಾರು ಎಂಟು ಪಟ್ಟು ವಿಸ್ತಾರವಾಗಲಿದೆ.
ಮೊದಲ ಹಂತದ ಕಾಮಗಾರಿಯು 900-ಮೀಟರ್ ಉದ್ದದ ಕಾರಿಡಾರ್ ಅನ್ನು ಹೊಂದಿದೆ. ಥೀಮ್ ಪಾರ್ಕ್, ಹೆರಿಟೇಜ್ ಮಾಲ್, ಇ-ಸಾರಿಗೆ ಸೌಲಭ್ಯಗಳು ಇತ್ಯಾದಿ ಇದರಲ್ಲಿ ಸೇರಿವೆ.

2028ರ ವೇಳೆಗೆ ಕಾಮಗಾರಿ ಪೂರ್ಣ!
ಎರಡನೇ ಹಂತದಲ್ಲಿ ಮಹಾರಾಜವಾಡ ಶಾಲಾ ಭವನವನ್ನು ಪಾರಂಪರಿಕ ಧರ್ಮಶಾಲೆಯನ್ನಾಗಿ ಪರಿವರ್ತಿಸಲು ಸರ್ಕಾರ ಯೋಜಿಸಿದೆ. ಸುಮಾರು 4.5 ಕೋಟಿ ವೆಚ್ಚದಲ್ಲಿ ಧರ್ಮಶಾಲೆ ನಿರ್ಮಾಣವಾಗಲಿದೆ. ಜೊತೆಗೆ ರುದ್ರ ಸಾಗರ ಮತ್ತು ಶಿಪ್ರಾ ನದಿ ಜೋಡಣೆ, ಮುಂಭಾಗದ ಕೆರೆಯ ಸೌಂದರ್ಯೀಕರಣ, 350 ಕಾರುಗಳಿಗೆ ಸ್ಥಳಾವಕಾಶದೊಂದಿಗೆ ಮಲ್ಟಿ ಲೆವೆಲ್ ಪಾರ್ಕಿಂಗ್ ನಿರ್ಮಾಣ , ರೈಲ್ವೆ ಕೆಳಸೇತುವೆ ಮತ್ತು ರುದ್ರ ಸಾಗರದ ಮೇಲೆ 210 ಮೀಟರ್ ತೂಗು ಸೇತುವೆಯ ಅಭಿವೃದ್ಧಿ, ಇತರ ಕಾರ್ಯಗಳನ್ನು ಕೈಗೊಳ್ಳಲಾಗುವುದು.
ಇದಲ್ಲದೆ, ರಾಮ್ ಘಾಟ್ ಬಳಿ ಡೈನಾಮಿಕ್ ಲೈಟ್ ಶೋಗೆ ಸ್ಥಳವನ್ನು ನೀಡಲಾಗುವುದು. ರಾಜ್ಯ ಸರ್ಕಾರದ ಪ್ರಕಾರ 2028ರ ವೇಳೆಗೆ ಈ ಎಲ್ಲಾ ಕಾಮಗಾರಿ ಪೂರ್ಣಗೊಳ್ಳಲಿದೆ.

750 ಕೋಟಿ ವೆಚ್ಚದಲ್ಲಿ ದೇವಸ್ಥಾನ ವಿಸ್ತರಣೆ ಮಾಡಲಾಗಿದೆ
ಸುಮಾರು 750 ಕೋಟಿ ವೆಚ್ಚದಲ್ಲಿ ಮಹಾಕಾಲ್ ದೇವಸ್ಥಾನ ವಿಸ್ತರಣೆ ಯೋಜನೆಯ ಕಾಮಗಾರಿ ನಡೆದಿದೆ. ಇದರ ಅಡಿಯಲ್ಲಿ ಮಹಾಕಾಲ್ ಪಥ, ರುದ್ರ ಸಾಗರದ ಸೌಂದರ್ಯೀಕರಣ, ವಿಶ್ರಮಧಾಮ ಮೊದಲಾದ ಕಾಮಗಾರಿಗಳು ಮೊದಲ ಹಂತದಲ್ಲಿ ಪೂರ್ಣಗೊಂಡಿವೆ. ವಿಸ್ತರಣಾ ಕಾರ್ಯಗಳ ನಡುವೆ ಇತ್ತೀಚೆಗೆ ಮಹಾಕಲ್ ಪಥವನ್ನು ಭಕ್ತರಿಗಾಗಿ ತೆರೆಯಲಾಯಿತು.
ತ್ರಿವೇಣಿ ಸಂಗ್ರಹಾಲಯದ ಬಳಿ ಮಹಾಕಾಲ್ ಪಥದ ದೊಡ್ಡ ದ್ವಾರವನ್ನು ನಿರ್ಮಿಸಲಾಗಿದೆ. ಮಹಾಕಾಳೇಶ್ವರ ದೇವಸ್ಥಾನದ ಸಂಕೀರ್ಣದಲ್ಲಿ 9 ವಿವಿಧ ದ್ವಾರಗಳಿವೆ. ಮಹಾಕಾಲ್ ದೇವಸ್ಥಾನದ ಮುಂಭಾಗದ ರಸ್ತೆ 70 ಮೀಟರ್ ವಿಸ್ತರಿಸಲಾಗಿದೆ. ಮಹಾಕಾಲ್ ದೇವಸ್ಥಾನ ಚೌಕದವರೆಗಿನ ರಸ್ತೆಯನ್ನು 24 ಮೀಟರ್‌ಗಳಷ್ಟು ವಿಸ್ತರಿಸಲಾಗುವುದು.
ಭಾರತದ ಅತ್ಯಂತ ತಾಂತ್ರಿಕವಾಗಿ ಮುಂದುವರಿದ ಧಾರ್ಮಿಕ ಸ್ಥಳವಾಗಿ ರೂಪಾಂತರಗೊಳಿಸುವ ಪ್ರಚಾರ ಮಾಡಲಾಗಿದ್ದು, ಉಜ್ಜಯಿನಿ ಮಹಾಕಾಲ್ ದೇವಾಲಯ ಕಾರಿಡಾರ್ ಅನ್ನು ವಿಸ್ತರಿಸಲು ಸರ್ಕಾರ ಯೋಜಿಸಿದೆ. ಉಜ್ಜಯಿನಿಯನ್ನು 'ಸ್ಮಾರ್ಟ್ ಸಿಟಿ' ಆಗಿ ಪರಿವರ್ತಿಸುವ ಸರ್ಕಾರದ ಯೋಜನೆಯ ಅಡಿಯಲ್ಲಿ ಈ ಸ್ಮಾರಕ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

