ಲಂಚ ಕೇಳಿದ ತಹಶೀಲ್ದಾರ್ ಕಾರಿಗೆ ಎಮ್ಮೆ ತಂದು ಕಟ್ಟಿದ ರೈತ
ಭೋಪಾಲ್ (ಮಧ್ಯಪ್ರದೇಶ), ಸೆಪ್ಟೆಂಬರ್ 13: ಕೆಲಸವೊಂದನ್ನು ಮಾಡಿಕೊಡುವುದಕ್ಕೆ ಲಂಚ ಕೇಳಿದ ತಹಶೀಲ್ದಾರ್ ವರ್ತನೆಗೆ ಬೇಸತ್ತ ವ್ಯಕ್ತಿಯೊಬ್ಬರು ಎಂಥ ನಿರ್ಧಾರ ಮಾಡಿದ್ದಾರೆ ಗೊತ್ತಾ? ಈಗ ಆ ಮೂಲಕ ಭೂಪೇಂದ್ರ ಸಿಂಗ್ ಕೂಡ ಸುದ್ದಿ ಆಗಿದ್ದಾರೆ. ವಿದಿಶಾದ ಸಿರೋಂಜ್ ಜಿಲ್ಲೆಯ ಭೂಪೇಂದ್ರ ಸಿಂಗ್ ಹತ್ತಿರ ತಹಶೀಲ್ದಾರ್ ಕೇಳಿದ ಇಪ್ಪತ್ತೈದು ಸಾವಿರ ರುಪಾಯಿ ಲಂಚ ನೀಡಲು ಆಗುತ್ತಿರಲಿಲ್ಲ.
ಕೊನೆಗೆ ತನ್ನ ಎಮ್ಮೆಯನ್ನು ತಂದು, ತಹಶೀಲ್ದಾರ್ ರ ಅಧಿಕೃತ ಕಾರಿಗೆ ಕಟ್ಟಿಹಾಕಿ ಬಿಟ್ಟಿದ್ದಾರೆ ಸಿಂಗ್. ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿರುವ ಅವರು, ನನ್ನ ಕುಟುಂಬದ ಭೂ ದಾಖಲೆಗಳನ್ನು ಸರಿಪಡಿಸಲು ಆರು ತಿಂಗಳಿಂದ ತಹಶೀಲ್ದಾರ್ ಹಿಂದೆ ಸುತ್ತಾಡುತ್ತಲೇ ಇದ್ದೀನಿ. ಆದರೆ ಹಣ ಕೊಡುವ ತನಕ ನನ್ನ ಕೆಲಸ ಮಾಡುವುದಿಲ್ಲ ಎಂದುಬಿಟ್ಟರು. ನನ್ನ ಹತ್ತಿರ ಹಣ ಇಲ್ಲ ಮತ್ತು ನನ್ನ ಬಳಿ ಇರೋ ಬೆಲೆ ಬಾಳುವ ಎಮ್ಮೆಯನ್ನು ತಂದು ಅವರ ಕಾರಿಗೆ ಕಟ್ಟಿದೆ ಎಂದಿದ್ದಾರೆ.

ಆದರೆ, ಸಿಂಗ್ ಮಾಡಿದ ಆರೋಪವನ್ನು ತಹಶೀಲ್ದಾರ್ ಸಿದ್ಧಾರ್ಥ್ ಸಿಂಘಾಲ್ ನಿರಾಕರಿಸಿದ್ದಾರೆ. ಪ್ರಚಾರಕ್ಕಾಗಿ ಹೀಗೆ ಮಾಡಲಾಗುತ್ತಿದೆ ಎಂದಿದ್ದಾರೆ. ಇನ್ನು ಭೂಪೇಂದ್ರ ಸಿಂಗ್ ಈ ಬಗ್ಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರಿಗೂ ಮನವಿ ಸಲ್ಲಿಸಿದ್ದಾರೆ.
ಈ ಹಿಂದೆ ಲಂಚ ಕೇಳಿದ್ದ ಅಧಿಕಾರಿಯ ಕಾರಿಗೆ ಮಧ್ಯಪ್ರದೇಶದ ಮತ್ತೊಬ್ಬ ರೈತರು ಸಹ ಇದೇ ರೀತಿ ಎಮ್ಮೆ ಕಟ್ಟಿ ಹಾಕಿದ್ದರು.












Click it and Unblock the Notifications