ಕಾಂಗ್ರೆಸ್ ಸೋಲಿಗೆ ನಾನೇ ಹೊಣೆ ಎಂದ ಕಮಲ್ ನಾಥ್ ಮಾತಿನರ್ಥವೇನು?
ಭೋಪಾಲ್, ಜೂನ್ 28: "ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ನ ಹೀನಾಯ ಪ್ರದರ್ಶನಕ್ಕೆ ನಾನೇ ಹೊಣೆ" ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಹೇಳಿರುವುದು ಅಚ್ಚರಿ ಸೃಷ್ಟಿಸಿದೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಕಮಲ್ ನಾಥ್ ಅವರ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿರುವುದಕ್ಕೆ ಅವರ ವ್ಯಂಗ್ಯ ಮಿಶ್ರಿತ ಈ ಮಾತು ಪುಷ್ಠಿ ನೀಡಿದೆ.
"ಲೋಕಸಭೆ ಚುನಾವಣೆಯಲ್ಲಿ ಮಧ್ಯಪ್ರದೇಶದ 29 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕೇವಲ 1(ಬಿಜೆಪಿ-28) ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿದ್ದಕ್ಕೆ ನನ್ನನ್ನು ರಾಜೀನಾಮೆ ನೀಡುವಂತೆ ಕೇಳಿದ್ದರು. ಸೋಲಿಗೆ ನಾನೇ ಹೊಣೆ ಎಂದು ಕೆಲವರು ಹೇಳಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸೋಲಿಗೆ ಯಾರು ಕಾರಣ ಎಂಬುದು ನನಗೆ ಗೊತ್ತಿಲ್ಲ, ಆದರೆ ನನ್ನ ರಾಜೀನಾಮೆಯನ್ನು ಕೇಳಲಾಯ್ತು" ಎಂದು ಕಮಲ್ ನಾಥ್ ಹೇಳಿದ್ದಾರೆ.

"ನನಗೂ ವೈಯಕ್ತಿಕವಾಗಿ ಹಾಗೆಯೇ ಅನ್ನಿಸುತ್ತಿದೆ, ಪಕ್ಷದ ಸೋಲಿಗೆ ನಾನೇ ಜವಾಬ್ದಾರ" ಎಂದು ಕಮಲ್ ಹೇಳಿದರು.
2018 ರಲ್ಲಿ ಮಧ್ಯಪ್ರದೇಶದ ಕಾಂಗ್ರೆಸ್ ಅಧ್ಯಕ್ಷರಾದ ಕಮಲ್ ನಾಥ್ ಅವರನ್ನು ನಂತರ ನಡೆದ ಚುನಾವಣೆಯಲ್ಲಿ ಮುಖ್ಯಮಂತ್ರಿಯನ್ನಾಗಿ ಆರಿಸಲಾಗಿತ್ತು. ಆದರೆ ಪಕ್ಷದ ಸೋಲಿನ ನಂತರ ಈ ಸೋಲಿಗೆ ಅವರೇ ಹೊಣೆ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿ ಅವರೂ ದೂರಿದ್ದರು. ಕಮಲ್ ನಾಥ್ ಅವರ ಪುತ್ರ ನಕುಲ್ ನಾಥ್ ಅವರೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರಿಂದ ಅವರ ಗೆಲುವಿನ ಕಡೆ ಗಮನ ಹರಿಸಿದ್ದ ಕಮಲ್ ನಾಥ್ ಬೇರೆಲ್ಲ ಕ್ಷೇತ್ರಗಳನ್ನೂ ಅಲಕ್ಷ್ಯಿಸಿದರು ಎಂಬ ಆರೋಪವಿತ್ತು. ಅದಕ್ಕೆ ಸರಿಯಾಗಿ ನಕುಲ್ ನಾಥ್ ಮಾತ್ರವೇ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.












Click it and Unblock the Notifications