81 ಕೋಟಿ ದೇಣಿಗೆ ಸಂಗ್ರಹಿಸಿರುವ ಮಹಾಕಾಳೇಶ್ವರ ದೇವಸ್ಥಾನ
ಉಜ್ಜಯಿನಿಯಲ್ಲಿರುವ ಪ್ರಸಿದ್ಧ ಮಹಾಕಾಳೇಶ್ವರ ದೇವಸ್ಥಾನವು ಸೆಪ್ಟೆಂಬರ್ 1, 2021 ಮತ್ತು ಈ ವರ್ಷದ ಸೆಪ್ಟೆಂಬರ್ 15 ರ ನಡುವೆ ಭಕ್ತರಿಂದ ದೇಣಿಗೆ ಮತ್ತು ಇತರ ವಹಿವಾಟುಗಳಿಂದ ದಾಖಲೆಯ 81 ಕೋಟಿ ರೂಪಾಯಿ ಸಂಗ್ರಹಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದು ಸಾರ್ವಕಾಲಿಕ ಅತ್ಯಧಿಕ ದಾಖಲೆಯಾಗಿದೆ. ದೇಣಿಗೆಯು ಲಾಡುಗಳ ಮಾರಾಟ, ಚಿನ್ನ, ಬೆಳ್ಳಿ ಮತ್ತು ಬಾಡಿಗೆಗಳನ್ನು ಒಳಗೊಂಡಿದೆ ಎಂದು ಮಹಾಕಾಳೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಗಣೇಶ್ ಧಕಡ್ ಹೇಳಿದ್ದಾರೆ.
''2016-17ನೇ ಸಾಲಿನಲ್ಲಿ ಇದೇ ಅವಧಿಯಲ್ಲಿ 28 ಕೋಟಿ ರೂ, 2017-18 ರಲ್ಲಿ 37 ಕೋಟಿ ರೂಪಾಯಿ ಹಾಗೂ 2020-21ರಲ್ಲಿ 40 ಕೋಟಿ ರೂಪಾಯಿ ಆದಾಯ ಬಂದಿದೆ. ದೇವಸ್ಥಾನದ ಆಡಳಿತ ಮಂಡಳಿ ಉತ್ತಮ ಸೌಕರ್ಯ ವ್ಯವಸ್ಥೆ, ಕ್ಷಿಪ್ರ ದರ್ಶನ ಒದಗಿಸಿದ್ದರಿಂದ ಭಕ್ತರ ಸಂಖ್ಯೆ ಹೆಚ್ಚುತ್ತದೆ" ಎಂದು ಆಡಳಿತಾಧಿಕಾರಿ ಹೇಳಿದ್ದಾರೆ.
ಡಿಸೆಂಬರ್ 12 ರಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕನಸಿನ ಯೋಜನೆಯಾದ ಕಾಶಿ ವಿಶ್ವನಾಥ ಕಾರಿಡಾರ್ ಅನ್ನು ತಮ್ಮ ಸಂಸದೀಯ ಕ್ಷೇತ್ರವಾದ ವಾರಣಾಸಿಯಲ್ಲಿ ಉದ್ಘಾಟಿಸಿದ್ದರು.












Click it and Unblock the Notifications