ಬಹುಕಾಲ ನೆನಪಿನಲ್ಲುಳಿಯುವ ಮಧ್ಯ ಪ್ರದೇಶ ಜಿದ್ದಾಜಿದ್ದಿ ಫೈಟ್!
ಭೋಪಾಲ್, ಡಿಸೆಂಬರ್ 11 : ಇನ್ನೇನು ಕಾಂಗ್ರೆಸ್ ಸರಳ ಬಹುಮತ ಪಡೆದು ಕಮಲ್ ನಾಥ್ ಅವರನ್ನು ಮುಖ್ಯಮಂತ್ರಿಯಾಗಿ ಘೋಷಿಸಿಬಿಡಬೇಕು ಎನ್ನುವಷ್ಟರಲ್ಲಿ ಮಧ್ಯ ಪ್ರದೇಶದಲ್ಲಿ ಚಿತ್ರಣ ಸ್ವಲ್ಪ ತಿರುವುಮುರುವಾಗಿದ್ದು, ಭಾರತೀಯ ಜನತಾ ಪಕ್ಷ ಇದ್ದಕ್ಕಿದ್ದಂತೆ ಮುನ್ನಡೆ ಪಡೆದುಕೊಂಡಿದೆ.
ಇದೇ ಟ್ರೆಂಡ್ ಅಂತಿಮ ಫಲಿತಾಂಶ ಬರುವವರೆಗೆ ಮುಂದುವರೆದರೆ, ಮಧ್ಯ ಪ್ರದೇಶದಲ್ಲಿ ವಿಧಾನಸಭೆ ಅತಂತ್ರವಾಗಲಿರುವುದು ನಿಶ್ಚಿತ. ಒಂದು ಕ್ಷಣ ಅದೃಷ್ಟ ಲಕ್ಷ್ಮಿ ಕಾಂಗ್ರೆಸ್ ಪರವಾಗಿದ್ದರೆ, ಮತ್ತೊಂದು ಘಳಿಗೆಯಲ್ಲಿ ಬಿಜೆಪಿ ಕಡೆ ಒಲಿಯುತ್ತಿದೆ. ಯಾವುದೇ ಪಕ್ಷಕ್ಕೆ ಬಹುಮತ ಸಾಬೀತುಪಡಿಸಲು ಬೇಕಿರುವ ಮ್ಯಾಜಿಕ್ ನಂಬರ್ 116.
ಬಹುಶಃ ಭಾರತದ ಚುನಾವಣಾ ಇತಿಹಾಸದಲ್ಲಿ ಇಷ್ಟು ತುರುಸಿನಿಂದ ಎರಡೂ ಪಕ್ಷಗಳ ನಡುವೆ ಜಿದ್ದಾಜಿದ್ದಿ ಸ್ಪರ್ಧೆ ನಡೆದಿದ್ದೇ ಇಲ್ಲ. ಇದೀಗ ಫಲಿತಾಂಶ ರೋಚಕ ಹಂತಕ್ಕೆ ತಲುಪಿದ್ದು, ಯಾರು ಗೆಲ್ಲುತ್ತಾರೋ ಅವರೇ ಸಿಕಂದರ್ ಆಗಲಿದ್ದಾರೆ, ಇತಿಹಾಸವನ್ನೂ ನಿರ್ಮಿಸಲಿದ್ದಾರೆ.

ಈ ಮ್ಯಾಜಿಕ್ ನಂಬರ್ ಕಾಂಗ್ರೆಸ್ ಅಥವಾ ಬಿಜೆಪಿಗೆ ಸಿಗುವುದು ಅನುಮಾನವಾಗಿ ಕಾಣಿಸುತ್ತಿದೆ. ಏಕೆಂದರೆ, ಎರಡೂ ಬದ್ಧ ವೈರಿಗಳ ನಡುವಿನ ಚುನಾವಣಾ ಕಾದಾಟ ಅಷ್ಟು ತುರುಸಿನಿಂದ ಕೂಡಿದೆ. ಒಂದು ಕ್ಷಣ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದರೆ, ಮತ್ತೊಂದು ಕ್ಷಣ ಬಿಜೆಪಿ ಮುಂದೆ ಸಾಗುತ್ತಿದೆ.
ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷಕ್ಕೂ ಇದೇ ರೀತಿಯಾಗಿತ್ತು. ಒಂದು ಹಂತದಲ್ಲಿ 118ಕ್ಕೂ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ, ನೋಡ ನೋಡುತ್ತಿದ್ದಂತೆ ಇಳಿಕೆ ಕಂಡು, ಅಂತಿಮ ಫಲಿತಾಂಶ ಪ್ರಕಟವಾದಾಗ 104 ಸ್ಥಾನ ಪಡೆದು ಕರ್ನಾಟಕ ವಿಧಾನಸಭೆ ಅತಂತ್ರವಾಯಿತು. ಮುಂದೆ ನಡೆದಿದ್ದು ಇತಿಹಾಸ. ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಬೇಕೆಂದು ಕಾಂಗ್ರೆಸ್ ಪಕ್ಷ ಜೆಡಿಎಸ್ ಗೆ ಬೆಂಬಲ ಸೂಚಿಸಿ, ಅತೀ ಕಡಿಮೆ ಸ್ಥಾನ ಗೆದ್ದ ಪಕ್ಷದ ನಾಯಕ ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವಂತಾಯಿತು.
ಆದರೆ, ಮಧ್ಯ ಪ್ರದೇಶದಲ್ಲಿ ಪರಿಸ್ಥಿತಿ ತುಸು ವಿಭಿನ್ನವಾಗಿದೆ. ಕರ್ನಾಟಕದಲ್ಲಿ ಮೂರನೇ ಪಕ್ಷವಾಗಿ ಜಾಜ್ಯತೀತ ಜನತಾದಳವಾದರೂ ಇತ್ತು, ಮಧ್ಯ ಪ್ರದೇಶದಲ್ಲಿ ಮೂರನೇ ಪಕ್ಷವೇ ಇಲ್ಲ, ಇದ್ದರೂ ಅಪ್ರಸ್ತುತ. ಆದರೆ, ಕೇವಲ 4 ಸ್ಥಾನಗಳನ್ನು ಗೆಲ್ಲಲಿರುವ ಬಹುಜನ ಸಮಾಜ ಪಕ್ಷವನ್ನು ಕಡೆಗಣಿಸುವಂತೆಯೇ ಇಲ್ಲ. ಭಾರೀ ಮಹತ್ವಾಕಾಂಕ್ಷೆಯ ರಾಜಕಾರಣಿ ಮಾಯಾವತಿ ಏನೇನು ರಾಜಕೀಯ ಆಟವಾಡುತ್ತಾರೋ, ಅದರ ಮೇಲೆ ಮುಂದಿನ ಸರಕಾರ ಯಾವುದಿರುತ್ತದೆ ಎಂಬುದು ನಿರ್ಧಾರವಾಗುತ್ತದೆ.












Click it and Unblock the Notifications